ಗೃಹಿಣಿಯರ ಬೆಂಬಲಕ್ಕೆ ನಿಂತ ಸುಪ್ರೀಂ: ಅತ್ತ ತಾರಾಲೋಕದಲ್ಲಿ ಚಕಮಕಿ

ಗೃಹಿಣಿಯರ ದುಡಿಮೆಗೆ ಆರ್ಥಿಕ ಮನ್ನಣೆ ನೀಡಬೇಕೆಂದು ನ್ಯಾಯಾಲಯ ಹೇಳಿದೆ. ಇದೇ ವಿಚಾರ ಸಿನಿ ಜಗತ್ತಿನಲ್ಲಿಯೂ ಸದ್ದು ಮಾಡಿದೆ. ಗೃಹಿಣಿಯರ ಆದಾಯ ನಿಗದಿಪಡಿಸುವ ಕುರಿತಂತೆ ಹಿರಿಯ ನಟ ಕಮಲ್‌ ಹಾಸನ್‌ ಮಾಡಿದ ಟ್ವೀಟ್‌ ನಟಿ ಕಂಗನಾರನ್ನು ಕೆಣಕಿದೆ.
ಗೃಹಿಣಿಯರ ಬೆಂಬಲಕ್ಕೆ ನಿಂತ ಸುಪ್ರೀಂ: ಅತ್ತ ತಾರಾಲೋಕದಲ್ಲಿ ಚಕಮಕಿ

ಗೃಹಿಣಿಯರು ಕುಟುಂಬದ ಆರ್ಥಿಕ ಸ್ಥಿತಿಗೆ ಮತ್ತು ರಾಷ್ಟ್ರದ ಆರ್ಥಿಕತೆಗೆ ಕೊಡುಗೆ ನೀಡುತ್ತಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಒತ್ತಿಹೇಳಿದೆ. ಮೋಟಾರು ಅಪಘಾತ ಪ್ರಕರಣಗಳಿಗೆ ತುತ್ತಾಗುವ ಗೃಹಿಣಿಯರಿಗೆ ಸಂಬಂಧಿಸಿದಂತೆ ಕಲ್ಪನಾತ್ಮಕ ಆದಾಯ ನಿಗದಿಪಡಿಸುವುದು ಸಾಮಾಜಿಕ ಸಮಾನತೆಯತ್ತ ಇಡುವ ಹೆಜ್ಜೆಯಾಗಿದೆ ಎಂಬುದಾಗಿ ಅದು ಅಭಿಪ್ರಾಯಪಟ್ಟಿದೆ.

ಗೃಹಿಣಿಯರಿಗೆ ಕಲ್ಪನಾತ್ಮಕ ಆದಾಯ ನಿರ್ಧರಿಸುವಾಗ, ಅದನ್ನು ನಿರ್ಧರಿಸಲು ಯಾವುದೇ ನಿರ್ದಿಷ್ಟ ಮಾರ್ಗಗಳಿಲ್ಲ ಹೀಗಾಗಿ ಕೇವಲ ಪರಿಹಾರ ನೀಡುವುದೊಂದೇ ಗುರಿಯಾಗಬೇಕು ಎಂದು ಪೀಠ ತಿಳಿಸಿದೆ.

"ಒಬ್ಬ ವ್ಯಕ್ತಿಯು ತನ್ನ ಆತ್ಮೀಯರು ಮತ್ತು ಪ್ರಿಯರಾದವರಿಗೆ ನಿಷ್ಕಾರಣವಾಗಿ ಒದಗಿಸಿದ ಸೇವೆಯ ನಿಜವಾದ ಮೌಲ್ಯವನ್ನು ಮಾಂತ್ರಿಕ ರೂಪದಲ್ಲಿ ಕಂಡುಹಿಡಿಯುವ ಯಾವುದೇ ನಿಖರ ಲೆಕ್ಕಾಚಾರ ಅಥವಾ ಸೂತ್ರ ಇಲ್ಲ. ಆದ್ದರಿಂದ ಅಂತಹ ವಿಷಯಗಳಲ್ಲಿ ವಿತ್ತೀಯ ಪರಿಹಾರವನ್ನು ನೀಡುವ ಉದ್ದೇಶದಿಂದ ಗೃಹಿಣಿಯರು ನೀಡಿದ ಮೌಲ್ಯದ ನಿಜವಾದ ಅಂದಾಜು ಮಾಡುವ ಕಡೆಗೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ನ್ಯಾಯಾಲಯದ ಪ್ರಯತ್ನ ಇರಬೇಕು”
ಸುಪ್ರೀಂ ಕೋರ್ಟ್

ಮುಂದುವರೆದು "... ಗೃಹಿಣಿಯರು ಕೈಗೊಳ್ಳುವ ಬಹುವಿಧದ ಚಟುವಟಿಕೆಗಳನ್ನು ಪರಿಗಣಿಸಿದರೆ, ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಮನೆಯ ಕೆಲಸಕ್ಕೆ ಮೀಸಲಿಡುವ ಸಮಯ ಮತ್ತು ಶ್ರಮದ ಪ್ರಮಾಣವು ಅಚ್ಚರಿಯೇನೂ ಅಲ್ಲ” ಎಂದು ಹೇಳಿದೆ.

Justices S Abdul Nazeer, NV Ramana, Surya Kant
Justices S Abdul Nazeer, NV Ramana, Surya Kant

ಬೈಕ್‌ ಅಪಘಾತದಲ್ಲಿ ಪತ್ನಿಯೊಂದಿಗೆ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಇಬ್ಬರು ಚಿಕ್ಕ ಹೆಣ್ಣುಮಕ್ಕಳು ಮತ್ತು ಆ ವ್ಯಕ್ತಿಯ ವೃದ್ಧ ತಂದೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿ (ಎಂಎಸಿಟಿ) 47 ಲಕ್ಷ ರೂ.ಗಳ ಪರಿಹಾರವನ್ನು ಆದೇಶಿಸಿತ್ತು, ಈ ಮೊತ್ತವನ್ನು ದೆಹಲಿ ಹೈಕೋರ್ಟ್ ರೂ 22 ಲಕ್ಷ ಕ್ಕೆ ಇಳಿಸಿತ್ತು. ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಅಬ್ದುಲ್ ನಜೀರ್ ಮತ್ತು ಸೂರ್ಯ ಕಾಂತ್ ಅವರಿದ್ದ ಪೀಠದ ಎದುರು ಹೈಕೋರ್ಟ್‌ ತೀರ್ಪನ್ನು ಅರ್ಜಿದಾರರು ಪ್ರಶ್ನಿಸಿದ್ದರು.

"ಗೃಹಿಣಿ ಸದಾ ಇಡೀ ಕುಟುಂಬಕ್ಕೆ ಆಹಾರ ಸಿದ್ಧಪಡಿಸುತ್ತಾಳೆ. ದಿನಸಿ ಮತ್ತಿತರ ಮನೆಯ ಅಗತ್ಯಗಳನ್ನು ನಿರ್ವಹಿಸುತ್ತಾಳೆ, ಮನೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಿ ಒಪ್ಪವಾಗಿಟ್ಟುಕೊಳ್ಳುತ್ತಾಳೆ. ಅಲಂಕಾರ, ರಿಪೇರಿ ಮತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಾಳೆ, ಮಕ್ಕಳ ಮತ್ತು ಕುಟುಂಬದ ಯಾವುದೇ ವಯಸ್ಸಾದ ಸದಸ್ಯರ ಅಗತ್ಯತೆಗಳನ್ನು ನೋಡಿಕೊಳ್ಳುತ್ತಾಳೆ, ಮನೆಯ ಆಯವ್ಯಯ ನೋಡಿಕೊಳ್ಳುತ್ತಾಳೆ. ಇನ್ನೂ ಹೆಚ್ಚಿನದನ್ನು ಮಾಡುತ್ತಾಳೆ " ಎಂದು ನ್ಯಾಯಾಲಯ ತಿಳಿಸಿದೆ.

ಗೃಹಿಣಿಯರಿಗೆ ಕಾಲ್ಪನಿಕ ಆದಾಯವನ್ನು ನಿಗದಿಪಡಿಸುವುದು ಬಹಳ ಮುಖ್ಯವಾದ ಉದ್ದೇಶವಾಗಬೇಕಿದೆ ಎಂದು ಕೋರ್ಟ್ ಹೇಳಿದೆ. ಏಕೆಂದರೆ ಗೃಹಿಣಿಯರು "ನಿಜವಾದ ರೀತಿಯಲ್ಲಿ ಕುಟುಂಬದ ಆರ್ಥಿಕ ಸ್ಥಿತಿಗೆ ಮತ್ತು ರಾಷ್ಟ್ರದ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದರೂ ಈ ಅಂಶವನ್ನು ಸಾಂಪ್ರದಾಯಿಕ ಆರ್ಥಿಕ ವಿಶ್ಲೇಷಣೆಗಳಿಂದ ಹೊರಗಿಡಲಾಗಿದೆ” ಎಂದು ಹೇಳಿದೆ. ಇದು "ಸಾಮಾಜಿಕ ಸಮಾನತೆಯ ಸಾಂವಿಧಾನಿಕ ದೃಷ್ಟಿಕೋನದತ್ತ ಇರಿಸುವ ಹೆಜ್ಜೆಯಾಗಿದ್ದು ಎಲ್ಲಾ ವ್ಯಕ್ತಿಗಳಿಗೆ ಜೀವನದ ಘನತೆಯನ್ನು ಖಾತರಿಪಡಿಸುತ್ತದೆ" ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ನಜೀರ್ ಅವರು ನೀಡಿರುವ ತೀರ್ಪಿನಲ್ಲಿ, ಕಲ್ಪನಾತ್ಮಕ ಆದಾಯ ಹೊಂದಿರುವವರಿಗೆ ಯಾವುದೇ ಭವಿಷ್ಯ ಪರಿಗಣಿಸಬೇಕಾಗಿಲ್ಲ ಎಂಬ ವಿಮಾ ಕಂಪನಿಯ ವಾದವನ್ನು ತಪ್ಪು ಎಂದಿರುವ ಪೀಠವು, "ಹಣದುಬ್ಬರ ಪ್ರೇರಿತ ವೇತನ ಹೆಚ್ಚಳದ ಹಿನ್ನೆಲೆಯಲ್ಲಿ ಪರಿಗಣಿಸಿದಾಗ, ಇದು ಕಾನೂನಿನ ಪ್ರಕಾರ ತಪ್ಪು ಮಾತ್ರವೇ ಅಲ್ಲ, ಇದರಲ್ಲಿ ಹುರುಳಿಲ್ಲ“ ಎಂದಿದೆ.

ನ್ಯಾ. ಎನ್ ವಿ ರಮಣ ತಮ್ಮ ಪ್ರತ್ಯೇಕ ಅಭಿಪ್ರಾಯದಲ್ಲಿ, "... ಗೃಹಿಣಿಯರು 'ಕೆಲಸ ಮಾಡುವುದಿಲ್ಲ' ಅಥವಾ ಅವರು ಕುಟುಂಬಕ್ಕೆ ಆರ್ಥಿಕ ಮೌಲ್ಯ ಸೇರಿಸುವುದಿಲ್ಲ ಎಂಬುದು ಒಂದು ಸಮಸ್ಯಾತ್ಮಕ ಕಲ್ಪನೆಯಾಗಿದ್ದು ಹಲವು ವರ್ಷಗಳಿಂದ ಮುಂದುವರೆದುಕೊಂಡು ಬಂದಿರುವ ಅದನ್ನು ತೊಡೆದುಹಾಕಬೇಕು." ಎಂದಿದ್ದಾರೆ.

ಈ ದೃಷ್ಟಿಯಲ್ಲಿ, ಸುಪ್ರೀಂಕೋರ್ಟ್‌ ಮೇಲ್ಮನವಿಗೆ ಭಾಗಶಃ ಅನುಮತಿ ನೀಡಿ ಪರಿಹಾರವನ್ನು ರೂ 33.2 ಲಕ್ಷಕ್ಕೆ ನಿಗದಿಪಡಿಸಿದೆ. ಇದು ದೆಹಲಿ ಹೈಕೋರ್ಟ್ ಅಂಗೀಕರಿಸಿದ 17 ರ ವಯಸ್ಸಿನ ಗಣಕವನ್ನು ಸ್ವೀಕರಿಸಿದೆ.

ನಟ ಕಮಲ್, ರಾಜಕಾರಣಿ ತರೂರ್‌‌ಗೆ ತಿರುಗೇಟು ನೀಡಿದ ಕಂಗನಾ

ಈ ಮಧ್ಯ ಗೃಹಿಣಿಯರಿಗೆ ವೇತನ ಪಾವತಿಸುವ ವಿಚಾರವಾಗಿ ನಟಿ ಕಂಗನಾ ರನೌತ್‌ ಅವರು ಹಿರಿಯ ನಟ ಕಮಲ್‌ ಹಾಸನ್‌ ಮತ್ತು ರಾಜಕಾರಣಿ ಶಶಿ ತರೂರ್‌ ವಿರುದ್ಧ ಟ್ವೀಟ್‌ ದಾಳಿ ನಡೆಸಿದ್ದಾರೆ. ಕಮಲ್‌ ಅವರು ಗೃಹಿಣಿಯರು ಸಮಾಜವನ್ನು, ದೇಶವನ್ನು ನಿರ್ಮಿಸುವಲ್ಲಿ ನೀಡುವ ಮಹತ್ವದ ಕೊಡುಗೆಯ ಹಿನ್ನೆಲೆಯಲ್ಲಿ ವೇತನ ನೀಡುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಇದನ್ನು ತರೂರ್‌ ಬೆಂಬಲಿಸಿ ಪ್ರತಿಕ್ರಿಯಿಸಿದ್ದರು.

ಆದರೆ ಕಂಗನಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಪ್ರೀತಿಯಿಂದ ನಾವು ಲೈಂಗಿಕವಾಗಿ ಕೂಡುವುದಕ್ಕೆ ಬೆಲೆ ನಿಗದಿಪಡಿಸಬೇಡಿ, ನಮ್ಮ ತಾಯ್ತನಕ್ಕೆ ಹಣ ನೀಡಬೇಡಿ, ನಮ್ಮ ಮನೆ ಎಂಬ ಪುಟ್ಟ ಸಾಮ್ರಾಜ್ಯದ ರಾಣಿಯರಾಗಲು ನಮಗೆ ಸಂಬಳ ಅಗತ್ಯವಿಲ್ಲ. ಎಲ್ಲವನ್ನೂ ವ್ಯಾವಹಾರಿಕವಾಗಿ ನೋಡುವುದನ್ನು ನಿಲ್ಲಿಸಿ. ನಿಮ್ಮ ಹೆಣ್ಣಿಗೆ ಶರಣಾಗಿ ಅವಳಿಗೆ ನಿಮ್ಮ ಸರ್ವಸ್ವವೂ ಅಗತ್ಯವಿರುತ್ತದೆ ಕೇವಲ ಪ್ರೀತಿ, ಗೌರವ ಅಥವಾ ಸಂಬಳವಲ್ಲ” ಎಂದಿದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋಧದ ದೊಡ್ಡ ಚರ್ಚೆಯೇ ನಡೆದಿದೆ.

Related Stories

No stories found.
Kannada Bar & Bench
kannada.barandbench.com