ಆಧುನಿಕತೆಗೂ ಮೊದಲೇ ಭಾರತದಲ್ಲಿ ದೇಶೀಯ ನ್ಯಾಯ ವ್ಯವಸ್ಥೆ ಇತ್ತು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬೊಬ್ಡೆ

ಕರ್ನಾಟಕ ಹೈಕೋರ್ಟ್ ಆಯೋಜಿಸಿದ್ದ 'ಕೋರ್ಟ್ಸ್ ಆಫ್ ಇಂಡಿಯಾ: ಪಾಸ್ಟ್ ಟು ಪ್ರೆಸೆಂಟ್' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕತೆಗೂ ಮೊದಲೇ ಭಾರತದಲ್ಲಿ ದೇಶೀಯ ನ್ಯಾಯ ವ್ಯವಸ್ಥೆ ಇತ್ತು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬೊಬ್ಡೆ

ಐರೋಪ್ಯ ವಸಾಹತುಶಾಹಿ ಆಡಳಿತ ಭಾರತಕ್ಕೆ ಆಗಮಿಸಿ ಆಧುನಿಕ ಕಾನೂನು ಅಭಿವೃದ್ಧಿ ರೂಪುಗೊಳ್ಳುವ ಮೊದಲೇ ದೇಶೀಯವಾದ ಮತ್ತು ಮೊದಲಿನಿಂದ ಅಸ್ತಿತ್ವದಲ್ಲಿದ್ದ ಕಾನೂನು ವ್ಯವಸ್ಥೆಯನ್ನು ಭಾರತ ಹೊಂದಿತ್ತು ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಶರದ್‌ ಅರವಿಂದ್‌ ಬೊಬ್ಡೆ ತಿಳಿಸಿದರು.

ಕರ್ನಾಟಕ ಹೈಕೋರ್ಟ್‌ ಭಾನುವಾರ ಆಯೋಜಿಸಿದ್ದ 'ಕೋರ್ಟ್ಸ್ ಆಫ್ ಇಂಡಿಯಾ: ಪಾಸ್ಟ್ ಟು ಪ್ರೆಸೆಂಟ್' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪುಸ್ತಕದ ಕನ್ನಡ ಅವತರಣಿಕೆಯು “ಭಾರತದ ನ್ಯಾಯ ದೇಗುಲಗಳು: ಅಂದಿನಿಂದ ಇಂದಿನವರೆಗೆ” ಎನ್ನುವ ಶೀರ್ಷಿಕೆ ಹೊಂದಿದೆ. ಪ್ರೊ. ಮೀನಾ ದೇಶಪಾಂಡೆ ಮತ್ತವರ ಭಾಷಂತರಕಾರರ ತಂಡ ಕೃತಿಯನ್ನು ಅನುವಾದಿಸಿದೆ. ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರ ನೇತೃತ್ವದಲ್ಲಿ ಪುಸ್ತಕ ಪ್ರಕಟಣಾ ಕಾರ್ಯ ನಡೆದಿತ್ತು.

ವಿವಿಧ ಸಂಸ್ಕೃತಿಗಳೊಡನೆ ದೇಶ ಮುಖಾಮುಖಿಯಾಗಿದ್ದು ಬಹುತ್ವದ ಮತ್ತು ಸಂಯೋಜಿತ ನ್ಯಾಯ ವಿತರಣಾ ವ್ಯವಸ್ಥೆಗೆ ಕಾರಣವಾಯಿತು ಎಂದು ಪುಸ್ತಕ ಬಿಡುಗಡೆ ವೇಳೆ ಸಿಜೆಐ ಬೊಬ್ಡೆ ಅವರು ಹೇಳಿದರು. "ಆಧುನಿಕತೆಯ ಅಭಿವೃದ್ಧಿಗೂ ಮುಂಚೆಯೇ ಹಾಗೂ ಪೋರ್ಚುಗೀಸರು, ಫ್ರೆಂಚರು ಮತ್ತು ಇಂಗ್ಲಿಷರು ಬರುವ ಬಹಳ ಮೊದಲೇ ಭಾರತದಲ್ಲಿ ದೇಶೀಯವಾದಂತಹ ಹಾಗೂ ಪೂರ್ವಾಸ್ತಿತ್ವದಲ್ಲಿದ್ದ ಕಾನೂನು ಹಾಗೂ ವ್ಯಾಜ್ಯ ಪರಿಹಾರ ವ್ಯವಸ್ಥೆ ಇತ್ತು. ಅನೇಕ ಮುಖಾಮುಖಿಗಳು, ಕೊಳ್ಳು, ಕೊಡುಗೆಗಳಿಂದಾಗಿ ಭಾರತ ಇಂದು ಬಹುತ್ವದ ಮತ್ತು ವಿವಿಧತೆಯ ಹಾಗೂ ಆತ್ಯಂತಿಕವಾಗಿ ಸಂಯೋಜಿತ ನ್ಯಾಯದಾನ ವ್ಯವಸ್ಥೆಯ ನೆಲವಾಗಿ ಮಾರ್ಪಟ್ಟಿದೆ” ಎಂದು ಅವರು ವಿವರಿಸಿದರು.

Also Read
ರಾಜ್ಯದ ನ್ಯಾಯಾಲಯ ಇತಿಹಾಸ ಕುರಿತು ಗ್ರಂಥ ಹೊರತರಲಿರುವ ಕರ್ನಾಟಕ ಹೈಕೋರ್ಟ್: ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ

ಮುಂದುವರೆದು, “ಪುಸ್ತಕ ಪರೋಕ್ಷವಾಗಿ, ಎಲ್ಲ ಪ್ರಜೆಗಳ ಕಲ್ಯಾಣಕ್ಕಾಗಿ ವಿನ್ಯಾಸಗೊಳಿಸಲಾದ ಪ್ರಜಾಪ್ರಭುತ್ವ ಮತ್ತು ಅದನ್ನು ಆಗು ಮಾಡುವ ಸಾಧನಗಳಲ್ಲಿ ಒಂದಾದ ಸ್ವತಂತ್ರ ನ್ಯಾಯಾಂಗದಂತಹ ಪ್ರಮುಖ ವಿಷಯಗಳ ಬಗ್ಗೆ ವ್ಯವಹರಿಸುತ್ತದೆ. ಇದು ನಮ್ಮ ಕಾನೂನು ಇತಿಹಾಸದ ಬಗ್ಗೆ ಪ್ರಾತಿನಿಧಿಕ ಅವಲೋಕನಗಳನ್ನುನೀಡುತ್ತದೆ” ಎಂದರು.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ, ನ್ಯಾಯಮೂರ್ತಿ ಬಿ ವಿ ನಾಗರತ್ನ, ಹೈಕೋರ್ಟ್‌ನ ವಿವಿಧ ನ್ಯಾಯಮೂರ್ತಿಗಳು ಹಾಗೂ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಲಾಗಿತ್ತು. ಯೂಟ್ಯೂಬ್‌ ಮೂಲಕ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಯಿತು.

Related Stories

No stories found.