
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಕಳೆದ ತಿಂಗಳ ಮೊದಲ ವಾರದಲ್ಲಿ ಘಟಿಸಿದ್ದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಈಚೆಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿಯು ಬಹಿರಂಗಗೊಂಡಿದೆ.
ಕೆಟ್ಟದಾಗಿ ಕಾರ್ಯಕ್ರಮ ಆಯೋಜಿಸಿದ್ದು ದುರ್ಘಟನೆಗೆ ಕಾರಣ ಎಂಬ ರಾಜ್ಯ ಸರ್ಕಾರದ ವಾದವು ವರದಿಯಲ್ಲಿ ಪ್ರತಿಧ್ವನಿಸಿದೆ.
ನ್ಯಾಯಾಂಗ ಆಯೋಗ ಮತ್ತು ಮ್ಯಾಜಿಸ್ಟೀರಿಯಲ್ ತನಿಖೆಯ ವರದಿ ಬರುವವರೆಗೆ ವಸ್ತುಸ್ಥಿತಿ ವರದಿಯನ್ನು ಬಹಿರಂಗಗೊಳಿಸದಂತೆ ಸರ್ಕಾರವು ನ್ಯಾಯಾಲಯವನ್ನು ಕೋರಿಕೊಂಡಿತ್ತು. ಆದರೆ, ಜುಲೈ 8ರ ವಿಚಾರಣೆಯಂದು ವಸ್ತುಸ್ಥಿತಿ ವರದಿಯನ್ನು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವವರಿಗೆ ಹಂಚುವಂತೆ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶಿಸಿತ್ತು.
ಸಂಘಟಕರು ತುರ್ತು ಮತ್ತು ಮುನ್ನೆಚ್ಚರಿಕೆ ಕ್ರಮಕೈಗೊಂಡಿರಲಿಲ್ಲ: ಕಾರ್ಯಕ್ರಮ ಆಯೋಜಕರು ಕ್ರೀಡಾಂಗಣದಲ್ಲಿ ಪ್ರಥಮ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂಬ ಭಾವನೆ ಉಂಟು ಮಾಡಿದ್ದರು. ಆದರೆ, ಸಂದರ್ಭ ನಿರ್ಮಾಣವಾದ ಅದನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಸಂಘಟಕರು ಮುಂಚಿತವಾಗಿ ಕಾರ್ಯಕ್ರಮ ಆಯೋಜನೆಗೆ ಅನುಮತಿ ಕೋರಿದ್ದರೆ ಸಕ್ಷಮ ಪ್ರಾಧಿಕಾರವು ತುರ್ತು ವೈದ್ಯಕೀಯ ವ್ಯವಸ್ಥೆ ಸೂಕ್ತವಾಗಿದೆಯೇ ಅಥವಾ ಅದಕ್ಕೆ ಪೂರಕವಾಗಿ ಏನೆಲ್ಲಾ ಮಾಡಬಹುದು ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿತ್ತು. ಕಾರ್ಯಕ್ರಮ ಆಯೋಜಿಸಲು ಮುಂಚಿತವಾಗಿ ಅನುಮತಿ ಕೋರದೇ ಇರುವುದರಿಂದ ಸಕ್ಷಮ ಪ್ರಾಧಿಕಾರ ಅದಕ್ಕೆ ವ್ಯವಸ್ಥೆ ಮಾಡಲಾಗಲಿಲ್ಲ ಎಂದು ಸರ್ಕಾರ ಹೇಳಿದೆ.
ಅದಾಗ್ಯೂ, ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಆಂಬುಲೆನ್ಸ್, ಅಗ್ನಿಶಾಮಕ ದಳ ಹಾಗೂ ವೈದ್ಯರು, ಶುಶ್ರೂಷಕಿಯರನ್ನು ಒಳಗೊಂಡ ಎರಡು ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿತ್ತು. ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿದು ಆರ್‌ಸಿಬಿ/ಡಿಎನ್‌ಎ/ಕೆಎಸ್‌ಸಿಎ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವುದು ಪ್ರಾಥಮಿಕ ಕರ್ತವ್ಯ ಮತ್ತು ಜವಾಬ್ದಾರಿ ಆದರೂ ಅದನ್ನು ಮಾಡಿರಲಿಲ್ಲ” ಎಂದು ವರದಿಯಲ್ಲಿ ಹೇಳಲಾಗಿದೆ.
ಜನಸಂದಣಿ ಅಂದಾಜಿಸಲು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಕಾಲಾವಕಾಶ ಇರಲಿಲ್ಲ: ಕಾರ್ಯಕ್ರಮಕ್ಕೆ ಎಷ್ಟು ಜನರು ಬರಬಹುದು ಎಂದು ಅಂದಾಜಿಸಲು ರಾಜ್ಯ ಸರ್ಕಾರವು ಸಕಾರಣ ವಿಶ್ಲೇಷಣೆ ಮಾಡಿರಲಿಲ್ಲ. ಜೂನ್ 4ರಂದು ಜನಸಂದಣಿ ಅನಿರೀಕ್ಷಿತವಾಗಿ ಹೆಚ್ಚಾಗಿತ್ತು. “ಸಂಭಾವ್ಯ ಜನಸಂದಣಿಯ ಗಾತ್ರದ ಪ್ರಾಯೋಗಿಕ ಅಂದಾಜು ಮಾಡಲು ನಗರ ಪೊಲೀಸರಿಗೆ ಸೂಕ್ತ ಸಮಯ ನೀಡಲಾಗಿರಲಿಲ್ಲ” ಎಂದು ವಸ್ತುಸ್ಥಿತಿ ವರದಿಯಲ್ಲಿ ತಿಳಿಸಲಾಗಿದೆ.
ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಎಷ್ಟು ಸಮಯ ತೆಗೆದುಕೊಳ್ಳಲಾಗಿದೆ ಎಂಬುದರ ಮಾಹಿತಿ ಇಲ್ಲ: ಗಾಯಾಳುಗಳಿಗೆ ಘಟನಾ ಸ್ಥಳದಲ್ಲಿ ಚಿಕಿತ್ಸೆ ನೀಡಿರುವುದು, ಅವರನ್ನು ಆಸ್ಪತ್ರೆಗೆ ವರ್ಗಾಯಿಸಿರುವುದರ ಬಗ್ಗೆ ನಿರ್ದಿಷ್ಟ ಮಾಹಿತಿ ಇಲ್ಲ. ಈ ಕುರಿತು ತನಿಖೆ ನಡೆಯುತ್ತಿದ್ದು, ಅದನ್ನು ಕಾಲಕ್ರಮೇಣ ಸಲ್ಲಿಸಲಾಗುವುದು ಎಂದು ವಸ್ತುಸ್ಥಿತಿ ವರದಿಯಲ್ಲಿ ತಿಳಿಸಲಾಗಿದೆ.
ಸಾವನ್ನಪ್ಪಿದವರು/ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಿರುವುದು ಮತ್ತು ಆಸ್ಪತ್ರೆಯ ವೈದ್ಯಕೀಯ ಕಾನೂನು ಮಾಹಿತಿಯನ್ನು ಪಟ್ಟಿ ಸಮೇತ ನೀಡಲಾಗಿದೆ. ಇದರಲ್ಲಿ ಯಾವ ಸಂದರ್ಭ ಸಂತ್ರಸ್ತರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂಬ ಮಾಹಿತಿ ಅಡಕಗೊಳಿಸಲಾಗಿದೆ.
ಘಟನೆಗೂ ಮುನ್ನ ಮತ್ತು ಆನಂತರ ನಿಯೋಜಿಸಿದ್ದ ಪೊಲೀಸ್ ಮತ್ತು ಭದ್ರಾತಾ ಮಾಹಿತಿ: ಜೂನ್ 4ರ ಕಾರ್ಯಕ್ರಮದ ಭಾಗವಾಗಿ 654 ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ಸಂಚಾರ ದಟ್ಟಣೆ ನಿಯಂತ್ರಿಸಲು ನಿಯೋಜಿಸಲಾಗಿತ್ತು. ಇದರ ಜೊತೆಗೆ ಸಾರ್ವಜನಿಕರಿಗೆ ಸಂಚಾರದ ಮಾಹಿತಿ, ತಿರುವುಗಳ ಮಾಹಿತಿ ಜೊತೆಗೆ ವಿಜಯೋತ್ಸವ ಯಾತ್ರೆಯ ಮಾಹಿತಿಯನ್ನು ನೀಡಲಾಗಿತ್ತು. ಮಧ್ಯಾಹ್ನ 12 ಗಂಟೆ ವೇಳೆಗೆ ಶಾಲೆ ಪೂರ್ಣಗೊಳಿಸುವಂತೆ ಶಾಲೆಗಳಿಗೆ ಮಾಹಿತಿ ನೀಡಲಾಗಿತ್ತು. ಅಲ್ಲದೆ, ನಿರ್ದಿಷ್ಟ ನಿಯಂತ್ರಣ ಕೊಠಡಿ ರೂಪಿಸಲಾಗಿತ್ತು.
ಕಾಲ್ತುಳಿತ ವರದಿಯಾಗುತ್ತಿದ್ದಂತೆ 20 ರಾಜ್ಯ ಮೀಸಲು ಪೊಲೀಸ್ ಪಡೆಯ 440 ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು; ಕ್ರೀಡಾಂಗಣದಲ್ಲಿನ ಜನಸಂದಣಿಯನ್ನು ಹೊರ ಹೋಗುವಂತೆ ಮಾಡಲು 200 ತರಬೇತಿಯಲ್ಲಿದ್ದ ಸಿಬ್ಬಂದಿ, ಸಿಬ್ಬಂದಿ ಹಾಗೂ ಆರು ಡಿಸಿಪಿಗಳನ್ನು ನಿಯೋಜಿಸಲಾಗಿತ್ತು. “ಬೆಂಗಳೂರು ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ಲಭ್ಯ ಇರುವ ಪೊಲೀಸ್ ಸಿಬ್ಬಂದಿಯ ಜೊತೆಗೆ ತಕ್ಷಣ ಘಟನಾ ಸ್ಥಳಕ್ಕೆ ಬಂದು ಜನಸಂದಣಿ ನಿಯಂತ್ರಿಸುವಂತೆ ಪೊಲೀಸ್ ಆಯುಕ್ತರು ಸೂಚಿಸಿದ್ದರು” ಎಂದು ವರದಿಯಲ್ಲಿ ಹೇಳಲಾಗಿದೆ.
ಜನಸಂದಣಿ ನಿಯಂತ್ರಣಕ್ಕೆ ನೂತನ ನೀತಿ: ಪರವಾನಗಿ ಮತ್ತು ಸಾರ್ವಜನಿಕ ಸಭೆ ಹಾಗೂ ಮೆರವಣಿಗೆ (ಬೆಂಗಳೂರು ನಗರ) ನಿಯಂತ್ರಣ ಆದೇಶ 2009 ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾರ್ಗಸೂಚಿಯ ಜೊತೆಗೆ ಕಾರ್ಯಕ್ರಮಕ್ಕೆ ಬೃಹತ್ ಪ್ರಮಾಣದಲ್ಲಿ ಜನ ಸೇರುವುದನ್ನು ನಿಯಂತ್ರಿಸುವುದಕ್ಕಾಗಿ ಹೊಸ ನಿರ್ದಿಷ್ಟ ನೀತಿಯನ್ನು ರೂಪಿಸಲು ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ ಎಂದು ಸರ್ಕಾರ ಹೇಳಿದೆ.