ಪೌರತ್ವ ತಿದ್ದುಪಡಿ ನಿಯಮಾವಳಿ- 2024ಕ್ಕೆ ತಡೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್

ಪೌರತ್ವ ತಿದ್ದುಪಡಿ ನಿಯಮಾವಳಿ ಕುರಿತು ನಿನ್ನೆ (ಸೋಮವಾರ) ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) 2019 ನಿನ್ನೆಯಿಂದಲೇ ಜಾರಿಗೆ ಬಂದಿದೆ.
ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ಸುಪ್ರೀಂ ಕೋರ್ಟ್
ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ಸುಪ್ರೀಂ ಕೋರ್ಟ್

ಸೋಮವಾರದಿಂದ ಜಾರಿಗೆ ಬಂದಿರುವ ಪೌರತ್ವ (ತಿದ್ದುಪಡಿ) ನಿಯಮಾವಳಿ-2024ಕ್ಕೆ ತಡೆ ನೀಡುವಂತೆ ಕೋರಿ ಕೇರಳ ಮೂಲದ ರಾಜಕೀಯ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಪೌರತ್ವ ತಿದ್ದುಪಡಿ ನಿಯಮಾವಳಿ ಕುರಿತು ನಿನ್ನೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) 2019 ಅಂದಿನಿಂದ ಜಾರಿಗೆ ಬಂದಿದೆ.

ಸಿಎಎಗೆ ಸಂಸತ್ತು 2019ರಲ್ಲಿ ಅಂಗೀಕಾರ ನೀಡಿದಾಗ ಸುಪ್ರೀಂ ಕೋರ್ಟ್‌ನಲ್ಲಿ ಕಾಯಿದೆ ಜಾರಿ ಪ್ರಶ್ನಿಸಿದ್ದ ಮೊದಲ ಪಕ್ಷಕಾರರಲ್ಲಿ ಒಂದಾದ ಐಯುಎಂಎಲ್‌ ಈಗ ನಿಯಮಾವಳಿ ತಡೆ ಹಿಡಿಯುವಂತೆ ಕೋರಿ ಸುಪ್ರೀಂ ಕೋರ್ಟ್‌ ಕದ ತಟ್ಟಿದೆ.

ಅರ್ಜಿಯ ಪ್ರಮುಖಾಂಶಗಳು

  • ಧರ್ಮದ ಆಧಾರದ ಮೇಲೆ ಸಿಎಎ ಮುಸ್ಲಿಮರಿಗೆ ತಾರತಮ್ಯ ಎಸಗುತ್ತದೆ.

  • ಈ ರೀತಿಯ ಧಾರ್ಮಿಕ ಪ್ರತ್ಯೇಕತೆ ಸಮಂಜಸವಲ್ಲ ಮತ್ತು ಸಂವಿಧಾನದ 14ನೇ ವಿಧಿಯಡಿ ಒದಗಿಸಲಾದ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ.

  • ನಿಯಮಾವಳಿಗೆ ತಡೆ ನೀಡಬೇಕು ಜೊತೆಗೆ ಸಿಎಎಯನ್ನೂ ಜಾರಿಗೆ ತರಬಾರದು.

  • ನಿಯಮಗಳ ಅಡಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ವಿಫಲರಾದ ಮುಸ್ಲಿಂ ಸಮುದಾಯದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ನಿರ್ದೇಶನ ನೀಡಬೇಕು.

  • ನಿನ್ನೆ ಜಾರಿಗೆ ಬಂದಿರುವ ನಿಯಮಾವಳಿ ವಿನಾಯಿತಿ ಪಡೆಯಬಹುದಾದಂತಹ ವ್ಯಕ್ತಿಗಳಿಗೆ ಸಂಕುಚಿತ ಮತ್ತು ತ್ವರಿತ ಪ್ರಕ್ರಿಯೆ ಮೂಲಕ ಪೌರತ್ವ ಒದಗಿಸುತ್ತದೆ.

  • ಇದು ಸ್ಪಷ್ಟವಾಗಿ ನಿರಂಕುಶವಾಗಿದ್ದು ಕೇವಲ ಧಾರ್ಮಿಕ ಗುರುತಿನ ಆಧಾರದಲ್ಲಿ ಒಂದು ಸಮುದಾಯದ ವ್ಯಕ್ತಿಗಳಿಗೆ ಅನ್ಯಾಯ ಉಂಟು ಮಾಡುತ್ತದೆ.

  • ಇದಕ್ಕೆ ಸಂವಿಧಾನದ 14 ಮತ್ತು 15ನೇ ವಿಧಿಯಡಿ ಅನುಮತಿ ಇಲ್ಲ.

ಸಿಎಎ, ಅಕ್ರಮ ವಲಸಿಗರನ್ನು ವ್ಯಾಖ್ಯಾನಿಸುವ 1955ರ ಪೌರತ್ವ ಕಾಯಿದೆಯ ಸೆಕ್ಷನ್ 2ಕ್ಕೆ ಸಂಸತ್ತು 2019ರಲ್ಲಿ ತಿದ್ದುಪಡಿ ಮಾಡಿತ್ತು. ತಿದ್ದುಪಡಿ ವೇಳೆ ಕಾಯಿದೆಯ ಸೆಕ್ಷನ್ 2(1)(ಬಿ) ಗೆ ಹೊಸ ನಿಯಮಾವಳಿ ಸೇರಿಸಿದ್ದು ಆಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನಗಳ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂ, ಸಿಖ್, ಬೌದ್ಧ,ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಮತ್ತು 1920ರ ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯಿದೆ- ಅಥವಾ 1946ರ ವಿದೇಶಿಯರ ಕಾಯಿದೆಯಡಿ ಕೇಂದ್ರ ಸರ್ಕಾರದಿಂದ ವಿನಾಯಿತಿ ಪಡೆದವರನ್ನು "ಅಕ್ರಮ ವಲಸಿಗ" ಎಂದು ಪರಿಗಣಿಸಲಾಗುವುದಿಲ್ಲ. ಪರಿಣಾಮವಾಗಿ, ಅಂತಹ ವ್ಯಕ್ತಿಗಳು 1955ರ ಕಾಯಿದೆ ಅಡಿಯಲ್ಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿತ್ತು.

ಆದರೆ ಸಿಎಎ ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನು ನಿಬಂಧನೆಯಿಂದ ಹೊರಗಿಟ್ಟಿದ್ದು ದೇಶದೆಲ್ಲೆಡೆ ಪ್ರತಿಭಟನೆಗೆ ಕಾರಣವಾಗಿ ಐಯುಎಂಎಲ್ ಸೇರಿದಂತೆ ಅನೇಕರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನಿಯಮಾವಳಿ ರೂಪಿಸದ ಕಾರಣ ಸಿಎಎ ಜಾರಿಗೆ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಆಗ ನ್ಯಾಯಾಲಯಕ್ಕೆ ತಿಳಿಸಿತ್ತು.

Related Stories

No stories found.
Kannada Bar & Bench
kannada.barandbench.com