ಭಾರತವು ಜೀವ ಉಳಿಸುವ ಔಷಧಗಳ ತಯಾರಿಕೆಗೆ ಅಗತ್ಯವಾದ ಮಿಶ್ರಣಾಂಶಗಳಿಗೆ “ಶತ್ರು ರಾಷ್ಟ್ರ”ವಾದ ಚೀನಾವನ್ನು ಅಗಾಧವಾಗಿ ಅವಲಂಬಿಸಿರುವುದಕ್ಕೆ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎನ್ ಕಿರುಬಾಕರನ್ ಕಳವಳ ವ್ಯಕ್ತಪಡಿಸಿದ್ದಾರೆ (ವಿನ್ಕೆಮ್ ಲ್ಯಾಬ್ಸ್ ಲಿಮಿಟೆಡ್ ವರ್ಸಸ್ ಭಾರತ ಸರ್ಕಾರ ಮತ್ತು ಇತರರು).
ಚೆನ್ನೈ ಮೂಲದ ವಿನ್ಕೆಮ್ ಲ್ಯಾಬ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇತ್ತೀಚೆಗೆ ಪೀಠ ಕೈಗೊಂಡಿತ್ತು. ತನಗೆ ಬ್ಯಾಂಕುಗಳು ಹಣಕಾಸು ನೆರವು ನೀಡಲು ಹಿಂದೇಟು ಹಾಕುತ್ತಿರುವುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ತಮ್ಮ ದೂರನ್ನು ವಿವರಿಸಿ ಮನವಿ ಸಲ್ಲಿಸಿದ್ದರು.
ಭಾರತವು ಚೀನಾದ ಔಷಧಿಗಳನ್ನು ಆಮದು ಮಾಡಿಕೊಳ್ಳುವುದಿಲ್ಲ. ಆದರೆ ಅದು ಔಷಧಿಗೆ ಅಗತ್ಯವಾದ ಸಕ್ರಿಯ ಮಿಶ್ರಣಗಳನ್ನು ಆಮದು ಮಾಡಿಕೊಳ್ಳುತ್ತದೆ. ಇದನ್ನು “ಸಕ್ರಿಯ ಔಷಧ ಮಿಶ್ರಣ” (ಎಪಿಐ) ಅಥವಾ ಸಗಟು ಔಷಧ ಎನ್ನಲಾಗುತ್ತದೆ. ಇದನ್ನು ಬಳಸಿ ಸ್ಥಳೀಯ ಮತ್ತು ರಫ್ತಿಗೆ ಬೇಕಾದ ಔಷಧಗಳನ್ನು ತಯಾರಿಸಲಾಗುತ್ತದೆ ಎಂದು ನ್ಯಾಯಮೂರ್ತಿ ಕಿರುಬಾಕರನ್ ವಿಚಾರಣೆ ವೇಳೆ ವಿವರಿಸಿದರು.
“ಹಲವು ದಶಕಗಳಿಂದ ನಿರ್ಮಿಸಲಾಗಿರುವ ಭಾರತದ ಎಪಿಐ ಕ್ಷೇತ್ರಕ್ಕೆ ಚೀನಾದ ಕಳಪೆ ಎಪಿಐ ಆಮದಿನ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಚೀನಾದವರು ತಮ್ಮ ಎಪಿಐ ಅನ್ನು ಭಾರತದಲ್ಲಿನ ತಯಾರಿಕಾ ವೆಚ್ಚದ ನಾಲ್ಕನೇ ಒಂದು ಭಾಗಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ಪರಿಣಾಮದಿಂದ ಒಂದು ಕಾಲದಲ್ಲಿ ಎಪಿಐ ಉತ್ಪಾದನೆಯಲ್ಲಿ ಶೇ. 99.7ರಷ್ಟು ಸ್ವಾಲಂಬಿಯಾಗಿದ್ದ ಭಾರತವು ಈಗ ಚೀನಾದಿಂದ ಶೇ. 90ರಷ್ಟು ಎಪಿಐ ಆಮದು ಮಾಡಿಕೊಳ್ಳುತ್ತಿದೆ. ಭಾರತಕ್ಕೆ ಎಪಿಐ ಆಮದಿನಿಂದ ದೊರೆತಿರುವ ಆರ್ಥಿಕ ಅನುಕೂಲವು ವೈಜ್ಞಾನಿಕ ಮಹತ್ವ ಕುಸಿಯುವಂತೆ ಹಾಗೂ ಸ್ವಾವಲಂಬನೆಗ ಧಕ್ಕೆಯಾಗುವಂತೆ ಮಾಡಿದೆ. ಈಗ ಭಾರತವು ಕೇವಲ ಅಂತಿಮಗೊಳಿಸಿದ ಔಷಧ ತಾಣವಾಗಿ ಹೊರಹೊಮ್ಮುತ್ತಿದ್ದು, ಎಪಿಐ ಅನ್ನು ಅಲ್ಲಿಂದ ಆಮದು ಮಾಡಿಕೊಂಡು ಔಷಧ ಸಿದ್ಧಪಡಿಸುತ್ತಿದೆ. ಈ ರೀತಿ ದೇಶಿಯ ಕ್ಷೇತ್ರವನ್ನು ತೊರೆದ ಪರಿಣಾಮ ನಮ್ಮ ದೇಶದ ರೋಗಿಗಳು ಜೀವರಕ್ಷಕ ಔಷಧಿಗಳೂ ಸೇರಿದಂತೆ ಇತರ ಔಷಧಿಗಳಿಗೆ ಬದಲಾಗಿ ನಕಲಿ ಹಾಗೂ ಕಳಪೆ ಗುಣಮಟ್ಟದ ಔಷಧಿಗಳನ್ನು ಸೇವಿಸುವಂತಾಗಿದೆ. ಒಂದೇ ರಾಷ್ಟ್ರದ ಮೇಲೆ ಅಗಾಧ ಆಮದು ಅವಲಂಬನೆ ಹೊಂದುವುದರಿಂದ ರಾಷ್ಟ್ರೀಯ ಭದ್ರತೆಯ ಮೇಲಾಗುವ ಅಪಾಯದ ಕುರಿತು ಒಂದು ಹಂತದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರೂ ಸರ್ಕಾರವನ್ನು ಎಚ್ಚರಿಸಿದ್ದಾರೆ” ಎಂದು ನ್ಯಾಯಪೀಠ ನೆನಪಿಸಿದೆ.