ಕೊಲಿಜಿಯಂಗಳಲ್ಲಿ ಸರ್ಕಾರದ ಪ್ರತಿನಿಧಿ ಇರಲಿ: ಸಿಜೆಐಗೆ ಕಾನೂನು ಸಚಿವ ರಿಜಿಜು ಪತ್ರ

ಇಂತಹ ಕ್ರಮದಿಂದಾಗಿ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ಕೈಗೊಳ್ಳುವ ನಿರ್ಧಾರ ಪಾರದರ್ಶಕವಾಗಿರಬಲ್ಲದು ಮತ್ತು ಸಾರ್ವಜನಿಕರಿಗೆ ಉತ್ತರದಾಯಿ ಆಗಬಲ್ಲದು ಎಂದು ಸಚಿವರು ವಿವರಿಸಿದ್ದಾರೆ.
CJI, Supreme Court and Kiren Rijiju
CJI, Supreme Court and Kiren Rijiju

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಕೊಲಿಜಿಯಂಗಳಲ್ಲಿ ಸರ್ಕಾರದ ಪ್ರತಿನಿಧಿಗಳು ಇರಲಿ ಎಂದು ತಿಳಿಸಿ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

ಇಂತಹ ಕ್ರಮದಿಂದಾಗಿ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ಕೈಗೊಳ್ಳುವ ನಿರ್ಧಾರ ಪಾರದರ್ಶಕವಾಗಿರಬಲ್ಲದು ಮತ್ತು ಸಾರ್ವಜನಿಕರಿಗೆ ಉತ್ತರದಾಯಿ ಆಗಬಲ್ಲದು ಎಂದು ಅವರು ತರ್ಕಿಸಿದ್ದಾರೆ.

ಸಾಂವಿಧಾನಿಕ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ನಡು ಸಂಘರ್ಷ ಏರ್ಪಟ್ಟಿರುವ ಮಧ್ಯೆಯೇ ಈ ಪತ್ರ ಬರೆಯಲಾಗಿದೆ.

ಇತ್ತೀಚಿನ ಘಟನಾವಳಿಗಳು

  • ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ತೃಪ್ತಿ ಇಲ್ಲ. ಸುಪ್ರೀಂ ಕೋರ್ಟ್‌ ಅಸಿಂಧುಗೊಳಿಸಿರುವ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಮತ್ತೆ ಅಸ್ತಿತ್ವಕ್ಕೆ ತರಬೇಕು ಎಂದಿದ್ದ ರಿಜಿಜು.

  • ಸ್ವತಃ ಸರ್ಕಾರ ಮಾಡಿದ ವರದಿಗಳು ಮತ್ತು ಇತರ ಮಾಹಿತಿಗಳು  ನ್ಯಾಯಮೂರ್ತಿಗಳ ಬಳಿ ಇರುವುದಿಲ್ಲವಾದ್ದರಿಂದ ಅವರನ್ನು ಆಯ್ಕೆ ಮಾಡುವಲ್ಲಿ ಸರ್ಕಾರ ವಹಿಸುವ ಪಾತ್ರ ಮಹತ್ವದ್ದಾಗಿದೆ ಎಂದು ರಿಜಿಜು ಸಮರ್ಥಿಸಿಕೊಂಡಿದ್ದರು.

  • ಕೊಲಿಜಿಯಂ ಶಿಫಾರಸು ಮಾಡಿರುವ ಹೆಸರುಗಳನ್ನು ಅನುಮೋದಿಸುವ ಮುನ್ನ ಸೂಕ್ತ ಮುತುವರ್ಜಿ ವಹಿಸದಿದ್ದರೆ ಸಚಿವನಾಗಿ ನಾನು ನನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲನಾಗುತ್ತೇನೆ ಎಂದು ಅವರು ಕೆಲ ದಿನಗಳ ಹಿಂದೆ ಹೇಳಿದ್ದರು.  

  • ಕೊಲಿಜಿಯಂ ಮಾಡಿದ ಶಿಫಾರಸುಗಳನ್ನು ಕೇಂದ್ರ ಒಪ್ಪುತ್ತಿಲ್ಲ ಎಂದು ಆರೋಪಿಸಲು ಸಾಧ್ಯವಿಲ್ಲ ಅಂತೆಯೇ ಸರ್ಕಾರ ಮಾಡಿದ ಎಲ್ಲಾ ಶಿಪಾರಸುಗಳಿಗೆ ಕೊಲಿಜಿಯಂ ಸಹಿ ಹಾಕುತ್ತದೆ ಎಂದೇನೂ ಅಲ್ಲ ಎಂದು ಅವರು ಹೇಳಿದ್ದರು.

ಈ ಹಿಂದೆ ನ್ಯಾಯಮೂರ್ತಿಗಳಾದ ಎಸ್‌ ಕೆ ಕೌಲ್ ಮತ್ತು ಅಭಯ್ ಎಸ್ ಓಕಾ ಅವರಿದ್ದ ಸುಪ್ರೀಂ ಕೋರ್ಟ್‌ ಪೀಠ ಇಂತಹ ಟೀಕೆಗಳ ಬಗ್ಗೆ ಮತ್ತು ಕೊಲಿಜಿಯಂ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಕೊಲಿಜಿಯಂ ಮಾಡಿದ ಶಿಫಾರಸುಗಳಿಗೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಬಹುದು. ಆದರೆ ಶಿಫಾರಸು ಮಾಡಲಾದ ಹೆಸರುಗಳನ್ನು ಅದು ತಡೆ ಹಿಡಿಯುವಂತಿಲ್ಲ ಎಂದು ಅದು ಹೇಳಿತ್ತು.  

ವಿವಾದಕ್ಕೆ ಪ್ರತಿಕ್ರಿಯಿಸಿದ್ದ ಸಿಜೆಐ “ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಯಾವುದೇ ಸಂಸ್ಥೆ ನೂರಕ್ಕೆ ನೂರು ಪರಿಪೂರ್ಣವಲ್ಲ ಮತ್ತು ನ್ಯಾಯಮೂರ್ತಿಗಳ ನೇಮಕಕ್ಕೆ ರೂಪಿಸಲಾದ ಕೊಲಿಜಿಯಂ ವ್ಯವಸ್ಥೆಯೊಂದನ್ನೇ ಗುರಿಯಾಗಿಸಲಾಗದು ಎಂದಿದ್ದರು. ಅಲ್ಲದೆ ನ್ಯಾಯಮೂರ್ತಿಗಳು ಸಂವಿಧಾನವನ್ನು ಅನುಷ್ಠಾನಕ್ಕೆ ತರುವ ನಿಷ್ಠಾವಂತ ಸೈನಿಕರು ಎಂದು ಬಣ್ಣಿಸಿದ್ದರು. 

Related Stories

No stories found.
Kannada Bar & Bench
kannada.barandbench.com