ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಅವರ ಮಾಜಿ ವ್ಯವಹಾರ ಪಾಲುದಾರ ಮಿಹಿರ್ ದಿವಾಕರ್ ಮತ್ತು ಮಿಹಿರ್ ಪತ್ನಿ ಸೌಮ್ಯ ದಾಸ್ ಹೂಡಿರುವ ಮಾನನಷ್ಟ ಮೊಕದ್ದಮೆ ಬಗ್ಗೆ, ಪ್ರಕರಣದ ವಿಚಾರಣೆ ನಡೆಯುವ ಮುನ್ನ ಧೋನಿ ಅವರಿಗೆ ಮಾಹಿತಿ ನೀಡುವುದು ಸೂಕ್ತ ಎಂದು ದೆಹಲಿ ಹೈಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ (ಮಿಹಿರ್ ದಿವಾಕರ್ ಮತ್ತು ಮಹೇಂದ್ರ ಸಿಂಗ್ ಧೋನಿ ಇನ್ನಿತರರ ನಡುವಣ ಪ್ರಕರಣ).
ಪ್ರಕರಣದ ಬಗ್ಗೆ ಕ್ರಿಕೆಟಿಗ ಧೋನಿ ಅವರಿಗೆ ಮಾಹಿತಿ ನೀಡುವಂತೆ ನ್ಯಾ. ಪ್ರತಿಭಾ ಸಿಂಗ್ ಅವರು ನ್ಯಾಯಾಲಯದ ರಿಜಿಸ್ಟ್ರಿ ಮತ್ತು ಅರ್ಜಿದಾರ ಮಿಹಿರ್ ಅವರಿಗೆ ನಿರ್ದೇಶನ ನೀಡಿದರು. ಜನವರಿ 29ಕ್ಕೆ ವಿಚಾರಣೆ ಮುಂದೂಡಲಾಗಿದೆ.
2017ರ ಒಪ್ಪಂದದ ಉಲ್ಲಂಘನೆಗೆ ಸಂಬಂಧಿಸಿದಂತೆ ಧೋನಿ ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವವರು ತಮ್ಮ ವಿರುದ್ಧ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ತಡೆ ನೀಡಬೇಕೆಂದು ದಿವಾಕರ್ ಮತ್ತು ಸೌಮ್ಯ ಕೋರಿದ್ದರು.
ಭಾರತ ಮತ್ತು ವಿವಿಧ ದೇಶಗಳಲ್ಲಿ ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಲು ಧೋನಿ ಅವರು ಮಿಹಿರ್ ಮತ್ತು ಸೌಮ್ಯ ಒಡೆತನದ ಆರ್ಕಾ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು.
ರಾಂಚಿ ನ್ಯಾಯಾಲಯದ ಹೊರಗೆ ಪತ್ರಿಕಾಗೋಷ್ಠಿ ನಡೆಸಿ ಅವರ ಮತ್ತು ಅವರ ಪತ್ನಿ ವಿರುದ್ಧ ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ ಎಂದು ಮಂಗಳವಾರ ನ್ಯಾಯಮೂರ್ತಿ ಸಿಂಗ್ ಅವರೆದುರು ಪ್ರಕರಣ ಬಂದಾಗ, ಮಿಹಿರ್ ಪರ ವಕೀಲರು ದೂರಿದರು.
ಆದರೆ ಆರೋಪಗಳ ಬಗ್ಗೆ ಮತ್ತು ದಾವೆ ನಿರ್ವಹಣಾರ್ಹವೇ ಎಂದು ವಿಚಾರಣೆ ನಡೆಸುವ ಮುನ್ನ ಮಾನನಷ್ಟ ಮೊಕದ್ದಮೆ ಹೂಡಿರುವ ಕುರಿತು ಧೋನಿ ಅವರಿಗೆ ತಿಳಿಸುವುದು ಸೂಕ್ತ ಎಂದಿತು.
ಹೀಗಾಗಿ ಧೋನಿ ಅವರಿಗೆ ಇ-ಮೇಲ್ ಮತ್ತು ಫೋನ್ ಮೂಲಕ ಜೊತೆಗೆ ರಾಂಚಿ ನ್ಯಾಯಾಲಯದಲ್ಲಿ ಅವರನ್ನು ಪ್ರತಿನಿಧಿಸುವ ಕಾನೂನು ಸಂಸ್ಥೆ ಮುಖೇನ ತಿಳಿಸುವಂತೆ ನ್ಯಾಯಮೂರ್ತಿ ಸಿಂಗ್ ಆದೇಶಿಸಿದರು.
ಈ ಮಧ್ಯೆ, ಪ್ರಕರಣದಲ್ಲಿ ಪ್ರತಿವಾದಿಯಾದ ಎಎನ್‌ಐ ಸುದ್ದಿಸಂಸ್ಥೆ ತನ್ನ ವಿರುದ್ಧದ ದಾವೆ ನಿರ್ವಹಣಾಯೋಗ್ಯವಲ್ಲ ಎಂದಿದೆ. ಮಿಹಿರ್ ವಿರುದ್ಧ ರಾಂಚಿ ನ್ಯಾಯಾಲಯದಲ್ಲಿ ಬಾಕಿ ಇರುವ ಕ್ರಿಮಿನಲ್ ವಿಚಾರಣೆಯನ್ನು ಎಎನ್ಐ ಪ್ರಕಟಿಸಿದೆ ಎಂದು ಸುದ್ದಿಸಂಸ್ಥೆಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವ ಮೊದಲೇ ಧೋನಿ ಪರ ವಕೀಲ ದಯಾನಂದ ಶರ್ಮಾ ಅವರು ಜನವರಿ 6, 2024 ರಂದು ಪತ್ರಿಕಾಗೋಷ್ಠಿ ನಡೆಸಿ ಮಾನನಷ್ಟದ ಆರೋಪಗಳನ್ನು ಮಾಡಿದ್ದರು ಎಂದು ಮಾಜಿ ಕ್ರಿಕೆಟಿಗರೂ ಆಗಿರುವ ಮಿಹಿರ್ ದೂರಿದ್ದರು.
ಧೋನಿ ಮತ್ತು ಅವರ ಪ್ರತಿನಿಧಿಗಳ ಈ ಆರೋಪಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದ್ದು, ಇದು ತಮ್ಮ ವರ್ಚಸ್ಸಿಗೆ ಕಳಂಕ ತಂದಿದೆ. ಆದ್ದರಿಂದ, ಧೋನಿ ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವವರು ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಆರೋಪಗಳನ್ನು ಮಾಡದಂತೆ ತಡೆ ನೀಡುವಂತೆ ಮಿಹಿರ್ ಮತ್ತು ಸೌಮ್ಯ ಅರ್ಜಿ ಸಲ್ಲಿಸಿದ್ದರು.