
ಶಿಶುಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಭಾರತೀಯ ಮಹಿಳೆಯನ್ನು ಸಂಯುಕ್ತ ಅರಬ್ ಸಂಸ್ಥಾನದಲ್ಲಿ (ಯುಎಇ) ಫೆಬ್ರವರಿ 15 ರಂದು ಮರಣದಂಡನೆಗೆ ಗುರಿಪಡಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ (MEA) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ವಿದೇಶಾಂಗ ಸಚಿವಾಲಯವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್ ಶರ್ಮಾ ಅವರ ವಾದಗಳನ್ನು ನ್ಯಾಯಮೂರ್ತಿ ಸಚಿನ್ ದತ್ತ ದಾಖಲಿಸಿಕೊಂಡರು.
ಮಹಿಳೆಯ ಅಂತ್ಯಕ್ರಿಯೆ ಮಾರ್ಚ್ 5 ರಂದು ನಡೆಯಲಿದ್ದು, ಇದಕ್ಕಾಗಿ ಸಚಿವಾಲಯ ಎಲ್ಲಾ ಸಹಾಯವನ್ನು ನೀಡುತ್ತದೆ ಎಂದು ಅವರು ಹೇಳಿದರು.
"ಇದು ದುರದೃಷ್ಟಕರ ಸಂಗತಿ" ಎಂದು ಅರ್ಜಿ ವಿಲೇವಾರಿ ಮಾಡುವ ವೇಳೆ ನ್ಯಾಯಾಲಯ ನುಡಿಯಿತು.
ಅಬುಧಾಬಿಯಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳ ಸ್ಥಿತಿ ಮತ್ತು ತನ್ನ ಮಗಳ ಯೋಗಕ್ಷೇಮದ ವಿಚಾರ ಬಹಿರಂಗಪಡಿಸಲು ವಿದೇಶಾಂಗ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಮಹಿಳೆಯ ತಂದೆ ಅರ್ಜಿ ಸಲ್ಲಿಸಿದ್ದರು.
2022ರಲ್ಲಿ, ಅರ್ಜಿದಾರರ ಮಗಳ ಆರೈಕೆಯಲ್ಲಿದ್ದ ನಾಲ್ಕು ತಿಂಗಳ ಶಿಶು ಸಾವನ್ನಪ್ಪಿತ್ತು. ಉತ್ತರ ಪ್ರದೇಶದ ಮಹಿಳೆಯನ್ನು ಅಬುಧಾಬಿಯಲ್ಲಿ ವಾಸಿಸುವ ಭಾರತೀಯ ಕುಟುಂಬವು ಆರೈಕೆದಾರೆಯಾಗಿ ನೇಮಿಸಿಕೊಂಡಿತ್ತು.
ಮಗುವಿನ ಕೊಲೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿರುವ ವಿಡಿಯೋ ರೆಕಾರ್ಡಿಂಗ್ ಆಧರಿಸಿ ಮಗುವಿನ ಸಾವಿಗೆ ಆಕೆಯೇ ಕಾರಣ ಎಂದು ಮಗುವಿನ ಪೋಷಕರು ದೂರಿದ್ದರು.
ಮಹಿಳೆಯನ್ನು 2023 ರಲ್ಲಿ ಬಂಧಿಸಲಾಗಿತ್ತು. ಅದಾದ ಕೆಲವೇ ತಿಂಗಳುಗಳಲ್ಲಿ ಅಬುಧಾಬಿಯ ಫಸ್ಟ್ ಇನ್‌ಸ್ಟಾನ್ಸ್ ನ್ಯಾಯಾಲಯ ಆಕೆಗೆ ಮರಣದಂಡನೆ ವಿಧಿಸಿತ್ತು. ಮೇಲ್ಮನವಿ ನ್ಯಾಯಾಲಯ ಕೂಡ ಆಕೆಗೆ ವಿಧಿಸಿದ್ದ ಶಿಕ್ಷೆ ಎತ್ತಿಹಿಡಿದಿತ್ತು.
ಆದರೆ ಭಾರತೀಯ ರಾಯಭಾರ ಕಚೇರಿ ಒದಗಿಸಿದ ವಕೀಲರು ತಮ್ಮ ಮಗಳು ತಪ್ಪೊಪ್ಪಿಕೊಳ್ಳುವಂತೆ ಆಕೆಯ ಮೇಲೆ ಒತ್ತಡ ಹೇರಿದ್ದಾರೆ ಎಂದು ಅರ್ಜಿದಾರರು ದೂರಿದ್ದರು. ಭಾರತೀಯ ರಾಯಭಾರ ಕಚೇರಿಯ ಮೂಲಕ ಅಬುಧಾಬಿಯಲ್ಲಿ ಕ್ಷಮಾದಾನ ಅರ್ಜಿ ಸಲ್ಲಿಸಲು ಸಹಾಯ ಕೋರಿ ವಿದೇಶಾಂಗ ಸಚಿವಾಲಯ ಮತ್ತು ಪ್ರಧಾನ ಮಂತ್ರಿಗಳ ಕಚೇರಿಗೆ (ಪಿಎಂಒ) ಇಮೇಲ್ ಮಾಡಿದ್ದೆ, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದ್ದರು.
ಫೆಬ್ರವರಿ 14, 2025 ರಂದು, ಅರ್ಜಿದಾರರಿಗೆ ಅವರ ಮಗಳಿಂದ ಕೊನೆಯ ಕರೆ ಬಂದಿತ್ತು.
ಅವರು ಮತ್ತೆ ವಿದೇಶಾಂಗ ಸಚಿವಾಲಯವನ್ನು ಮತ್ತು ನಂತರ ಹೈಕೋರ್ಟ್ ಅನ್ನು ಸಂಪರ್ಕಿಸಿ, ತಮ್ಮ ಮಗಳ ಯೋಗಕ್ಷೇಮದ ಬಗ್ಗೆ ತಿಳಿಸುವಂತೆ ವಿದೇಶಾಂಗ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದರು.