ಭಾರತದ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಸಾಂಪ್ರದಾಯಿಕ ನಂಬಿಕೆ ಮತ್ತು ಮೌಲ್ಯಗಳು ವಯಸ್ಸಾದ ಪೋಷಕರು ಮತ್ತು ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿಗೆ ಆದ್ಯತೆ ನೀಡುತ್ತವೆ ಎಂದು ಈಚೆಗೆ ಅಲಾಹಾಬಾದ್ ಹೈಕೋರ್ಟ್ ಹೇಳಿದೆ.
ಸಾಕಷ್ಟು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನು ವಯಸ್ಸಾದ ಪೋಷಕರು ಮಕ್ಕಳಿಗೆ ನೀಡುತ್ತಾರೆ. ಅವರು ಅನಾರೋಗ್ಯಪೀಡಿತರಾದಾಗ, ಸಂಪಾದನೆ ಇಲ್ಲದಿದ್ದಾಗ ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ ಎಂದು ನ್ಯಾಯಮೂರ್ತಿಗಳಾದ ಮಹೇಶ್ ಚಂದ್ರ ತ್ರಿಪಾಠಿ ಮತ್ತು ಪ್ರಶಾಂತ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
“ನಮ್ಮದು ಸಂಸ್ಕೃತಿ, ಮೌಲ್ಯ ಮತ್ತು ನೈತಿಕತೆ ಹೊಂದಿರುವ ದೇಶ. ತನ್ನ ದೃಷ್ಟಿದೋಷ ಹೊಂದಿದ್ದ ಪೋಷಕರಿಗೋಸ್ಕರ ಜೀವನ ಮುಡಿಪಾಗಿಟ್ಟಿದ್ದ ಹೆಸರಾಂತ ಶ್ರವಣ ಕುಮಾರನ ನೆಲ ನಮ್ಮದು. ಭಾರತದ ಸಾಂಪ್ರದಾಯಿಕ ನಂಬಿಕೆ ಮತ್ತು ಮೌಲ್ಯಗಳು ಹಿರಿಯರನ್ನು ನೋಡಿಕೊಳ್ಳಬೇಕು ಎಂದು ಹೇಳುತ್ತವೆ. ನಮ್ಮ ಸಾಂಪ್ರದಾಯಿಕ ಸಮಾಜದಲ್ಲಿ ಪೋಷಕರಿಗೆ ಮಕ್ಕಳು ಮಾಡುವ ಕರ್ತವ್ಯವನ್ನು ಋಣ ಸಂದಾಯ ಎಂದು ಪರಿಗಣಿಸಲಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಮೌಲ್ಯಗಳ ಆಧಾರದಲ್ಲಿ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಹೊಣೆಗಾರಿಕೆ ಮಾತ್ರವಲ್ಲ. ಇದು ಹಿರಿಯ ನಾಗರಿಕರು ಮತ್ತು ಪೋಷಕರ ಕಲ್ಯಾಣ ಮತ್ತು ನಿರ್ವಹಣಾ ಕಾಯಿದೆಯ ಅಡಿ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಕಾಯಿದೆಯ ಅನ್ವಯ ವಯಸ್ಸಾದ ಪೋಷಕರು ಮತ್ತು ಅವರ ಘನತೆ ಎತ್ತಿ ಹಿಡಿಯುವುದು ಮಕ್ಕಳ ಕರ್ತವ್ಯವಾಗಿದ್ದು, ಹಲವು ಪ್ರಕರಣಗಳಲ್ಲಿ ಹಿರಿಯರಿಂದ ಆಸ್ತಿ ಪಡೆದ ಬಳಿಕ ಅವರ ಕೈಬಿಡುತ್ತಿರುವುದಕ್ಕೆ ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ.
“ದೈಹಿಕ ಸಮಸ್ಯೆಯ ಜೊತೆಗೆ ಪೋಷಕರಿಗೆ ಭಾವನಾತ್ಮಕ ಮತ್ತು ಮನೋ ವೈಜ್ಞಾನಿಕ ಸವಾಲುಗಳು ಎದುರಾಗುತ್ತವೆ. ಈ ಹಿನ್ನೆಲೆಯಲ್ಲಿ ಅವರು ಸಂಪೂರ್ಣವಾಗಿ ಮಕ್ಕಳನ್ನು ಅವಲಂಬಿಸಿರುತ್ತಾರೆ. ಹಲವು ಸಂದರ್ಭದಲ್ಲಿ ಪೋಷಕರ ಆಸ್ತಿ ಪಡೆದ ಬಳಿಕ ಮಕ್ಕಳು ಅವರನ್ನು ದೂರ ನೂಕುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.