ಮಾನಸಿಕ ಆರೋಗ್ಯ ಸಮಸ್ಯೆ ಇರುವವರ ವಿರುದ್ಧ ಶಿಸ್ತು ಪ್ರಕ್ರಿಯೆ ಜಾರಿಯು ಪರೋಕ್ಷ ತಾರತಮ್ಯದ ಮುಖ: ಸುಪ್ರೀಂ ಕೋರ್ಟ್‌

ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಯು ಆರ್‌ಪಿಬಡಬ್ಲುಡಿ ಕಾಯಿದೆ ಅಡಿ ರಕ್ಷಣೆಗೆ ಅರ್ಹವಾಗಿರುತ್ತಾರೆ. ಎಲ್ಲಿಯವರೆಗೆ ಅಸ್ವಸ್ಥತೆ ತಾರತಮ್ಯಕ್ಕೆ ಕಾರಣವಾಗಿರುತ್ತದೆಯೋ ಅಲ್ಲಿಯವರೆಗೂ ಅವರು ರಕ್ಷಣೆಗೆ ಅರ್ಹರು ಎಂದ ಸುಪ್ರೀಂ.
Justice Surya kant, Justice DY Chandtachud and Justice Vikram Nath

Justice Surya kant, Justice DY Chandtachud and Justice Vikram Nath

Published on

ಕೆಲಸದ ಸ್ಥಳದ ಮಾನದಂಡಗಳನ್ನು ಪಾಲಿಸುವ ವಿಚಾರದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಅಶಕ್ತರಾಗಿದ್ದು, ಅಂಥವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದು ಪರೋಕ್ಷ ತಾರತಮ್ಯದ ಮುಖವಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಗುವಾಹಟಿ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಸಿಆರ್‌ಪಿಎಫ್‌ ಅಧಿಕಾರಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌, ಸೂರ್ಯಕಾಂತ್‌ ಮತ್ತು ವಿಕ್ರಮ್‌ನಾಥ್‌ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಿತು. ಮಾನಸಿಕ ಅಸ್ವಸ್ಥತೆಯ ಹಿನ್ನೆಲೆಯಲ್ಲಿ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದ್ದನ್ನು ಮನವಿಯಲ್ಲಿ ಪ್ರಶ್ನಿಸಲಾಗಿದೆ.

“ಎಲ್ಲಾ ರೀತಿಯಲ್ಲೂ ಸದೃಢವಾಗಿರುವ ತಮ್ಮ ಸಹೋದ್ಯೋಗಿಗಳಿಗೆ ಹೋಲಿಕೆ ಮಾಡಿದರೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರು ಕೆಲಸದ ಸ್ಥಳದಲ್ಲಿ ಕರ್ತವ್ಯದ ಮಾನದಂಡಗಳನ್ನು ಪಾಲಿಸುವ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ದುರ್ಬಲತೆಯಿಂದಾಗಿ ಅಂತಹ ವ್ಯಕ್ತಿಗಳು ಅಸಮಾನವಾದ ಅನನುಕೂಲತೆಯನ್ನು ಅನುಭವಿಸುತ್ತಾರೆ. ಹೀಗಾಗಿ, ಅವರು ಶಿಸ್ತುಕ್ರಮಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂಥ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಇರುವವರ ವಿರುದ್ಧ ಶಿಸ್ತು ಪ್ರಕ್ರಿಯೆ ಜಾರಿಯು ಪರೋಕ್ಷ ತಾರತಮ್ಯದ ಮುಖವಾಗಿದೆ” ಎಂದು ಪೀಠವು ಅಭಿಪ್ರಾಯಪಟ್ಟಿದೆ.

ಮಾನಸಿಕ ಅಸ್ವಸ್ಥತೆ ಹೊಂದಿರುವವರು ವೈಕಲ್ಯ ಹೊಂದಿರುವ ವ್ಯಕ್ತಿಗಳ ಹಕ್ಕುಗಳ (ಆರ್‌ಪಿಬಡಬ್ಲುಡಿ) ಕಾಯಿದೆ 2016ರ ಅಡಿ ರಕ್ಷಣೆಗೆ ಅರ್ಹವಾಗಿರುತ್ತಾರೆ. ಎಲ್ಲಿಯವರೆಗೆ ಅಸ್ವಸ್ಥತೆಯು ತಾರತಮ್ಯಕ್ಕೆ ಕಾರಣವಾಗಿರುತ್ತದೆಯೋ ಅಲ್ಲಿಯವರೆಗೂ ಅವರು ರಕ್ಷಣೆಗೆ ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Also Read
ಮಾನಸಿಕ ಆರೋಗ್ಯದ ಮೇಲೆ ಪರಿಣಾಮ: ವಿಚ್ಛೇದನ ಕೋರಿದ್ದ ಮಹಿಳೆಗೆ ಗರ್ಭಪಾತಕ್ಕೆ ಅನುಮತಿಸಿದ ಬಾಂಬೆ ಹೈಕೋರ್ಟ್‌

“ಮಾನಸಿಕ ಆರೋಗ್ಯ ಅಸ್ವಸ್ಥತೆಗಳಿರುವ ವ್ಯಕ್ತಿಗಳನ್ನು ಇತರರು ಹೇಗೆ ಗ್ರಹಿಸುತ್ತಾರೆ ಎಂಬುದನ್ನು ಪ್ರಭಾವಿಸುತ್ತದೆ. ಇದು ಅವರ ಸ್ವಾಭಿಮಾನದ ಮೇಲೆ ಪ್ರಭಾವ ಬೀರುತ್ತದೆ. ಮಾನಸಿಕ ಆರೋಗ್ಯ ಅಸ್ವಸ್ಥತೆಗಳು ಸಾಮಾನ್ಯವಾಗಿ ಆಂತರಿಕ ಕಾರಣಕ್ಕೆ ಕಾರಣವಾಗುತ್ತವೆ. ಇದಕ್ಕಾಗಿ ವ್ಯಕ್ತಿಯು ಜವಾಬ್ದಾರನಾಗಿರುತ್ತಾನೆ. ಇದು ಕಳಂಕ ಮತ್ತು ಪೂರ್ವಾಗ್ರಹವನ್ನು ಹೆಚ್ಚಿಸುತ್ತದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

“ಸಾಮಾಜಿಕ ತಾರತಮ್ಯವು ಕಾನೂನು ತಾರತಮ್ಯವಾಗಿ ಪರಿವರ್ತನೆಯಾಗದಂತೆ ಖಾತರಿವಹಿಸುವುದು ದೇಶದ ಅತ್ಯುನ್ನತ ಸಾಂವಿಧಾನಿಕ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ ವ್ಯಾಪ್ತಿಗೆ ಒಳಪಡುತ್ತದೆ” ಎಂದು ಪೀಠ ಹೇಳಿದೆ.

Kannada Bar & Bench
kannada.barandbench.com