ತಂತ್ರಜ್ಞಾನ ಬಳಸಿ ಪ್ರಕರಣಗಳ ಪಟ್ಟಿ ಮಾಡುವ ಸುಳಿವು ನೀಡಿದ ಸಿಜೆ; ನೂತನ ನ್ಯಾಯಮೂರ್ತಿಗಳಿಗೆ ಎಬಿಬಿ ವತಿಯಿಂದ ಅಭಿನಂದನೆ

ಆಧುನಿಕ ತಂತ್ರಜ್ಞಾನದ ಮುಖಾಂತರ ಪ್ರಕರಣಗಳ ಪೋಸ್ಟಿಂಗ್ ಹಾಗೂ ಲಿಸ್ಟಿಂಗ್ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ ಸಿಜೆ ವರಾಳೆ.
ತಂತ್ರಜ್ಞಾನ ಬಳಸಿ ಪ್ರಕರಣಗಳ ಪಟ್ಟಿ ಮಾಡುವ ಸುಳಿವು ನೀಡಿದ ಸಿಜೆ; ನೂತನ ನ್ಯಾಯಮೂರ್ತಿಗಳಿಗೆ ಎಬಿಬಿ ವತಿಯಿಂದ ಅಭಿನಂದನೆ
Published on

ಕರ್ನಾಟಕ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವ ರಾಮಚಂದ್ರ ಹುದ್ದಾರ ಮತ್ತು ವೆಂಕಟೇಶ ನಾಯಕ್‌ ಅವರು ರಾಜಭವನದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಬೆಂಗಳೂರು ವಕೀಲರ ಸಂಘದ ವತಿಯಿಂದ ಬುಧವಾರ ಹೈಕೋರ್ಟ್‌ನ ವಕೀಲರ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ನ್ಯಾಯಮೂರ್ತಿಗಳನ್ನು ಅಭಿನಂದಿಸಲಾಯಿತು.

ಈ ವೇಳೆ ಮಾತನಾಡಿದ ಮುಖ್ಯ ನ್ಯಾಯಮೂರ್ತಿ (ಸಿಜೆ) ಪ್ರಸನ್ನ ಬಾಲಚಂದ್ರ ವರಾಳೆ ಅವರು “ಬರಲಿರುವ ಬ್ಯಾಟ್ಸಮನ್ (ನ್ಯಾಯಮೂರ್ತಿಗಳನ್ನು ಉದ್ದೇಶಿಸಿ) ಮೇಲೆ ಈಗ ಮಾನಸಿಕವಾಗಿ ಭಾರಿ ಒತ್ತಡ ಇದೆ” ಎಂದು ನುಡಿದರು.

"ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳ ದೊಡ್ಡ ಕುಟುಂಬಕ್ಕೆ ಇವರಿಬ್ಬರ ಸೇರ್ಪಡೆ ಸ್ವಾಗತಾರ್ಹ. ಇಬ್ಬರೂ ತಮ್ಮ ಅವಧಿಯಲ್ಲಿ ಉತ್ತಮ‌ವಾಗಿ ಕಾರ್ಯ ನಿರ್ವಹಿಸಲಿ" ಎಂದು ಆಶಿಸಿದರು.

ರಾಜಭವನದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳಾದ ರಾಮಚಂದ್ರ ಹುದ್ದಾರ್‌ ಮತ್ತು ವೆಂಕಟೇಶ್‌ ನಾಯಕ್‌ ಪ್ರತಿಜ್ಞಾವಿಧಿ ಮಾಡಿದರು.
ರಾಜಭವನದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳಾದ ರಾಮಚಂದ್ರ ಹುದ್ದಾರ್‌ ಮತ್ತು ವೆಂಕಟೇಶ್‌ ನಾಯಕ್‌ ಪ್ರತಿಜ್ಞಾವಿಧಿ ಮಾಡಿದರು.

"ಆಧುನಿಕ ತಂತ್ರಜ್ಞಾನದ ಮುಖಾಂತರ ಪ್ರಕರಣಗಳ ಪೋಸ್ಟಿಂಗ್ ಹಾಗೂ ಲಿಸ್ಟಿಂಗ್ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು" ಎಂದು ಸಿಜೆ ವರಾಳೆ ಅವರು ಇದೇ ವೇಳೆ ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನ್ಯಾ. ರಾಮಚಂದ್ರ ಹುದ್ದಾರ ಅವರು "ವಕೀಲರ ವೃಂದದಲ್ಲಿ ಹಿರಿಯ ವಕೀಲರನ್ನು ಗೌರವಿಸಿ ನಡೆದುಕೊಳ್ಳಬೇಕಾದ ಕಿರಿಯರು ಈ ಪರಂಪರೆಯನ್ನು ಕಡೆಗಣಿಸುತ್ತಿದ್ದಾರೆ" ಎಂದರು. ಅಂತೆಯೇ, "ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಬೇಕು" ಎಂದು ಸಲಹೆ ನೀಡಿದರು.‌ ನ್ಯಾಯಮೂರ್ತಿ ವೆಂಕಟೇಶ ನಾಯಕ್‌ ಅವರು ವಕೀಲ ಸಮುದಾಯಕ್ಕೆ ಧನ್ಯವಾದ ಅರ್ಪಿಸಿದರು.

ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ, ಹೈಕೋರ್ಟ್ ಘಟಕದ ಉಪಾಧ್ಯಕ್ಷ‌ ಟಿ ಬಾಲಕೃಷ್ಣ ಮತ್ತು ಜಂಟಿ ಕಾರ್ಯದರ್ಶಿ ಎನ್ ಚಾಮರಾಜ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Kannada Bar & Bench
kannada.barandbench.com