ಆಂತರಿಕ ತಿಕ್ಕಾಟ, ಪ್ರತೀಕಾರದಿಂದ ಪ್ರಕರಣ ದಾಖಲು ಎಂದ ಹೈಕೋರ್ಟ್;‌ ಡಿವೈಎಸ್‌ಪಿ ಪ್ರಭು ಶಂಕರ್‌ ವಿರುದ್ಧದ ದೂರು ವಜಾ

ಸರ್ಕಾರಿ ಅಭಿಯೋಜಕರು “ಎಫ್‌ಐಆರ್‌ ವಜಾ ಮಾಡುವುದು ಇನ್ನಷ್ಟೇ ಜನ್ಮ ತಳೆಯಬೇಕಿರುವ ಭ್ರೂಣವನ್ನು ಕೊಂದಂತೆ” ಎಂದರು. ಇದಕ್ಕೆ ಪೀಠವು “ಮಗು ಕಾನೂನಾತ್ಮಕವಾಗಿ ಜನ್ಮ ಪಡೆಯಬೇಕೆ ವಿನಾ ದುರುದ್ದೇಶದಿಂದ ಸೃಷ್ಟಿಸಿದ ದಾಖಲೆಗಳಿಂದಲ್ಲ” ಎಂದಿತು.
Justice H P Sandesh and Karnataka HC
Justice H P Sandesh and Karnataka HC

ಕೇಂದ್ರೀಯ ಅಪರಾಧ ದಳದಲ್ಲಿ (ಸಿಸಿಬಿ) ಸಹಾಯಕ ಪೊಲೀಸ್‌ ಆಯುಕ್ತರಾಗಿದ್ದ ಡಿವೈಎಸ್‌ಪಿ ಪ್ರಭು ಶಂಕರ್‌ ವಿರುದ್ಧದ ಸುಲಿಗೆ ಮತ್ತು ಭ್ರಷ್ಟಾಚಾರ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾ ಮಾಡಿದೆ.

ಕಳೆದ ವರ್ಷದ ಲಾಕ್‌ಡೌನ್‌ ಸಂದರ್ಭದಲ್ಲಿ ಸಿಗರೇಟು ಉತ್ಪನ್ನಗಳ ಮಾರಾಟಗಾರರಿಂದ ಹಣ ಸುಲಿಗೆ ಮಾಡಿದ್ದರು ಎಂದು ಪ್ರಭು ಶಂಕರ್‌ ಮತ್ತು ಸಿಸಿಬಿ ಆರ್ಥಿಕ ಅಪರಾಧಗಳ ವಿಭಾಗದ ಇಬ್ಬರು ಇನ್‌ಸ್ಪೆಕ್ಟರ್‌ಗಳ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ನೇತೃತ್ವದ ಏಕಸದಸ್ಯ ಪೀಠವು ತೀರ್ಪು ಪ್ರಕಟಿಸಿದೆ.

ಅಧಿಕಾರಿಗಳ ವಿರುದ್ಧ ಪೊಲೀಸ್‌ ಠಾಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪ್ರಕರಣ ದಾಖಲಿಸಿರುವುದು ಇಲಾಖೆಯ ಒಳಗೆ ನಡೆಯುತ್ತಿರುವ ಆಂತರಿಕ ತಿಕ್ಕಾಟ ಮತ್ತು ಪ್ರತೀಕಾರವಲ್ಲದೇ ಮತ್ತೇನು ಅಲ್ಲ ಎಂದು ನ್ಯಾಯಾಲಯ ಹೇಳಿದೆ.

ಕಳಪೆ ದರ್ಜೆಯ ಮಾಸ್ಕ್‌ಗಳನ್ನು ಮಾರಾಟ ಮಾಡುತ್ತಿದ್ದ ಬಾಣಸವಾಡಿಯಲ್ಲಿರುವ ಕಂಪೆನಿ ಮತ್ತು ಸಿಗರೇಟು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವವರಿಗೆ ಲಾಕ್‌ಡೌನ್‌ ಸಂದರ್ಭದಲ್ಲಿ ಉದ್ಯಮಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಲಂಚ ಪಡೆಯಲಾಗುತ್ತಿತ್ತು ಎಂಬುದು ಸೇರಿದಂತೆ ಹಲವು ಆರೋಪಗಳನ್ನು ಡಿವೈಎಸ್‌ಪಿ ಪ್ರಭು ಶಂಕರ್‌ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಮಾಡಲಾಗಿತ್ತು. ತನಿಖೆಗೆ ಹೈಕೋರ್ಟ್‌ ತಡೆ ನೀಡಿದಾಗ ಎಸಿಬಿಯಲ್ಲಿ ಇದೇ ಅಪರಾಧಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅರ್ಜಿದಾರರು ತಗಾದೆ ಎತ್ತಿದ್ದರು.

ಉಲ್ಲೇಖಿಸಲಾದ ಆರೋಪಿಗಳ ವಿರುದ್ಧ ಯಾರೂ ಆರೋಪ ಮಾಡಿಲ್ಲ. ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಲಂಚದ ಹಣವನ್ನು ವಶಪಡಿಸಿಕೊಳ್ಳದಿರುವಾಗ ಅಧಿಕಾರಿಗಳು ಮಹಜರ್‌ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬ ವಾದವನ್ನು ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ದಾಖಲಿಸಿಕೊಂಡಿದ್ದರು.

Also Read
ನಿಗಮ, ಮಂಡಳಿಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ: ರಾಜ್ಯ ಸರ್ಕಾರಕ್ಕೆ ಕೊನೆಯ ಅವಕಾಶ ನೀಡಿದ ಕರ್ನಾಟಕ ಹೈಕೋರ್ಟ್‌

ಪಿ ಪಿ ಶರ್ಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಭಿಪ್ರಾಯವನ್ನು ಉಲ್ಲೇಖಿಸಿದ ಸರ್ಕಾರಿ ಅಭಿಯೋಜಕರು “ಎಫ್‌ಐಆರ್‌ ವಜಾ ಮಾಡುವುದು ಇನ್ನಷ್ಟೇ ಜನ್ಮ ತಳೆಯಬೇಕಿರುವ ಭ್ರೂಣವನ್ನು ಕೊಂದಂತೆ” ಎಂದರು. ಇದಕ್ಕೆ ಪೀಠವು “ಮಗು ಕಾನೂನಾತ್ಮಕವಾಗಿ ಜನ್ಮ ಪಡೆಯಬೇಕೆ ವಿನಾ ದುರುದ್ದೇಶದಿಂದ ಸೃಷ್ಟಿಸಿದ ದಾಖಲೆಗಳಿಂದಲ್ಲ” ಎಂದಿತು.

“ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿ ಈ ನ್ಯಾಯಾಲಯವು ತನಗೆ ನೀಡಿರುವ ಅಧಿಕಾರವನ್ನು ಚಲಾಯಿಸದಿದ್ದರೆ, ಕಾನೂನು ದುರ್ಬಳಕೆ ತಡೆಯುವ ತನ್ನ ಕರ್ತವ್ಯದಿಂದ ವಿಮುಖವಾದಂತೆ ಆಗುತ್ತದೆ. ಇದು ನ್ಯಾಯದಾನದ ವಿಫಲತೆಗೆ ನಾಂದಿ ಹಾಡಲಿದೆ. ಆರೋಪಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ದುರುದ್ದೇಶದಿಂದ ಪ್ರಕರಣಗಳನ್ನು ದಾಖಲಿಸಲಾಗಿದೆ. ಹೀಗಾಗಿ, ಇದು ನ್ಯಾಯದಾನ ಪ್ರಕ್ರಿಯೆಯ ದುರ್ಬಳಕೆಯಲ್ಲದೆ ಮತ್ತೇನು ಅಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿದೆ” ಎಂದು ಪೀಠ ಹೇಳಿದೆ.

Related Stories

No stories found.
Kannada Bar & Bench
kannada.barandbench.com