ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರೊಬ್ಬರು ಶಿಕ್ಷಣ ಹಕ್ಕಿಗೆ ಸಂಬಂಧಿಸಿದ ದಾವೆಯನ್ನು ಕೇವಲ ಅಲ್ಪಸಂಖ್ಯಾತ ಸಮುದಾಯದ ಪರವಾಗಿ ಹೂಡಿರುವುದೇಕೆ? ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಶ್ನಿಸಿತು [ಮಹಮದ್ ಇಮ್ರಾನ್ ಅಹಮದ್ ಮತ್ತಿತರರು ಹಾಗೂ ಕೇಂದ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಅಧಿಸೂಚಿತ ಅಲ್ಪಸಂಖ್ಯಾತರಿಗೆ ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಐ ಕಾಯಿದೆ) ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರನ್ನೊಳಗೊಂಡ ಪೀಠ “ಶಿಕ್ಷಣದ ಹಕ್ಕಿನಂತಹ ವಿಷಯ ಬಂದಾಗ ಅಲ್ಪಸಂಖ್ಯಾತರಿಗೆ ಮಾತ್ರವೇ ಒತ್ತು ನೀಡಲಾಗದು” ಎಂದು ತಿಳಿಸಿತು.
“ಬಹುಸಂಖ್ಯಾತರನ್ನು ಹೊರಗಿಟ್ಟು ಅಲ್ಪಸಂಖ್ಯಾತರಿಗೆ ಮಾತ್ರ ಬೆಂಬಲ ನೀಡಲಾಗುತ್ತಿದೆಯೇ? ನೀವು ಅಲ್ಪಸಂಖ್ಯಾತರಿಗೆ ಮಾತ್ರ ಏಕೆ ವಿಶೇಷ ಒತ್ತು ನೀಡಿದ್ದೀರಿ? ಧರ್ಮವು ಅದರದ್ದೇ ಆದ ವಿಷಯಗಳಲ್ಲಿ ಮುಖ್ಯವಾಗುತ್ತದೆ. ಉಳಿದಂತೆ ನಮ್ಮದು ಜಾತ್ಯತೀತ ರಾಷ್ಟ್ರ” ಎಂದು ನ್ಯಾಯಾಲಯ ತಿಳಿಹೇಳಿತು. ಹೀಗಾಗಿ ಪ್ರಸ್ತುತ ಅರ್ಜಿಯನ್ನು ಹಿಂಪಡೆದು ಹೊಸ ಅರ್ಜಿ ಸಲ್ಲಿಸಲು ನ್ಯಾಯಾಲಯ ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿತು.
ಅಲ್ಪಸಂಖ್ಯಾತರಿಗೆ ನೀಡುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆಯನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಹಿಂತೆಗೆದುಕೊಂಡಿರುವುದರಿಂದ ಆರ್‌ಟಿಐ ಕಾಯಿದೆಯ ಸೆಕ್ಷನ್ 12 (1)ನ್ನು ಜಾರಿಗೆ ತರುವಂತೆ ಅರ್ಜಿದಾರರು ಕೋರಿದ್ದರು.
ಈ ಸೆಕ್ಷನ್ ಪ್ರಕಾರ ಅಲ್ಪಸಂಖ್ಯಾತರಲ್ಲದ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಮಕ್ಕಳಿಗೆ ತಮ್ಮ ಪ್ರವೇಶಾತಿ ವೇಳೆ ಕನಿಷ್ಠ ಶೇ 25ರಷ್ಟು ಮೀಸಲಾತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಆರು ಅಧಿಸೂಚಿತ ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ಆರ್ಥಿಕ ತೊಂದರೆಗಳು ಮತ್ತು ಶೈಕ್ಷಣಿಕ ಪ್ರತಿಕೂಲ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಪ್ರತಿವಾದಿಗಳು ಆರ್‌ಟಿಐ ಕಾಯಿದೆಯನ್ನು ಜಾರಿಗೆ ತರಲು ಬದ್ಧವಾಗಿರಬೇಕು ಎಂದು ಅರ್ಜಿದಾರರು ಕೋರಿದ್ದರು.
ಇಂದಿನ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಆಯುಷ್ ನೇಗಿ ಅವರು ಸೆಕ್ಷನ್ 12(1)ಸಿ ಎಲ್ಲರಿಗೂ ಅನ್ವಯಿಸಲಿದ್ದು ಅರ್ಜಿ ಅದನ್ನು ಜಾರಿಗೊಳಿಸುವಂತೆ ಮಾತ್ರ ಕೋರುತ್ತಿದೆ ಎಂದರು. ಈ ವೇಳೆ ನ್ಯಾ.ನಾಗರತ್ನ ಅವರು ಮನವಿಯಲ್ಲಿ ಅದು ಪ್ರತಿಫಲಿಸುತ್ತಿಲ್ಲ ಎಂದರು. ಆಗ ನೇಗಿ ಅವರು “ಕಾಯಿದೆಯಡಿ ಸೌಲಭ್ಯಗಳನ್ನು ಅಲ್ಪಸಂಖ್ಯಾತರಿಗೆ ಕೂಡ ನೀಡಲಾಗಿದೆ. ಇದನ್ನು ಧಾರ್ಮಿಕ ನೆಲೆಯಲ್ಲಿ ನೋಡಬಾರದು. ನಾನು ಅರ್ಜಿಯನ್ನು ತಿದ್ದಪಡಿ ಮಾಡಿ ಸಲ್ಲಿಸುತ್ತೇನೆ” ಎಂದರು. ಈ ಹಂತದಲ್ಲಿ ನ್ಯಾಯಾಲಯ ಅರ್ಜಿದಾರರಿಗೆ ಮನವಿ ಹಿಂಪಡೆಯಲು ಅವಕಾಶ ನೀಡಿತು.