ಬೈಕ್‌ ಟ್ಯಾಕ್ಸಿ ಸೇವೆಗೆ ವಿಧಿಸಿರುವ ನಿರ್ಬಂಧಕ್ಕೆ ತಡೆ ನೀಡಲು ಪರಿಶೀಲನೆ: ಸರ್ಕಾರಕ್ಕೆ ಎಚ್ಚರಿಸಿದ ಹೈಕೋರ್ಟ್‌

ಕೆಲವು ಟ್ಯಾಕ್ಸಿ ಕಂಪನಿಗಳು ಅನುಮತಿಯಿಲ್ಲದಿದ್ದರೂ ಬೈಕ್‌ ಟ್ಯಾಕ್ಸಿಗಳನ್ನು ಪ್ರಯಾಣಿಕರಿಗಾಗಿ ಬಳಸುತ್ತಿವೆ. ಅಂತಹ ಬೈಕ್‌ ಟ್ಯಾಕ್ಸಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದ ಅಡ್ವೊಕೇಟ್‌ ಜನರಲ್‌.
ಬೈಕ್‌ ಟ್ಯಾಕ್ಸಿ ಸೇವೆಗೆ ವಿಧಿಸಿರುವ ನಿರ್ಬಂಧಕ್ಕೆ ತಡೆ ನೀಡಲು ಪರಿಶೀಲನೆ: ಸರ್ಕಾರಕ್ಕೆ ಎಚ್ಚರಿಸಿದ ಹೈಕೋರ್ಟ್‌
Published on

ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲು ನೀತಿ ರೂಪಿಸುವ ಕುರಿತು ಒಂದು ತಿಂಗಳು ಸಮಯಾವಕಾಶ ನೀಡಿದ್ದರೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ, ಬೈಕ್‌ ಟ್ಯಾಕ್ಸಿ ಸೇವೆಗೆ ವಿಧಿಸಿರುವ ನಿರ್ಬಂಧಕ್ಕೆ ತಡೆ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ನ್ಯಾಯಾಲಯ ಹೇಳಿದೆ.

ಉಬರ್‌ ಇಂಡಿಯಾ, ರ‍್ಯಾಪಿಡೊ, ಓಲಾ, ಉಬರ್ ಸೇರಿದಂತೆ ಹಲವು ಅಗ್ರಿಗೇಟರ್‌ ಸಂಸ್ಥೆಗಳು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ರಾಜ್ಯದಲ್ಲಿ ಪ್ರಯಾಣಿಕರು ಬಳಸಲು ಬೈಕ್‌ ಟ್ಯಾಕ್ಸಿಗೆ ಸರ್ಕಾರ ಅನುಮತಿ ನೀಡಿಲ್ಲ. ಬೈಕ್‌ ಗಳನ್ನು ಡೆಲಿವರಿಗಾಗಿ ಬಳಸಲು ಮಾತ್ರ ಅವಕಾಶ ನೀಡಲಾಗಿದೆ. ಡೆಲಿವರಿಗಾಗಿ ಟ್ಯಾಕ್ಸಿ ಎಂದು ನೋಂದಣಿ ಮಾಡಿಸುವ ಅಗತ್ಯವಿಲ್ಲ. ಬೈಕ್‌ಗಳನ್ನು ಡೆಲಿವರಿಗೆ ಬಳಸುವವರಿಗೆ ನೀತಿ ರೂಪಿಸಿದ್ದೇವೆ. ಬೈಕ್‌ನಲ್ಲಿ ಪ್ರಯಾಣಿಕರನ್ವು ಕರೆದೊಯ್ಯಲು ಅವಕಾಶವಿಲ್ಲ” ಎಂದು ಪೀಠಕ್ಕೆ ತಿಳಿಸಿದರು.

“ಆದರೆ ಕೆಲವು ಟ್ಯಾಕ್ಸಿ ಕಂಪನಿಗಳು ಅನುಮತಿಯಿಲ್ಲದಿದ್ದರೂ ಬೈಕ್‌ ಟ್ಯಾಕ್ಸಿಗಳನ್ನು ಪ್ರಯಾಣಿಕರಿಗಾಗಿ ಬಳಸುತ್ತಿವೆ. ಅಂತಹ ಬೈಕ್‌ ಟ್ಯಾಕ್ಸಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅವಕಾಶ ಮಾಡಿಕೊಡಬೇಕು” ಎಂದು  ಕೋರಿದರು.

“ಆದರೆ ನ್ಯಾಯಾಲಯ ಸರ್ಕಾರದ ವಾದಕ್ಕೆ ಅಸಮಧಾನ ವ್ಯಕ್ತಪಡಿಸಿ “ಬೈಕ್‌ ಟ್ಯಾಕ್ಸಿಗೆ ಅನುಮತಿ ನೀಡುವ ಕುರಿತು ನೀತಿ ರೂಪಿಸಲು ಒಂದು ತಿಂಗಳು ಸಮಯ ನೀಡಿದ್ದರೂ ಸರ್ಕಾರ ನೀತಿ ರೂಪಿಸಿಲ್ಲ. ನ್ಯಾಯಾಲಯ ಸೂಚಿಸಿದ್ದು ಬೈಕ್‌ ಟ್ಯಾಕ್ಸಿ ವಿಚಾರ, ಆದರೆ ಇದೀಗ ನೀವು ಗಿಗ್‌ ಕಾರ್ಮಿಕರ ಬಗ್ಗೆ ಹೇಳುತ್ತಿದ್ದೀರಾ, ಇದನ್ನು ಒಪ್ಪಲಾಗದು. ನಾವು ಸರ್ಕಾರದ ನಿರ್ಬಂಧಕ್ಕೆ ತಡೆ ನೀಡುವ ಬಗ್ಗೆ ಪರಿಶೀಲಿಸುತ್ತಿದ್ದೇವೆ” ಎಂದು ಹೇಳಿತು.

ಅಲ್ಲದೆ, ಬೈಕ್‌ ಟ್ಯಾಕ್ಸಿ ಬಗ್ಗೆ ನಿಮ್ಮ ವಾದವೇನಿದೆ ಮಂಡಿಸಿ ನಂತರ ಸೂಕ್ತ ಆದೇಶ ಹೊರಡಿಸುವುದಾಗಿ ಹೇಳಿದ ನ್ಯಾಯಾಲಯ ವಿಚಾರಣೆಯನ್ನು ಅಕ್ಟೋಬರ್‌ 15ಕ್ಕೆ ನಿಗದಿಪಡಿಸಿತು.

Also Read
ಬೈಕ್‌ ಟ್ಯಾಕ್ಸಿ ಸೇವೆ ನೀಡುವ ವ್ಯಕ್ತಿಗಳಿಗೆ ಕಿರುಕುಳ ನೀಡಬಾರದು: ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಆಗಸ್ಟ್‌ 22ರಂದು ನ್ಯಾಯಾಲಯವು ಬೈಕ್‌ ಟ್ಯಾಕ್ಸಿ ಸೇವೆ ನೀಡುವ ವ್ಯಕ್ತಿಗಳಿಗೆ ಕಿರುಕುಳ ನೀಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿತ್ತು. “ಜತೆಗೆ ನ್ಯಾಯಾಲಯ ಯಾವುದೇ ಆದೇಶ ಮಾಡಿಲ್ಲ. ಸರ್ಕಾರ ಏನು ಕ್ರಮ ತೆಗೆದುಕೊಳ್ಳಬೇಕು ಎಂದುಕೊಂಡಿದೆಯೋ ಅದನ್ನು ತೆಗೆದುಕೊಳ್ಳಬಹುದು. ವ್ಯಕ್ತಿಗತ ಬೈಕ್‌ ಟ್ಯಾಕ್ಸಿ ಬಗ್ಗೆ ಯಾವುದೇ ಕ್ರಮಬೇಡ. ಅಗ್ರಿಗೇಟರ್ಸ್‌ಗೆ ಸಂಬಂಧಿಸಿದಂತೆ ನೀವು ನೀತಿ ರೂಪಿಸುವುದನ್ನು ಪರಿಗಣಿಸಲಾಗುವುದು ಎಂದಿರುವುದರಿಂದ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಈ ವಿಚಾರದಲ್ಲಿಆದೇಶ ಬೇಕೆಂದರೆ ಮಾಡಲಾಗುವುದು. ಆದೇಶ ಬೇಡ ಎಂದು ಮಾಡಿಲ್ಲ. ವ್ಯಕ್ತಿಗತ ಬೈಕ್‌ ಟ್ಯಾಕ್ಸಿ ಚಾಲಕರಿಗೆ ಕಿರುಕುಳ ನೀಡಬೇಡಿ” ಎಂದು ಆದೇಶಿಸಿತ್ತು.

Kannada Bar & Bench
kannada.barandbench.com