
ಪ್ರಾಚೀನ ಭಾರತೀಯ ಕಾನೂನು ಮತ್ತು ತಾತ್ವಿಕ ಸಂಪ್ರದಾಯಗಳನ್ನು ಕಾನೂನು ಶಾಲೆಗಳ ಪಠ್ಯಕ್ರಮದಲ್ಲಿ ಔಪಚಾರಿಕವಾಗಿ ಸೇರಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಈಚೆಗೆ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಸುಪ್ರೀಂ ಕೋರ್ಟ್ 75 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಕಾನೂನು ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತೀಯ ಕಾನೂನಿನ ಹಿಂದಿನ ತಾರ್ಕಿಕತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ವೇದ, ಉಪನಿಷತ್ತು, ಸ್ಮೃತಿಗ, ಮನುಸ್ಮೃತಿ ಮತ್ತು ಅರ್ಥಶಾಸ್ತ್ರಗಳ ಅಧ್ಯಯನ ಅತ್ಯಗತ್ಯ ಎಂದು ಅವರು ಹೇಳಿದರು.
ವೇದಗಳು, ಸ್ಮೃತಿಗಳು, ಅರ್ಥಶಾಸ್ತ್ರ, ಮನುಸ್ಮೃತಿ, ಅಶೋಕನ ಧಮ್ಮಗಳು ಮತ್ತು ಮಹಾಭಾರತ, ರಾಮಾಯಣದ ಮಹಾಕಾವ್ಯಗಳು ಕೇವಲ ಸಾಂಸ್ಕೃತಿಕ ಕೃತಿಗಳಲ್ಲ. ಅವು ನ್ಯಾಯ, ಸಮಾನತೆ, ಆಡಳಿತ, ಶಿಕ್ಷೆ, ಸಮನ್ವಯ ಮತ್ತು ನೈತಿಕ ಕರ್ತವ್ಯದ ಬಗ್ಗೆ ಆಳವಾದ ಚಿಂತನೆಗಳನ್ನು ಒಳಗೊಂಡಿವೆ.
ಭಾರತೀಯ ಕಾನೂನು ತಾರ್ಕಿಕತೆಯ ಬೇರುಗಳನ್ನು ನಾವು ಅರ್ಥಮಾಡಿಕೊಳ್ಳಬೇಕಾದರೆ ಅವುಗಳ ಅಧ್ಯಯನ ಅತ್ಯಗತ್ಯ
ಕಾನೂನು ಶಾಲೆಯ ಪಠ್ಯಕ್ರಮದಲ್ಲಿ 'ಧರ್ಮ ಮತ್ತು ಭಾರತೀಯ ಕಾನೂನು ಚಿಂತನೆ' ಅಥವಾ 'ಭಾರತೀಯ ನ್ಯಾಯಶಾಸ್ತ್ರದ ಅಡಿಪಾಯ' ಎಂಬ ವಿಷಯವನ್ನು ಸೇರಿಸಬೇಕು.
ಭಾರತೀಯ ಪ್ರಾಚೀನ ಪರಿಕಲ್ಪನೆಗಳನ್ನು ಅನ್ವೇಷಿಸುವ ಕನಿಷ್ಠ ಒಂದು ವಿಷಯವಾದರೂ ಪಠ್ಯಕ್ರಮದಲ್ಲಿರಬೇಕು.
ಈ ಪಠ್ಯಕ್ರಮವು ಓದುವಿಕೆಗೆ ಸೀಮಿತವಾಗದೆ ನ್ಯಾಯಕ್ಕೆ ಸಂಬಂಧಿಸಿದ ಭಾರತೀಯ ಶಾಸ್ತ್ರೀಯ ಕಲ್ಪನೆಗಳು ಮತ್ತು ಆಧುನಿಕ ಸಂವಿಧಾನದಲ್ಲಿ ಅವುಗಳ ಬಿಂಬದ ನಂಟನ್ನು ಅಧ್ಯಯನ ಮಾಡಬೇಕು.
ಈ ಬಗೆಯ ವಿಷಯವು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಮತ್ತು ಬೌದ್ಧಿಕ ನೆಲೆಗಟ್ಟನ್ನು ಒದಗಿಸುವುದಲ್ಲದೆ, ವಿಶಿಷ್ಟವಾದ ಭಾರತೀಯ ನ್ಯಾಯಶಾಸ್ತ್ರದ ಕಲ್ಪನೆಯನ್ನು ಕಟ್ಟಿಕೊಡುತ್ತದೆ.
ಸಂವಿಧಾನದ 14ನೇ ವಿಧಿ ಸಮಾನತೆಯ ಎರವಲು ಪಡೆದ ತತ್ವ ಮಾತ್ರವಲ್ಲದೆ, ಪ್ರಾಚೀನ ತತ್ವಶಾಸ್ತ್ರದ ಸಮತ್ವದ ಸಾಕಾರರೂಪವಾಗಿಯೂ ಅರ್ಥಮಾಡಿಕೊಳ್ಳುವಂತಹ ವಕೀಲರು ಮತ್ತು ನ್ಯಾಯಾಧೀಶರ ಪೀಳಿಗೆ ಹುಟ್ಟಿಬರಬೇಕು.
ನಾವು ಪರಿಸರ ಕಾನೂನನ್ನು ಕೇವಲ ಕಾಯಿದೆಗಳ ಮೂಲಕ ಅರ್ಥಮಾಡಿಕೊಳ್ಳದೆ, ವೇದಗಳಲ್ಲಿನ ಪ್ರಕೃತಿಯ ಮೇಲಿನ ಗೌರವದ ಮೂಲಕ ಅರಿಯಬೇಕು.
ಪರ್ಯಾಯ ವ್ಯಾಜ್ಯ ಪರಿಹಾರವನ್ನು ಪಂಚಾಯತ್ ಸಂಪ್ರದಾಯಗಳ ಮುಂದುವರಿಕೆಯಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಸಾಂವಿಧಾನಿಕ ನೈತಿಕತೆಯನ್ನು ಪ್ರಾಚೀನ ರಾಜಧರ್ಮದ ಆಧುನಿಕ ಅಭಿವ್ಯಕ್ತಿಯಾಗಿ ಗ್ರಹಿಸಬೇಕು.
ಸಾಂವಿಧಾನಿಕ ನೈತಿಕತೆಯು ಕಾರ್ಯಾಂಗದ ಅನುಕೂಲತೆಗಿಂತ ಮೇಲುಗೈ ಸಾಧಿಸುವಂತೆ, ರಾಜಕೀಯ ಅನುಕೂಲಕ್ಕಾಗಿ ನ್ಯಾಯವನ್ನು ಬಲಿಕೊಡದಂತೆ ಮತ್ತು ಕಾನೂನು ಆಳ್ವಿಕೆಯನ್ನು ಅಧಿಕಾರದ ಆಳ್ವಿಕೆಗೆ ಇಳಿಸದಂತೆ ನೋಡಿಕೊಳ್ಳುವುದು ನ್ಯಾಯಾಲಯ ಕೆಲಸವಾಗಿದೆ.