ಸ್ವಾತಂತ್ರ್ಯೋತ್ಸವ: ಸಾಂವಿಧಾನಿಕ ಮೌಲ್ಯಗಳ ಸಾಕಾರದ ಬಗ್ಗೆ ಆತ್ಮವಿಮರ್ಶೆ ಅಗತ್ಯ: ನ್ಯಾ. ಡಿ ವೈ ಚಂದ್ರಚೂಡ್

ಪತ್ರಕರ್ತರು ಪ್ರತೀಕಾರದ ಬೆದರಿಕೆಗೆ ಕುಗ್ಗದೆ ಅಧಿಕಾರದಲ್ಲಿರುವವರೆಗೆ ಸತ್ಯ ಹೇಳುತ್ತಿರುವವರೆಗೂ ಭಾರತದ ಸ್ವಾತಂತ್ರ್ಯ ಸುರಕ್ಷಿತ ಎಂದು ಸುಪ್ರೀಂ ಕೋರ್ಟ್ ಹೇಳಿರುವುದಾಗಿ ನ್ಯಾಯಮೂರ್ತಿಗಳು ತಮ್ಮ ಭಾಷಣದಲ್ಲಿ ತಿಳಿಸಿದರು.
Justice DY Chandrachud
Justice DY Chandrachud

ಭಾರತದ 75 ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ನಾವು ಸಾಂವಿಧಾನಿಕ ಆದರ್ಶಗಳನ್ನು ಹೇಗೆ ಮುಂದುವರೆಸಿದ್ದೇವೆ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಇತ್ತೀಚೆಗೆ ಕರೆ ನೀಡಿದರು.

ಸ್ವಾತಂತ್ರ್ಯ ದಿನ ಎಂಬುದು ಸ್ವಾತಂತ್ರ್ಯ ಹೋರಾಟದ ಬಗೆಗಿನ ನಿಮಿತ್ತ ಮಾತ್ರದ ಆಚರಣೆಯಾಗಬಾರದು. ಬದಲಿಗೆ ನಮ್ಮ ಸಂವಿಧಾನ ಶಿಲ್ಪಿಗಳು, ಪುರುಷರು ಮಹಿಳೆಯರಿಬ್ಬರೂ, ಯಾವ ಸಾಂವಿಧಾನಿಕ ಮೌಲ್ಯಗಳನ್ನು ಈಡೇರಿಸಲು ಬಯಸಿದರೋ ಆ ಹಾದಿಯ ಪ್ರಗತಿಯ ನಿರ್ಣಾಯಕ ಆತ್ಮಾವಲೋಕನದ ಸಂದರ್ಭವಾಗಬೇಕು” ಎಂದು ಅವರು ಹೇಳಿದರು.

ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದ ಹನ್ನೊಂದನೇ ಘಟಿಕೋತ್ಸವ ಸಮಾರಂಭ ಮತ್ತು ಸಂಸ್ಥಾಪಕರ ದಿನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನ್ಯಾ. ಚಂದ್ರಚೂಡ್‌ ಭಾಷಣದ ಪ್ರಮುಖ ವಿಚಾರಗಳು

 • ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ನಮ್ಮ ದೇಶದಲ್ಲಿ ಅನೇಕ ವ್ಯಕ್ತಿಗಳು ಮತ್ತು ಸಮುದಾಯಗಳು ನಾವು ಉತ್ತರಾಧಿಕಾರಿಗಳಾಗಿರುವ ಪ್ರಜಾಪ್ರಭುತ್ವದ ಫಲವನ್ನು ಪರಿಣಾಮಕಾರಿಯಾಗಿ ಸವಿಯಲು ಸಾಧ್ಯವಾಗಿಲ್ಲ

 • ನಮ್ಮ ಶ್ರೇಣೀಕೃತ ಸಾಮಾಜಿಕ ಮತ್ತು ಆರ್ಥಿಕ ರಚನೆಗಳಿಂದಾಗಿ, ಅನೇಕರು ಇನ್ನೂ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಮಾನತೆಯಿಂದ ವಂಚಿತರಾಗಿದ್ದಾರೆ. ಸಾಮಾಜಿಕ ಪ್ರಜಾಪ್ರಭುತ್ವದಿಂದ ಬಲ ದೊರೆಯದೇ ಇರುವವರೆ ನಮ್ಮ ರಾಜಕೀಯ ಪ್ರಜಾಪ್ರಭುತ್ವದ ರಚನೆಗಳು ಅನಿಶ್ಚಿತವಾಗಿರುತ್ತವೆ ಎಂದು ಡಾ. ಬಾಬಾಸಾಹೇಬ್‌ ಭೀಮರಾವ್‌ ಅಂಬೇಡ್ಕರ್‌ ಎಚ್ಚರಿಸಿದ್ದರು.

 • ಸ್ವಾತಂತ್ರ್ಯವನ್ನು ಪರಿಣಾಮಕಾರಿಯಾಗಿ ಚಲಾಯಿಸಲು ಮತ್ತು ಸಾರ್ವಜನಿಕ ಜೀವನದಲ್ಲಿ ಭಾಗಿಯಾಗಲು ಮಹಿಳೆಗೆ ಅವಕಾಶ ದೊರೆತಿದೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

 • (ಅವಿವಾಹಿತ ಮಹಿಳೆಗೆ ಗರ್ಭಧಾರಣೆ ನಿರಾಕರಿಸಿದ ಇತ್ತೀಚಿನ ಸುಪ್ರೀಂ ಕೋರ್ಟ್‌ ತೀರ್ಪನ್ನು ಪ್ರಸ್ತಾಪಿಸುತ್ತಾ) ನಾವು ನಮ್ಮ ಮಧ್ಯಂತರ ಆದೇಶದಲ್ಲಿ ಸಂಸತ್ತಿನ ಶಾಸಕಾಂಗ ಉದ್ದೇಶವನ್ನು ಪರಿಗಣಿಸಿದ್ದು ಸುರಕ್ಷಿತವಾಗಿ ಗರ್ಭಾವಸ್ಥೆ ಅಂತ್ಯಗೊಳಿಸುವ ಹಕ್ಕನ್ನು ಎತ್ತಿ ಹಿಡಿಯುವ ಕಾಯಿದೆಯ ನಿಯಮಾವಳಿಗಳನ್ನು ಉದ್ದೇಶಪೂರ್ವಕವಾಗಿ ಅರ್ಥೈಸಿದ್ದೇವೆ.

 • ಆದರೂ ಭಾರತದೆಲ್ಲೆಡೆ ಅನೇಕ ಮಹಿಳೆಯರು ಇಂತಹ ಸಾಮಾಜಿಕ ಅಥವಾ ಕಾನೂನು ನೆರವು ಇಲ್ಲದೆ ಇದೇ ರೀತಿಯ ಪರಿಸ್ಥಿತಿ ಎದುರಿಸುತ್ತಾರೆ.

 • ಭಾರತದಾದ್ಯಂತ ಅಂತಹ ಅನೇಕ ಮಹಿಳೆಯರು ಸಾಮಾಜಿಕ ಅಥವಾ ಕಾನೂನು ಸಹಾಯದ ಪ್ರವೇಶವಿಲ್ಲದೆ ಇದೇ ರೀತಿಯ ಪರಿಸ್ಥಿತಿಗಳಲ್ಲಿ ತಮ್ಮನ್ನು ಕಂಡುಕೊಳ್ಳುತ್ತಾರೆ. ಮಹಿಳೆಯರು ಪ್ರಾಪಂಚಿಕ ಆಯ್ಕೆಗಳನ್ನು ಆಯ್ದುಕೊಳ್ಳು ಅವಕಾಶವಿದ್ದರೂ ಅಂತಹ ಆಯ್ಕೆ ಪ್ರಕ್ರಿಯೆ ಪ್ರಾಪಂಚಿಕ ಪೂರ್ವಾಪೇಕ್ಷೆಗಳ ಮೇಲೆ ಅವಲಂಬಿತವಾಗಿರುತ್ತದೆ

 • ಔಪಚಾರಿಕವಾಗಿ ಕಾನೂನುಗಳು ಅವಕಾಶಗಳನ್ನು ಸಮಾನವಾಗಿ ಒದಗಿಸುತ್ತವೆ. ಆದರೆ ವಾಸ್ತವದಲ್ಲಿ ನಾವು ಅಸಮಪಾರ್ಶ್ವದ ಲೋಕದಲ್ಲಿ ವಾಸಿಸುತ್ತಿದ್ದು ಇಲ್ಲಿ ಅವಕಾಶಗಳನ್ನು ಅಸಮಾನವಾಗಿ ಹಂಚಲಾಗಿದೆ. ಆದ್ದರಿಂದ ಸಾಮಾಜಿಕ ನ್ಯಾಯದ ಅನ್ವೇಷಣೆಯಲ್ಲಿ ಅದರಲ್ಲಿಯೂ ಸಮಾಜದ ಅಂಚಿನಲ್ಲಿರುವವರಿಗೆ ನಾವು ಸಮಾನ ಅವಕಾಶ ಒದಗಿಸಲು ಶ್ರಮಿಸಬೇಕು.

 • ಸಾಮಾಜಿಕ ಪ್ರಜಾಪ್ರಭುತ್ವ ಬೆಳೆಸುವ ಜವಾಬ್ದಾರಿ ಸರ್ಕಾರ ಅಥವಾ ನ್ಯಾಯಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಸಂವಿಧಾನವನ್ನು ಆದರ್ಶಗಳ ಗ್ರಂಥದಿಂದ ವಾಸ್ತವಕ್ಕೆ ಪರಿವರ್ತಿಸುವ, ನಿಧಾನವಾದರೂ ಪ್ರಮುಖವಾದ ಈ ಕಾರ್ಯದಲ್ಲಿ ಪ್ರತಿಯೊಬ್ಬ ನಾಗರಿಕನೂ ಭಾಗವಹಿಸಬೇಕಿದೆ.

 • ಪತ್ರಕರ್ತರು ಪ್ರತೀಕಾರದ ಬೆದರಿಕೆಗೆ ಕುಗ್ಗದೆ ಅಧಿಕಾರದಲ್ಲಿರುವವರೆಗೆ ಸತ್ಯ ಹೇಳುತ್ತಿರುವವರೆಗೂ ಭಾರತದ ಸ್ವಾತಂತ್ರ್ಯ ಸುರಕ್ಷಿತ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಸುಳ್ಳು ಸುದ್ದಿ ಹಾಗೂ ಮಾಹಿತಿಯ ಯುಗದಲ್ಲಿ, ನಮ್ಮ ಸಮಾಜದಲ್ಲಿ ಕಾಣದೇ ಇರುವ ವಿಷಯಗಳನ್ನು ದಾಖಲಿಸಲು ಮತ್ತು ಕರಾಳ ಸಂಗತಿಗಳನ್ನು ಬಹಿರಂಗಪಡಿಸಲು ನಮಗೆ ಎಂದಿಗಿಂತಲೂ ಹೆಚ್ಚು ಪತ್ರಕರ್ತರ ಅಗತ್ಯವಿದೆ

 • ಉದ್ಯಮ ವ್ಯವಹಾರ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವವರು ಮಹಿಳೆಯರು ಮತ್ತು ಅವಕಾಶ ವಂಚಿತರಿಗೆ ಆಯಕಟ್ಟಿನ ಸ್ಥಾನ ಒದಗಿಸಲು ಮುಂದಾಗಬೇಕು.

 • ಮುಕ್ತ ಮಾರುಕಟ್ಟೆ ಆರ್ಥಿಕತೆಯು ಎಲ್ಲರಿಗೂ ಅವಕಾಶಗಳನ್ನು ಹೆಚ್ಚಿಸಿದೆಯಾದರೂ, ಇದು ಹಿಂದುಳಿದವರಿಗೆ ಅನನುಕೂಲವಾದ ಅರ್ಹತೆಯ ಮಿಥ್ಯೆ ಸೃಷ್ಟಿಸಿದೆ.

 • ಸ್ವಾತಂತ್ರ್ಯವು ಕೇವಲ ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತಿ ನೀಡಲಿಲ್ಲ ಬದಲಿಗೆ ನಮ್ಮ ಸಮಾಜ ಸಾಧಿಸಲು ಉದ್ದೇಶದ ಸಾಮಾಜಿಕ ಪರಿವರ್ತನೆಯ ಧಾರೆಯಾಗಿದೆ.

Related Stories

No stories found.
Kannada Bar & Bench
kannada.barandbench.com