ಭಾರತೀಯ ನ್ಯಾಯಾಲಯಗಳು ಪ್ರಜಾಪ್ರಭುತ್ವದ ನೆಲೆಗಳಾಗಿ ಬದಲಾಗಿವೆ: ಬ್ರೆಜಿಲ್‌ನ ಜೆ 20 ಶೃಂಗಸಭೆಯಲ್ಲಿ ಸಿಜೆಐ ಚಂದ್ರಚೂಡ್

ವಿಶೇಷವಾಗಿ ತೀರ್ಪು ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ವಿಚಾರ ಬಂದಾಗ ಜನರಿಗೆ ನ್ಯಾಯಾಂಗ ಉತ್ತರದಾಯಿಯಾಗಿ ಇರಬೇಕಾದ ಅಗತ್ಯವನ್ನು ಸಿಜೆಐ ಒತ್ತಿ ಹೇಳಿದರು.
CJI Chandrachud addressing J-20 summit in Brazil
CJI Chandrachud addressing J-20 summit in Brazil

ಭಾರತೀಯ ನ್ಯಾಯಾಲಯಗಳು ಅಪಾರದರ್ಶಕ ಭೌತಿಕ ತಾಣಗಳ ಸ್ವರೂಪ ಮೀರಿದ್ದು 'ಹೇರಿಕೆಯ ಸಾಮ್ರಾಜ್ಯ' ಎನ್ನುವಂತಲ್ಲದೆ ಬದಲಿಗೆ 'ಪ್ರಜಾಸತ್ತಾತ್ಮಕ ಸಂವಾದದ ತಾಣಗಳಾಗಿ' ಮರುರೂಪುಗೊಂಡಿವೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಹೇಳಿದರು.

ಬ್ರೆಜಿಲ್‌ನಲ್ಲಿ ಆಯೋಜಿಸಲಾಗಿರುವ ಜೆ 20 ಶೃಂಗಸಭೆಯಲ್ಲಿ ಮಂಗಳವಾರ ಅವರು ಮಾತನಾಡಿದರು. ಜಿ 20 ಸದಸ್ಯ ರಾಷ್ಟ್ರಗಳ ಸುಪ್ರೀಂ ಮತ್ತು ಸಾಂವಿಧಾನಿಕ ನ್ಯಾಯಾಲಯಗಳ ಅಧ್ಯಕ್ಷರು ಮತ್ತು ಆಫ್ರಿಕನ್ ಒಕ್ಕೂಟ ಹಾಗೂ ಐರೋಪ್ಯ ಒಕ್ಕೂಟದ ಪ್ರತಿನಿಧಿಗಳನ್ನು ಒಳಗೊಂಡ ಜೆ 20 ಶೃಂಗಸಭೆಯನ್ನು ಬ್ರೆಜಿಲ್‌ನ ಫೆಡರಲ್ ಸುಪ್ರೀಂ ಕೋರ್ಟ್ (STF) ಏರ್ಪಡಿಸಿದೆ.

ಸಾಮಾಜಿಕ ನ್ಯಾಯ, ಪರಿಸರ ಸುಸ್ಥಿರತೆ ಮತ್ತು ಸುಧಾರಿತ ನ್ಯಾಯಾಂಗ ದಕ್ಷತೆಗಾಗಿ ತಂತ್ರಜ್ಞಾನದ ಒಗ್ಗೂಡಿಸುವಿಕೆ ಸೇರಿದಂತೆ ನಿರ್ಣಾಯಕ ವಿಷಯಗಳ ಕುರಿತು ಶೃಂಗಸಭೆ ಚರ್ಚಿಸಲಿದೆ.

'ನ್ಯಾಯಾಂಗ ದಕ್ಷತೆ ಹೆಚ್ಚಳಕ್ಕಾಗಿ ಡಿಜಿಟಲ್ ಪರಿವರ್ತನೆ ಮತ್ತು ತಂತ್ರಜ್ಞಾನದ ಬಳಕೆ' ಎಂಬ ವಿಷಯದ ಕುರಿತು ಸಿಜೆಐ ಮಾತನಾಡಿದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ಕೋವಿಡ್-19 ನಮ್ಮ ನ್ಯಾಯಾಲಯದ ವ್ಯವಸ್ಥೆಯ ಎಲ್ಲೆಗಳನ್ನು ರಾತ್ರೋರಾತ್ರಿ ಬದಲಿಸಿತು. ಪರಿಣಾಮ ನ್ಯಾಯಾಲಯಗಳು ಅಪಾರದರ್ಶಕ ಭೌತಿಕ ತಾಣಗಳೆನ್ನುವ ಸ್ವರೂಪವನ್ನು ಮೀರಿ ನಿಂತವು.

  • ನ್ಯಾಯಾಂಗ ದಕ್ಷತೆ ಬಗ್ಗೆ ಮಾತನಾಡುವಾಗ, ನಾವು ನ್ಯಾಯಾಧೀಶರ ದಕ್ಷತೆಯಾಚೆಗೆ ನೋಡಬೇಕಿದ್ದು ಸಮಗ್ರ ನ್ಯಾಯಾಂಗ ಪ್ರಕ್ರಿಯೆಯ ಬಗ್ಗೆ ಯೋಚಿಸಬೇಕು. ದಕ್ಷತೆ ಎಂಬುದು ತೀರ್ಪಿನಲ್ಲಿ ಮಾತ್ರವಲ್ಲದೆ ಮುಕ್ತ ಮತ್ತು ನ್ಯಾಯಯುತ ವಿಚಾರಣೆ ನಡೆಯುವಂತೆ ನೋಡಿಕೊಳ್ಳುವುದರಲ್ಲೂ ಇದೆ.

  • ವಿಶೇಷವಾಗಿ ತೀರ್ಪು ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ವಿಚಾರ ಬಂದಾಗ ಜನರಿಗೆ ನ್ಯಾಯಾಂಗ ಉತ್ತರದಾಯಿಯಾಗಿ ಇರಬೇಕಾಗಿದೆ.

  • ನ್ಯಾಯಾಧೀಶರು ವಿವರಣೆ ನೀಡಬೇಕಾದ ಅಗತ್ಯವಿಲ್ಲದ ರಾಜಕುಮಾರರು ಅಥವಾ ಸಾರ್ವಭೌಮರಲ್ಲ. ಅವರು ಸೇವೆ ಒದಗಿಸುವವರಾಗಿದ್ದು ಹಕ್ಕುಗಳನ್ನುಒದಗಿಸುವ ಸಮಾಜಗಳನ್ನು ಕ್ರಿಯಾಶೀಲಗೊಳಿಸುವವರಾಗಿದ್ದಾರೆ.

  • ದೈಹಿಕವಾಗಿ ಅಶಕ್ತರು, ಗರ್ಭಿಣಿಯರು ಹಾಗೂ ವೃದ್ಧರು ವರ್ಚುವಲ್‌ ವಿಧಾನದಲ್ಲಿ ನ್ಯಾಯಾಲಯ ಪ್ರಕ್ರಿಯೆಯಲ್ಲಿ ತೊಡಗುವಂತೆ ಭಾರತದ ಸರ್ವೋಚ್ಚ ನ್ಯಾಯಾಲಯ ತಾಂತ್ರಿಕ ಪ್ರಗತಿ ಮೂಡಿಸಿದೆ.

  • ಆದರೂ ತಂತ್ರಜ್ಞಾನದ ಸಾಮರ್ಥ್ಯ ಅಸಮಾನತೆಯನ್ನೂ ಸೃಷ್ಟಿಸುತ್ತಿದ್ದು ಅಸಮಾನತೆ ಕಡಿಮೆ ಮಾಡಲು ತಂತ್ರಜ್ಞಾನವನ್ನು ದುಡಿಸಿಕೊಳ್ಳಬೇಕಿದೆ.

  • ತಪ್ಪು ಮಾಹಿತಿ ಮತ್ತು ಕಾನೂನು ಪ್ರಕ್ರಿಯೆಗಳ ತಪ್ಪು ತಿಳಿವಳಿಕೆಯನ್ನು ನಿವಾರಿಸುವ ಮೂಲಕ ನಿಖರವಾದ ನ್ಯಾಯಾಲಯದ ಸುದ್ದಿಗಳನ್ನು ಬೆಳಕಿಗೆ ತಂದ ಭಾರತದ ಕಾನೂನು ಪತ್ರಕರ್ತರ ಶ್ರಮ ಶ್ಲಾಘನೀಯ.

Related Stories

No stories found.
Kannada Bar & Bench
kannada.barandbench.com