ಭಾರತದ ಸಮಾಜ ಬದಲಾಗಿದೆ; ಲೈಂಗಿಕ ಅಪರಾಧಗಳಲ್ಲಿ ತಪ್ಪಾಗಿ ಸಿಲುಕಿಸುವುದು ಹೆಚ್ಚಿದೆ: ಅಲಾಹಾಬಾದ್‌ ಹೈಕೋರ್ಟ್‌

ವಾರಾಣಸಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಸಿಲುಕಿದ ಇಬ್ಬರಿಗೆ ಜಾಮೀನು ಮಂಜೂರು ಮಾಡುವಾಗ ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿದೆ.
Allahabad High Court
Allahabad High Courtaljazeera

ಕಳೆದ ನಾಲ್ಕು ದಶಕಗಳಲ್ಲಿ ಭಾರತದ ಸಮಾಜ ಸಂಪೂರ್ಣ ಬದಲಾವಣೆಗೆ ಒಳಪಟ್ಟಿದ್ದು, ಲೈಂಗಿಕ ಪ್ರಕರಣಗಳಲ್ಲಿ ತಪ್ಪಾಗಿ ಸಿಲುಕಿಸುವುದು ಏರುಗತಿಯಲ್ಲಿದೆ ಎಂದು ಈಚೆಗೆ ಅಲಾಹಾಬಾದ್‌ ಹೈಕೋರ್ಟ್‌ ಅತ್ಯಾಚಾರ ಪ್ರಕರಣದಲ್ಲಿನ ಆರೋಪಿಗಳಿಗೆ ಜಾಮೀನು ಮಂಜೂರು ಮಾಡುವಾಗ ಅಭಿಪ್ರಾಯಪಟ್ಟಿದೆ [ಸಂದೀಪ್‌ ಕುಮಾರ್‌ ಮಿಶ್ರಾ ವರ್ಸಸ್‌ ಉತ್ತರ ಪ್ರದೇಶ ರಾಜ್ಯ].

ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಕ್ರಿಷಣ್ ಪಹಲ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಭರ್ವಾಡಾ ಭೋಗಿನ್‌ಭಾಯ್‌ ಹಿರ್ಜಿಭಾಯ್‌ ವರ್ಸಸ್‌ ಗುಜರಾತ್‌ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬಳಿಕ ಗಂಗಾ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ. ಸುಮಾರು ನಲವತ್ತು ವರ್ಷಗಳಲ್ಲಿ ಭಾರತದ ಸಮಾಜವು ಸಂಪೂರ್ಣವಾಗಿ ಬದಲಾಗಿದೆ. ಈಚೆಗೆ ಲೈಂಗಿಕ ಅಪರಾಧಗಳಲ್ಲಿ ತಪ್ಪಾಗಿ ಸಿಲುಕಿಸುವುದು ಹೆಚ್ಚಾಗಿದೆ. ಹಾಗಾಗಿ, ಜಾಮೀನು ನಿರ್ಧರಿಸುವಾಗ ಎಫ್‌ಐಆರ್‌ ದಾಖಲಿಸುವುದು ತಡವಾಗಿರುವುದನ್ನು ಪರಿಗಣಿಸಬೇಕು” ಎಂದು ಪೀಠ ಹೇಳಿದೆ.

2019ರ ಆಗಸ್ಟ್‌ 5ರಂದು ಮೀರತ್‌ನಲ್ಲಿ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376-ಡಿ, 342 ಮತ್ತು 506 ಅಡಿ ಪ್ರಕರಣ ದಾಖಲಿಸಲಾಗಿತ್ತು. ವಾರಾಣಸಿ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ವಾರಾಣಸಿ ಜಿಲ್ಲೆಯ ರೋಹಾನಿಯಾ ಪೊಲೀಸರು ತನಿಖೆ ನಡೆಸಬೇಕು ಎಂದು ಮೀರತ್‌ನ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಪತ್ರ ಬರೆದಿದ್ದರು. ಹೀಗಾಗಿ, 2019ರ ಸೆಪ್ಟೆಂಬರ್‌ 9ರಂದು ಎಫ್‌ಐಆರ್‌ ದಾಖಲಿಸಲಾಗಿತ್ತು.

ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯು ಆಶ್ರಮವೊಂದರಲ್ಲಿ ಕೆಲಸದಲ್ಲಿದ್ದು ಅಲ್ಲಿನ ಅಕ್ರಮಗಳ ಬಗ್ಗೆ ಗಮನಸೆಳೆದ ನಂತರ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಸುಳ್ಳು ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದೆ ಎನ್ನುವುದು ಆರೋಪಿಯ ಪರ ವಕೀಲರ ವಾದವಾಗಿದೆ. ಎಫ್‌ಐಆರ್ ದಾಖಲಿಸುವಲ್ಲಿನ ವಿಳಂಬವನ್ನು ಇದಕ್ಕೆ ಪೂರಕವಾಗಿ ಪ್ರಸ್ತಾಪಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com