
ಭಾರತೀಯ ಕಾನೂನುಗಳು ವೇಗವಾಗಿ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನಕ್ಕಿಂತಲೂ ಜ್ಯೋತಿರ್ವರ್ಷಗಳಷ್ಟು ಹಿಂದಿವೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮನಮೋಹನ್ ಬೇಸರ ವ್ಯಕ್ತಪಡಿಸಿದ್ದಾರೆ.
ಪರಿಣಾಮವಾಗಿ, ನ್ಯಾಯಾಲಯಗಳು ಸೂಕ್ತ ಕಾನೂನು ಸಾಧನಗಳಿಲ್ಲದೆ (ಕಾಯಿದೆಗಳು ಮತ್ತಿತರ ಕಾನೂನಾತ್ಮಕ ವಿಷಯಗಳು) ಸಂಕೀರ್ಣವಾದ ವಾಣಿಜ್ಯ ವ್ಯಾಜ್ಯ ಇತ್ಯರ್ಥಪಡಿಸಲು ಹೆಣಗಾಡುತ್ತಿವೆ ಎಂದು ಅವರು ಹೇಳಿದರು.
ನಾನಿ ಪಾಲ್ಖಿವಾಲಾ ಮಧ್ಯಸ್ಥಿಕೆ ಕೇಂದ್ರ ಮತ್ತು ಫೌಂಟೇನ್ ಚೇಂಬರ್ಸ್ ಜಂಟಿಯಾಗಿ ನವದೆಹಲಿಯಲ್ಲಿ ಈಚೆಗೆ ಆಯೋಜಿಸಿದ್ದ ಅಡ್ವೊಕೆಸಿ ಅಂಡ್ ಪ್ರೋಸೆಸ್; ಆರ್ಬಿಟ್ರೇಷನ್ ವರ್ಸಸ್ ಕೋರ್ಟ್ ಎಂಬ ವಿಷಯವಾಗಿ ನಡೆಸ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಾದ ಕಾರ್ಯಕ್ರಮದಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶ ಲಾರ್ಡ್ ಜಸ್ಟೀಸ್ ಅಂಡರ್‌ಹಿಲ್, ಸ್ಟೀಫನ್ ಮೊರಿಯಾರ್ಟಿ ಕೆಸಿ ಮತ್ತು ಲಾ ಆಫೀಸಸ್ ಆಫ್ ಪನಗ್ ಅಂಡ್ ಬಾಬು ಸಂಸ್ಥೆಯ ಪಾಲುದಾರ ಸಮುದ್ರ ಸಾರಂಗಿ ಕೂಡ ಭಾಗವಹಿಸಿದ್ದರು. ಲಂಡನ್‌ನ ಫೌಂಟೇನ್ ಕೋರ್ಟ್ ಚೇಂಬರ್ಸ್‌ನ ಹಿರಿಯ ಗುಮಾಸ್ತ ಅಲೆಕ್ಸ್ ಟೇಲರ್ ಅವರು ಅಧಿವೇಶನವನ್ನು ನಿರ್ವಹಿಸಿದರು.
ನ್ಯಾ. ಮನಮೋಹನ್ ಅವರ ಭಾಷಣದ ಪ್ರಮುಖಾಂಶಗಳು
ಅರ್ಥವಾಗದ ತಂತ್ರಜ್ಞಾನದೊಂದಿಗೆ ವ್ಯವಹರಿಸಲು ಕಾನೂನು ಲೋಕದ ಸದಸ್ಯರಿಗೆ ನೆರವಿನ ಅಗತ್ಯವಿದೆ.
ಹೊಸ ಪ್ರಕಾರದ ಮೊಕದ್ದಮೆಗಳು ಬರುತ್ತಿವೆ. ತಂತ್ರಜ್ಞಾನವು ವೇಗವಾಗಿ ಚಲಿಸುತ್ತಿದೆ, ಭಾರತೀಯ ಕಾನೂನುಗಳು ಜ್ಯೋತಿರ್ವರ್ಷಗಳಷ್ಟು ಹಿಂದುಳಿದಿವೆ.
ಭೌತಿಕ ಪ್ರಪಂಚದೊಂದಿಗೆ ವ್ಯವಹರಿಸುವ ಕಾನೂನುಗಳಿವೆಯಾದರೂ ವರ್ಚುವಲ್ ಜಗತ್ತಿನ ಕುರಿತಾದ ಕಾನೂನುಗಳಿಲ್ಲ.
ಹಿಂದೆ ಬೌದ್ಧಿಕ ಆಸ್ತಿ ಸಂಬಂಧಿತ ಪ್ರಕರಣಗಳು ವಿಡಿಯೋ ಪೈರೆಸಿ ಸುತ್ತ ಇರುತ್ತಿದ್ದವು. ಆದರೆ ಇದೀಗ ವಿದೇಶದ ಸರ್ವರ್‌ಗಳ ವಿಚಾರವೂ ಸಮಸ್ಯೆಯಾಗುತ್ತಿದ್ದು ಕಾನೂನು ತ್ವರಿತಗತಿಯಲ್ಲಿ ವಿಕಸನಗೊಳ್ಳಬೇಕಿದೆ.
ಭಾರತದಲ್ಲಿ, ನಾವು ಮೌಖಿಕ ವಾದಗಳಿಗೆ ಅನಗತ್ಯ ಪ್ರಾಮುಖ್ಯತೆ ನೀಡುತ್ತೇವೆ. ಲಿಖಿತ ವಾದಗಳನ್ನು ಅತ್ಯಂತ ಕಿರಿಯ ವಕೀಲರು ಸಿದ್ಧಪಡಿಸುತ್ತಾರೆ. ಆದರೆ ಭಾರತೀಯ ಮೊಕದ್ದಮೆಗಳಲ್ಲಿ ಲಿಖಿತ ವಾದಗಳ ಪಾತ್ರ ಹೆಚ್ಚುತ್ತಿದೆ.
ಲಿಖಿತ ಸಲ್ಲಿಕೆಗಳು ನ್ಯಾಯಾಂಗ ಕೆಲಸದ ಗುಣಮಟ್ಟವನ್ನು ಹೆಚ್ಚಿಸಿ ವ್ಯಾಜ್ಯ ವಿಚಾರಗಳನ್ನು ಸಾಂದ್ರಗೊಳಿಸಲು ಸಹಾಯ ಮಾಡುತ್ತವೆ.
ಭಾರತೀಯ ಮಧ್ಯಸ್ಥಿಕೆ ಕಾಯಿದೆ 1996ರಷ್ಟು ಹಿಂದಿನದಾಗಿದ್ದು ಇದು ಸೂಕ್ತ ಮಾನದಂಡಗಳನ್ನು ಒದಗಿಸದೆ ಇದ್ದುದಕ್ಕಾಗಿ ಟೀಕೆಗೆ ಗುರಿಯಾಗಿದೆ.