ಬುಡಕಟ್ಟು ಜನರನ್ನು ಮಿಷನರಿಗಳು ಮತಾಂತರಿಸುವುದರಿಂದ ದೇಶದ ಏಕತೆಗೆ ಧಕ್ಕೆ: ಛತ್ತೀಸ್‌ಗಢ ಹೈಕೋರ್ಟ್

ವಿವಿಧ ಗ್ರಾಮಗಳಿಗೆ ಕ್ರೈಸ್ತ ಧರ್ಮೀಯರ ಪ್ರವೇಶ ನಿಷೇಧಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ವಿಚಾರ ತಿಳಿಸಿದೆ.
Religious Conversion
Religious Conversion
Published on

ಬುಡಕಟ್ಟು ಜನಾಂಗದವರನ್ನು ಸಾಮೂಹಿಕವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿರುವುದು ಉದ್ವಿಗ್ನತೆ, ಸಾಮಾಜಿಕ ಬಹಿಷ್ಕಾರ ಕೆಲವೊಮ್ಮೆ ಹಿಂಸಾಚಾರಕ್ಕೂ ಕಾರಣವಾಗುತ್ತಿದೆ ಎಂದು ಛತ್ತೀಸ್‌ಗಢ ಹೈಕೋರ್ಟ್ ಈಚೆಗೆ ತಿಳಿಸಿದೆ [ದಿಗ್ಬಲ್ ತಂಡಿ  ಮತ್ತು ಛತ್ತೀಸ್‌ಗಢ ಸರ್ಕಾರ ನಡುವಣ ಪ್ರಕರಣ] .

ಬಡವರು , ಅನಕ್ಷರಸ್ಥ ಬುಡಕಟ್ಟು ಸಮುದಾಯ ಮತ್ತು ಗ್ರಾಮೀಣ ಜನರನ್ನೇ ಆಧರಿಸಿ ನಡೆಸುತ್ತಿರುವ ಮತಾಂತರ ವಿವಾದ ಹುಟ್ಟುಹಾಕಿದೆ. ಸಂವಿಧಾನವು ಧರ್ಮ ಪ್ರಚಾರದ ಹಕ್ಕನ್ನು ಒದಗಿಸಿದೆ ಎಂಬುದನ್ನು ಒಪ್ಪಿದರೂ ಬಲವಂತ, ಪ್ರಚೋದನೆ ಅಥವಾ ವಂಚನೆ ಮೂಲಕ ಮತಾಂತರ ಮಾಡುವುದು ಆ ಹಕ್ಕಿನ ದುರುಪಯೋಗ ಎಂದು ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಬಿಭು ದತ್ತ ಗುರು ಅವರಿದ್ದ ಪೀಠ ತಿಳಿಸಿತು.

Also Read
ಆನ್‌ಲೈನ್‌ನಲ್ಲಿ ಚಾಕು ಮಾರಾಟ: ಛತ್ತೀಸ್‌ಗಢ ಹೈಕೋರ್ಟ್ ಪ್ರಕರಣ ದಾಖಲಿಸಿಕೊಂಡ ಬಳಿಕ 211 ಚಾಕು ವಶಪಡಿಸಿಕೊಂಡ ಪೊಲೀಸರು

ಸಾಮೂಹಿಕ ಅಥವಾ ಪ್ರಚೋದಿತ ಮತಾಂತರ ಸಾಮಾಜಿಕ ಸಾಮರಸ್ಯವನ್ನು ಕದಡುವುದಲ್ಲದೆ, ಸ್ಥಳೀಯ ಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆಯನ್ನು ಪ್ರಶ್ನಿಸುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ.

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಬುಡಕಟ್ಟು ಜನಾಂಗದವರು ಸಾಂಪ್ರದಾಯಿಕ ಆಚರಣೆಗಳು ಮತ್ತು ಬುಡಕಟ್ಟಿನ ಹಬ್ಬಗಳಿಂದ ದೂರವಿದ್ದು, ಹೊಸ ಸಾಂಸ್ಕೃತಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಾರೆ. ಪರಿಣಾಮ, ಹಳ್ಳಿಗಳು ಧ್ರುವೀಕರಣಗೊಳ್ಳುತ್ತವೆ, ಇದು ಉದ್ವಿಗ್ನತೆ, ಸಾಮಾಜಿಕ ಬಹಿಷ್ಕಾರ ಕೆಲವೊಮ್ಮೆ ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗುತ್ತದೆ.
ಛತ್ತೀಸ್‌ಗಢ ಹೈಕೋರ್ಟ್

ಕಾಲಕ್ರಮೇಣ ಭಾರತದಲ್ಲಿ ಮಿಷನರಿ ಚಟುವಟಿಕೆಯು ಮತಾಂತರಕ್ಕೆ ವೇದಿಕೆಯಾಗಿ ಮಾರ್ಪಟ್ಟಿದೆ ಎಂದು ನ್ಯಾಯಾಲಯ ಹೇಳಿತು.

ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ವಂಚಿತರಾದ ವರ್ಗಗಳಲ್ಲಿ, ಅದರಲ್ಲಿಯೂ ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಗಳಲ್ಲಿ, ಇದು ಉತ್ತಮ ಜೀವನೋಪಾಯ, ಶಿಕ್ಷಣ ಅಥವಾ ಸಮಾನತೆಯ ಭರವಸೆ ಒದಗಿಸಿ ನಿಧಾನವಾಗಿ ಮತಾಂತರಗೊಳಿಸುವ ಪ್ರಕ್ರಿಯೆ ನಡೆದಿದೆ. ಒಂದು ಕಾಲದಲ್ಲಿ ಸೇವೆಯಾಗಿ ತೋರುತ್ತಿದ್ದ ಚಟುವಟಿಕೆಗಳು ನಂತರ ಧರ್ಮ ವಿಸ್ತರಣೆಯ ಸೂಕ್ಷ್ಮ ಸಾಧನವಾಗಿ ಪರಿಣಿಮಿಸಿದವು. ಮತಾಂತರ ಎಂಬುದು ವೈಯಕ್ತಿಕ ನಂಬಿಕೆಯ ವಿಚಾರವಾಗುವುದು ನಿಂತು ಹೋದಾಗ ಮತ್ತು ಪ್ರಚೋದನೆ, ಆಮಿಷ ಅಥವಾ ದೌರ್ಬಲ್ಯಗಳ ಶೋಷಣೆಯ ಪರಿಣಾಮವಾಗಿ ನಡೆದಾಗ ಈ ಬೆದರಿಕೆ ಎದುರಾಗುತ್ತದೆ ಎಂದಿತು.

ದೂರದ ಬುಡಕಟ್ಟು ಪ್ರದೇಶಗಳಲ್ಲಿ, ಮಿಷನರಿಗಳು ಅನಕ್ಷರಸ್ಥ ಮತ್ತು ಬಡ ಕುಟುಂಬಗಳನ್ನು ಗುರಿಯಾಗಿಸಿಕೊಂಡು, ಮತಾಂತರವಾದರೆ ಹಣಕಾಸಿನ ನೆರವು, ಉಚಿತ ಶಿಕ್ಷಣ, ವೈದ್ಯಕೀಯ ಆರೈಕೆ ಅಥವಾ ಉದ್ಯೋಗ ನೀಡುತ್ತಿದ್ದಾರೆ ಎಂಬ ಆರೋಪವಿದೆ. ಇಂತಹ ನಡೆಗಳು ಸಾಂಸ್ಕೃತಿಕ ದಬ್ಬಾಳಿಕೆಗೆ ಸಮನಾಗಿರುತ್ತದೆ. ಇಂತಹ ನಡೆದಗಳು ಬುಡಕಟ್ಟು ಸಮುದಾಯಗಳಲ್ಲಿ ಆಳವಾದ ಸಾಮಾಜಿಕ ವಿಭಜನೆಗಳಿಗೆ ಕಾರಣವಾಗುತ್ತವೆ ಎಂದು ಅದು ವಿವರಿಸಿತು.

 ಬುಡಕಟ್ಟು ಸಮುದಾಯಗಳ ಸದಸ್ಯರ ಮತಾಂತರದ ಪರಿಣಾಮಗಳ ಕುರಿತಂತೆ ಪ್ರತಿಕ್ರಿಯಿಸಿದ ನ್ಯಾಯಾಲಯ ಇದು ಬುಡಕಟ್ಟು ಜನರ ಮೂಲ ಧಾರ್ಮಿಕ ನಂಬಿಕ ಮತ್ತು ಆಚರಣೆಗಳನ್ನು ಹಾಳುಗೆಡವುತ್ತದೆ. ಸ್ಥಳೀಯ ಭಾಷೆ, ಸಂಪ್ರದಾಯ, ಆಚರಣೆಗಳು ನಾಶವಾಗುವ ಸಾಧ್ಯತೆ ಇದೆ. ಮತಾಂತರಗೊಂಡವರು ತಮ್ಮ ಮೂಲ ಸಮುದಾಯದಿಂದ ಬೇರಯಾಗುವ, ತಿರಸ್ಕಾರಕ್ಕೆ ತುತ್ತಾಗುವ ಸ್ಥಿತಿ ಎದುರಾಗುತ್ತದೆ. ಅದು ಜನಸಂಖ್ಯಾ ಮಾದರಿಗಳು ಮತ್ತು ರಾಜಕೀಯ ಸಮೀಕರಣಗಳನ್ನು ಬದಲಾಯಿಸಿ ಸಂಕೀರ್ಣತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದಿತು.

Also Read
ವಿವಿಧ ರಾಜ್ಯಗಳ ಮತಾಂತರ ಕಾಯಿದೆ ಸಿಂಧುತ್ವ ಪ್ರಶ್ನಿಸಿದ್ದ ಮನವಿಗಳನ್ನು ತನಗೆ ವರ್ಗಾಯಿಸಿಕೊಂಡ ಸುಪ್ರೀಂ ಕೋರ್ಟ್

ಭಾರತದ  ಧರ್ಮನಿರಪೇಕ್ಷ ವ್ಯವಸ್ಥೆ ವೈವಿಧ್ಯತೆ ಮತ್ತು ಸಹಬಾಳ್ವೆಯ ಗೌರವದ ಮೇಲೆ ನಿಂತಿದೆ. ಆದಾಗ್ಯೂ, ಮತಾಂತರ ಎಂಬುದು ಸ್ವಯಂಪ್ರೇರಿತ ಮತ್ತು ಆಧ್ಯಾತ್ಮಿಕವಾಗಿದ್ದರೆ ಮಾತ್ರ ಅದು ಕಾನೂನುಬದ್ಧ ಆತ್ಮಸಾಕ್ಷಿಯ ಪ್ರಕ್ರಿಯೆಯಾಗುತ್ತದೆ. ದಾನಧರ್ಮದ  ಸೋಗಿನಲ್ಲಿ ಶೋಷಣೆ ಎಸಗಿದಾಗ, ಅದು ನಂಬಿಕೆ ಮತ್ತು ಸ್ವಾತಂತ್ರ್ಯ ಎರಡನ್ನೂ ದುರ್ಬಲಗೊಳಿಸುತ್ತದೆ ಎಂದು ಅದು ತಿಳಿಸಿತು.

 ವಿವಿಧ ಗ್ರಾಮಗಳಿಗೆ ಕ್ರೈಸ್ತ ಧರ್ಮೀಯರ ಪ್ರವೇಶ ನಿಷೇಧಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ವಿಚಾರ ತಿಳಿಸಿದೆ. ಅಂತೆಯೇ ಅರ್ಜಿ ತಿರಸ್ಕರಿಸಿದ ಅದು ಪ್ರವೇಶ ನಿಷೇಧ ಕುರಿತು ಗ್ರಾಮ ಪಂಚಾಯ್ತಿಗೆ ಇಲ್ಲವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಬಹುದು. ಬೆದರಿಕೆ ಇದ್ದರೆ ಪೊಲೀಸ್‌ ರಕ್ಷಣೆಗೆ ಅರ್ಜಿ ಸಲ್ಲಿಸಬಹುದು ಎಂದಿತು.

Kannada Bar & Bench
kannada.barandbench.com