ಆರೋಗ್ಯ ಕವಚ ಆಂಬುಲೆನ್ಸ್‌ಗಳ ಕಾರ್ಯಾಚರಣೆ ಮೂರು ಪಾಳಿಗೆ ಹೆಚ್ಚಳ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್
ಆರೋಗ್ಯ ಕವಚ 108 ಆಂಬುಲೆನ್ಸ್‌ಗಳ ಕಾರ್ಯಾಚರಣೆಯನ್ನು ಎರಡರ ಬದಲು ಮೂರು ಪಾಳಿಗೆ (ಶಿಫ್ಟ್) ಹೆಚ್ಚಿಸಿರುವುದಕ್ಕೆ ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿಗೊಳಿಸಿದೆ.
ಆರೋಗ್ಯ ಕವಚ-108 ನೌಕರರ ಪರವಾಗಿ ಅಖಿಲ ಕರ್ನಾಟಕ 108 ಆಂಬುಲೆನ್ಸ್ ನೌಕರರ ಹಿತರಕ್ಷಣಾ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಕವಚ (108) ಆಂಬುಲೆನ್ಸ್ ನೌಕರರ ಸಂಘ, ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ಆಂಬುಲೆನ್ಸ್ ನೌಕರರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಅವರ ಏಕಸದಸ್ಯ ಪೀಠ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೇ, 108 ಆಂಬುಲೆನ್ಸ್ ಸೇವೆ ಒದಗಿಸುವ ಖಾಸಗಿ ಸಂಸ್ಥೆ ಜಿವಿಕೆ-ಇಎಂಆರ್‌ಐ ಕಂಪನಿಗೆ ತುರ್ತು ನೋಟಿಸ್ ಜಾರಿಗೊಳಿ ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು. ಅರ್ಜಿದಾರರ ಪರ ಹಿರಿಯ ವಕೀಲೆ ಎಸ್. ಸುಶೀಲಾ ವಾದ ಮಂಡಿಸಿದರು.
ಆರೋಗ್ಯ ಕವಚ-108 ಆಂಬುಲೆನ್ಸ್ ಸೇವೆಯ 2008ರ ಮೂಲ ಒಡಂಬಡಿಕೆ ಪ್ರಕಾರ ದಿನಕ್ಕೆ ಎರಡು ಪಾಳಿ ಇತ್ತು. ಈಗ ಮೂರು ಪಾಳಿ ನಿಗದಿಪಡಿಸಿ 2024ರ ಡಿಸೆಂಬರ್ 31ಕ್ಕೆ ಆರೋಗ್ಯ ಇಲಾಖೆ ಜ್ಞಾಪನಾ ಪತ್ರ ಹೊರಡಿಸಿದೆ. ಮೊದಲ ಪಾಳಿ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ, 2ನೇ ಪಾಳಿ ಮಧ್ಯಾಹ್ನ 2ರಿಂದ ರಾತ್ರಿ 10 ಹಾಗೂ ಮೂರನೇ ಪಾಳಿ ರಾತ್ರಿ 10ರಿಂದ ಬೆಳಿಗ್ಗೆ 6ಕ್ಕೆ ನಿಗದಿಪಡಿಸಲಾಗಿದೆ. ಈ ಸಮಯ ಅವೈಜ್ಞಾನಿಕವಾಗಿದೆ. ನಗರ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಬಹುತೇಕ ಸಿಬ್ಬಂದಿ ಗ್ರಾಮೀಣ ಭಾಗದಲ್ಲಿ ವಾಸ ಮಾಡುತ್ತಾರೆ. 400ಕ್ಕೂ ಅಧಿಕ ಮಹಿಳಾ ಸಿಬ್ಬಂದಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಬದಲಾಗಿರುವ ಪಾಳಿ ಸಮಯ ಅನುಕೂಲಕರವಾಗಿಲ್ಲ. ಅಲ್ಲದೇ ಕಾರ್ಯನಿರ್ವಹಣೆಗೆ ವಲಯವಾರು ವರ್ಗೀಕರಣ ಮಾಡಿರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಆದ್ದರಿಂದ, ಎರಡರ ಬದಲು ಮೂರು ಪಾಳಿ ನಿಗದಿಪಡಿಸಿ 2024ರ ಡಿಸೆಂಬರ್ 31ರಂದು ಹೊರಡಿಸಲಾದ ಜ್ಞಾಪನಾ ಪತ್ರ ರದ್ದುಪಡಿಸಬೇಕು. ಅಲ್ಲದೇ, ಅರ್ಜಿ ಇತ್ಯರ್ಥ ಆಗುವ ತನಕ ಈ ಜ್ಞಾಪನಾ ಪತ್ರಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.