ಮುಂಬೈ ಪೊಲೀಸರು ದಾಖಲಿಸಿರುವ ಹಣ ದುರುಪಯೋಗದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಬುಧವಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಕಿರೀಟ್ ಸೋಮೈಯ ಅವರಿಗೆ ನಿರೀಕ್ಷಣಾ ಜಾಮೀನು ನೀಡುವ ಮೂಲಕ ಮಧ್ಯಂತರ ಪರಿಹಾರ ನೀಡಿದೆ.
ಐಎನ್‌ಎಸ್ ವಿಕ್ರಾಂತ್ ವಿಮಾನವಾಹಕ ನೌಕೆಯನ್ನು ಕಳಚದಂತೆ ರಕ್ಷಿಸಲು ಸಂಗ್ರಹಿಸಿದ್ದ ₹ 50 ಕೋಟಿಗೂ ಹೆಚ್ಚು ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸೋಮೈಯ ಮತ್ತು ಅವರ ಪುತ್ರನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಸೋಮೈಯ ಅವರನ್ನು ಬಂಧಿಸಿದಲ್ಲಿ ₹ 50,000 ಜಾಮೀನು ಬಾಂಡ್ ಸಲ್ಲಿಸಿದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಮತ್ತು ಏಪ್ರಿಲ್ 18, 2022ರಿಂದ ನಾಲ್ಕು ದಿನಗಳ ಕಾಲ ಮುಂಬೈ ಪೊಲೀಸ್ ಆರ್ಥಿಕ ಅಪರಾಧ ವಿಭಾಗದ ಮುಂದೆ ಹಾಜರಾಗಬೇಕು ಎಂದು ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಆದೇಶಿಸಿದ್ದಾರೆ.
ಅರ್ಜಿಯ ಕುರಿತು ಮಹಾರಾಷ್ಟ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದ ನ್ಯಾಯಾಲಯ, ಮುಂದಿನ ವಿಚಾರಣೆಯವರೆಗೂ ಸೋಮೈಯ ಅವರಿಗೆ ಬಂಧನದಿಂದ ರಕ್ಷಣೆ ಮುಂದುವರೆಯುತ್ತದೆ ಎಂದು ಸೂಚಿಸಿತು. ಈ ಮಧ್ಯೆ ಪ್ರತಿಕ್ರಿಯೆ ಸಲ್ಲಿಸಲು ನ್ಯಾಯಾಲಯ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದೆ. ಸೋಮೈಯ ಪರ ಹಿರಿಯ ನ್ಯಾಯವಾದಿ ಅಶೋಕ್ ಮುಂಡರಗಿ ವಾದ ಮಂಡಿಸಿದರು. ಆರ್ಥಿಕ ಅಪರಾಧ ವಿಭಾಗವನ್ನು ವಕೀಲ ಶಿರೀಷ್ ಗುಪ್ತೆ ಪ್ರತಿನಿಧಿಸಿದ್ದರು.