
ಅಪರಾಧಗಳ ಆರೋಪ ಹೊತ್ತಿರುವ ಆದರೆ ತಪ್ಪಿತಸ್ಥರೆಂದು ಇನ್ನೂ ಘೋಷಿಸದೆ ಇರುವ ವ್ಯಕ್ತಿಗಳಿಗೆ ಸೇರಿದ ಮನೆಗಳನ್ನು ಸ್ವೇಚ್ಛಾನುಸಾರ ಕೆಡವುವುದು ಅಥವಾ 'ಬುಲ್ಡೋಜರ್ ನ್ಯಾಯ'ವನ್ನು ಆಶ್ರಯಿಸುವುದು ಕಾನೂನುಬಾಹಿರ ಎಂದು ಹೇಳಿದ ಸುಪ್ರೀಂ ಕೋರ್ಟ್‌ನ 2024 ರ ತೀರ್ಪು ಭಾರತವು ಕಾನೂನಾತ್ಮಕ ಆಡಳಿತದಿಂದ ನಡೆಯುತ್ತದೆ ಎಂಬುದನ್ನು ನೆನಪಿಸಿತು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಅವರು ಅಭಿಪ್ರಾಯಪಟ್ಟರು.
ಮಾರಿಷಸ್‌ನ ಮಾಜಿ ಮುಖ್ಯ ನ್ಯಾಯಮೂರ್ತಿಗಳ ಸ್ಮರಣಾರ್ಥ ಮಾರಿಷಸ್‌ನಲ್ಲಿ ಸರ್ ಮೌರಿಸ್ ರಾಲ್ಟ್ ಸ್ಮಾರಕ ಉಪನ್ಯಾಸ ನೀಡುತ್ತಾ ಸಿಜೆಐ ಬಿ ಆರ್ ಗವಾಯಿ ಅವರು 'ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಕಾನೂನಾತ್ಮಕ ಆಡಳಿತ' ಎಂಬ ವಿಷಯದ ಕುರಿತು ಮಾತನಾಡಿದರು.
'ಬುಲ್ಡೋಜರ್ ನ್ಯಾಯ'ದ ವಿರುದ್ಧ ಸುಪ್ರೀಂ ಕೋರ್ಟ್‌ನ 2024 ರ ತೀರ್ಪನ್ನು ನೆನಪಿಸಿಕೊಳ್ಳುತ್ತಾ, ಸಿಜೆಐ ಅವರು, "ಆರೋಪಿಗಳ ಮನೆಗಳನ್ನು ಕೆಡವುವುದು ಕಾನೂನು ಪ್ರಕ್ರಿಯೆಗಳನ್ನು, ಕಾನೂನಿನ ನಿಯಮಗಳನ್ನು ಉಲ್ಲಂಘಿಸುತ್ತದೆ. ಅಲ್ಲದೆ, ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಆಶ್ರಯ ಪಡೆಯುವ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ತೀರ್ಪಿನಲ್ಲಿ ಎತ್ತಿ ಹಿಡಿಯಲಾಯಿತು. ಕಾರ್ಯಾಂಗವು ನ್ಯಾಯಮೂರ್ತಿಗಳ, ತೀರ್ಪುಗಾರರ ಹಾಗೂ ಶಿಕ್ಷೆ ಜಾರಿಗೊಳಿಸುವವರ ಪಾತ್ರಗಳನ್ನು ಏಕಕಾಲದಲ್ಲಿ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಯಿತು. ಅಲ್ಲದೆ, ಸ್ಥಾಪಿತ ಕಾನೂನು ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸದೆ ಭವಿಷ್ಯದಲ್ಲಿ ಯಾವುದೇ ಧ್ವಂಸ ನಡೆಯದಂತೆ ಖಚಿತಪಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿದೆ. ಭಾರತೀಯ ಕಾನೂನು ವ್ಯವಸ್ಥೆಯು ಬುಲ್ಡೋಜರ್ ಆಳ್ವಿಕೆಯಿಂದಲ್ಲ, ಕಾನೂನಿನ ಆಳ್ವಿಕೆಯಿಂದ ನಿಯಂತ್ರಿಸಲ್ಪಡುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಈ ತೀರ್ಪು ರವಾನಿಸಿದೆ" ಎಂದು ಹೇಳಿದರು.
ತಮ್ಮ ಉಪನ್ಯಾಸದಲ್ಲಿ, ಸಿಜೆಐ ಗವಾಯಿ ಅವರು ಕಾನೂನುಗಳನ್ನು ಯಾವಾಗಲೂ ನ್ಯಾಯದೊಂದಿಗೆ ಸದಾಕಾಲ ಸಮೀಕರಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು. "ಕಾನೂನು ಮಾತ್ರವೇ ನ್ಯಾಯ ಅಥವಾ ನಿಷ್ಪಕ್ಷಪಾತತೆಯನ್ನು ನೀಡುವುದಿಲ್ಲ. ಏನನ್ನಾದರೂ ಕಾನೂನುಬದ್ಧಗೊಳಿಸಲಾಗಿದೆ ಎಂದ ಮಾತ್ರಕ್ಕೆ ಅದು ನ್ಯಾಯಯುತವಾಗಿದೆ ಎಂದೂ ಅರ್ಥವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ" ಎಂದು ಅವರು ಹೇಳಿದರು.
ಈ ಅಂಶವನ್ನು ವಿವರಿಸಲು, ಅವರು ಅಮೆರಿಕಾದಲ್ಲಿ ಈ ಹಿಂದೆ ಕಾನೂನುಬದ್ಧವಾಗಿದ್ದ ಗುಲಾಮಗಿರಿಯ ಉದಾಹರಣೆ ನೀಡಿದರು. ಅದೇ ರೀತಿ, ಭಾರತದಲ್ಲಿ ಇಡಿಯಾಗಿ ಬುಡಕಟ್ಟುಗಳನ್ನೇ ಅಪರಾಧಿಗಳೆಂದು ಪರಿಗಣಿಸುವ ವಸಾಹತುಶಾಹಿ ಯುಗದ ಕಾನೂನುಗಳನ್ನು; ಮೂಲನಿವಾಸಿಗಳು ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳನ್ನು ದಂಡಿಸುವ ಪ್ರಪಂಚದಾದ್ಯಂತ ಇದ್ದ ವಿವಿಧ ಕಾನೂನುಗಳನ್ನು ಉದಾಹರಿಸಿದರು. ಅದೇ ರೀತಿ, ದೇಶದ್ರೋಹ ಕಾನೂನುಗಳ ದುರುಪಯೋಗವನ್ನು ಸಹ ಉಲ್ಲೇಖಿಸಿದರು.
"ದಬ್ಬಾಳಿಕೆಯ ಕಾನೂನು ವ್ಯವಸ್ಥೆಯ ವಿರುದ್ಧದ ಪ್ರತಿರೋಧವನ್ನು ನಿಗ್ರಹಿಸಲು ದೇಶದ್ರೋಹದ ಕಾನೂನುಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು" ಎಂದು ಅವರು ವಿವರಿಸಿದರು.
ಕಾನೂನಾತ್ಮಕ ಆಡಳಿತ ಹಾಗೂ ತಾಂತ್ರಿಕ ಕಾನೂನುಬದ್ಧತೆಯ ನಡುವಿನ ವ್ಯತ್ಯಾಸದ ಬಗ್ಗೆ ಅವರು ಬೆರಳು ಮಾಡಿದರು. ಕಾನೂನಿನ ನಿಯಮಗಳನ್ನು ಮತ್ತಷ್ಟು ಬಲಪಡಿಸಲು, ಐತಿಹಾಸಿಕ ಅನ್ಯಾಯಗಳನ್ನು ಸರಿಪಡಿಸಲು ಮತ್ತು ಸಾರ್ವಜನಿಕ ಸಂಸ್ಥೆಗಳು ಮತ್ತು ಅಧಿಕಾರಿಗಳನ್ನು ಹೆಚ್ಚು ಹೊಣೆಗಾರರನ್ನಾಗಿ ಮಾಡಲು ಭಾರತದಲ್ಲಿ ಹೊಸ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಮಾರಿಷಸ್ ಅಧ್ಯಕ್ಷ ಧರಂಬೀರ್ ಗೋಖೂಲ್, ಪ್ರಧಾನಿ ಡಾ. ನವೀನಚಂದ್ರ ರಾಮಗೂಲಂ, ಮಾರಿಷಸ್ ಮುಖ್ಯ ನ್ಯಾಯಮೂರ್ತಿ ರೆಹಾನಾ ಮುಂಗ್ಲಿ ಗುಲ್ಬುಲ್, ಅಟಾರ್ನಿ ಜನರಲ್ ಗವಿನ್ ಪ್ಯಾಟ್ರಿಕ್ ಸಿರಿಲ್ ಗ್ಲೋವರ್, ನ್ಯಾಯಾಧೀಶರು ಮತ್ತು ಮಾರಿಷಸ್ ಶಾಸಕಾಂಗದ ಸದಸ್ಯರು ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.