
ಪುನರಾವರ್ತಿತ ಅಪರಾಧ ಎಸಗಿರುವ ಬಾಲ ಆರೋಪಿಯೊಬ್ಬ ತನ್ನ ವಯಸ್ಸಿನ ಕಾರಣಕ್ಕೆ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲಾರ ಎಂದು ಸೋಮವಾರ ತಿಳಿಸಿರುವ ಸುಪ್ರೀಂ ಕೋರ್ಟ್ ಆ ಅಪ್ರಾಪ್ತ ಬಾಲ ಆರೋಪಿಗೆ ಜಾಮೀನು ನಿರಾಕರಿಸಿದೆ.
ಅಪ್ರಾಪ್ತ ಆರೋಪಿಯ ವಿರುದ್ಧ ನಾಲ್ಕು ಒಂದೇ ರೀತಿಯ ಪ್ರಕರಣಗಳಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್ ಮಹಾದೇವನ್ ಅವರಿದ್ದ ಪೀಠ “ಈತ ತಿದ್ದಲು ಅಸಾಧ್ಯವಾದವನು! ಸ್ವಲ್ಪವೂ ತಿದ್ದಲು ಸಾಧ್ಯವಿಲ್ಲದವನು!” ಎಂದು ಬೇಸರ ವ್ಯಕ್ತಪಡಿಸಿತು.
"ಅವನ ಕೃತ್ಯದ ಪರಿಣಾಮಗಳನ್ನು ಆತನೇ ಅರ್ಥಮಾಡಿಕೊಳ್ಳಲಿ. ಅಪ್ರಾಪ್ತ ಎಂದು ಹೇಳಿಕೊಂಡು ಅವನು ಜನರನ್ನು ಲೂಟಿ ಮಾಡುತ್ತಲೇ ಇರಲು ಆಗದು. ವಾಸ್ತವವಾಗಿ, ಅವನನ್ನು ಬಾಲ ಆರೋಪಿ ಎಂದು ಪರಿಗಣಿಸಬಾರದಿತ್ತು. ಇವು ಗಂಭೀರ ಅಪರಾಧಗಳು ಮತ್ತು ಪ್ರತಿ ಬಾರಿಯೂ ಅಪ್ರಾಪ್ತ ಆರೋಪಿ ಎಂಬ ಹೆಸರಿನಲ್ಲಿ ಆತ ತಪ್ಪಿಸಿಕೊಂಡಿದ್ದಾನೆ" ಎಂದು ನ್ಯಾಯಾಲಯ ಕಿಡಿಕಾರಿತು.
ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣದಲ್ಲಿ, ಬಾಲ ಆರೋಪಿಗೆ ಈ ಹಿಂದೆ ರಾಜಸ್ಥಾನ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಆದರೆ, ಆತ ಮೂರು ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾನೆ.
"ಅವನು 1 ವರ್ಷ [ಮತ್ತು] 8 ತಿಂಗಳಿನಿಂದ ಬಂಧನದಲ್ಲಿದ್ದಾನೆಂದು ನಮಗೆ ತಿಳಿದಿದೆ. ಅಂತಿಮವಾಗಿ ಬಾಲಾಪರಾಧಿಗಳ ನ್ಯಾಯಾಲಯ ಅವನನ್ನು ತಪ್ಪಿತಸ್ಥ ಎಂದು ಪರಿಗಣಿಸಿದರೆ, ವಿಧಿಸಬಹುದಾದ ಗರಿಷ್ಠ ಶಿಕ್ಷೆ ಮೂರು ವರ್ಷಗಳು. ಆದರೂ, ಅವನ ಪರವಾಗಿ ನಮ್ಮ ವಿವೇಚನಾಧಿಕಾರ ಚಲಾಯಿಸಲು ನಮ್ಮ ಮನಸ್ಸು ಒಪ್ಪುತ್ತಿಲ್ಲ" ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಅಪ್ರಾಪ್ತ ಆರೋಪಿಯ ವಿರುದ್ಧ ಆರೋಪ ನಿಗದಿಯಾಗಿದ್ದು ಸಾಕ್ಷಿಗಳಿಗೆ ಸಮನ್ಸ್ ನೀಡಲಾಗಿದ್ದರೂ ಅವರು ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾಗಿದ್ದಾರೆ ಎನ್ನುವ ಅಂಶವನ್ನು ಇದೇ ವೇಳೆ ನ್ಯಾಯಾಲಯ ಗಮನಿಸಿತು.
ಸಾಕ್ಷಿಗಳು ಹಾಜರಾಗದೆ ಹೋದರೆ ಅದು ಅರ್ಜಿದಾರನ ತ್ವರಿತ ವಿಚಾರಣೆಯ ಹಕ್ಕಿಗೆ ಸಂಬಂಧಪಡುತ್ತದೆ. ಬಾಲ ನ್ಯಾಯ ಮಂಡಳಿಗಳ ಅಧ್ಯಕ್ಷರು ಈ ಬಗ್ಗೆ ಗಮನಹರಿಸಬೇಕು. ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ಹಾಜರುಪಡಿಸಬೇಕು ಎಂದು ಪೀಠ ನುಡಿಯಿತು.
ಅಂತೆಯೇ ತಾನು ಬಾಲ ಆರೋಪಿಗೆ ಜಾಮೀನು ನಿರಾಕರಿಸಿರುವುದನ್ನು ಗಣನೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ತ್ವರಿತ ವಿಚಾರಣೆಯನ್ನು ನಡೆಸಿ ನಾಲ್ಕು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಲು ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತು. ಇದಕ್ಕಾಗಿ ಅಗತ್ಯಬಿದ್ದರೆ ಪ್ರತಿನಿತ್ಯ ವಿಚಾರಣೆ ನಡೆಸಲೂ ಸಹ ಸೂಚಿಸಿತು.