

ನಂದಿನಿ ಹಾಲು ಹಾಗೂ ಉತ್ಪನ್ನಗಳ ಸೇವನೆಗೆ ಯೋಗ್ಯವಲ್ಲ ಎಂದು ಅಪಪ್ರಚಾರ ಮಾಡುವಂಥ ವಿಡಿಯೊ ಮಾಡಿ ಇನ್‌ಸ್ಟಾಗ್ರಾಂ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ಆರೋಪ ಎದುರಿಸುತ್ತಿರುವ ನಗರದ ವೈದ್ಯೆ ಡಾ. ಶರಣ್ಯಾ ಪದ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಬೆಂಗಳೂರಿನ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಹಾಗೂ 32ನೇ ಎಸಿಜೆಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಮೂಲತಃ ಕೋಲಾರ ಜಿಲ್ಲೆಯ ಮಾಲೂರಿನ ಡಾ. ಶರಣ್ಯಾ ಪದ್ಮ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ವಿರುದ್ಧ ಎಫ್‌ಐಆರ್‌ಗೆ ತಡೆ ನೀಡಲು ನಿರಾಕರಿಸಿತು. ಜತೆಗೆ, ಅರ್ಜಿ ಸಂಬಂಧ ರಾಜ್ಯ ಸರ್ಕಾರ, ಕೆಎಂಎಫ್ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಪೀಠವು “ನೀವು ಹಾಲು ಪರೀಕ್ಷೆ ಮಾಡಿ, ದೃಢೀಕರಣ ಮಾಡಿದ್ದೀರಾ? ಆ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಿಕೊಟ್ಟಿದ್ದೀರಾ? ಇನ್‌ಸ್ಟಾಗ್ರಾಂ ಇರುವುದು ಇಂತಹ ಕೆಲಸ ಮಾಡುವುದಕ್ಕಾಗಿಯೇ? ಹಾಲು ಚೆನ್ನಾಗಿಲ್ಲ ಎಂದರೆ ನೀವು ಕುಡಿಯಬೇಡಿ. ನಿಮಗಿಷ್ಟವಿಲ್ಲದಿದ್ದರೆ ನೀವು ಸುವಾಸಿತ ಹಾಲನ್ನೂ ಕುಡಿಯಬೇಡಿ. ಆದರೆ, ಈ ರೀತಿ ಅಪಪ್ರಚಾರದ ಕೆಲಸ ಏಕೆ ಮಾಡುತ್ತೀರಾ? ಜನರಿಗೆ ಏಕೆ ತಪ್ಪು ಮಾಹಿತಿ ಕೊಡುತ್ತೀರಿ” ಎಂದು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.
ಪ್ರಕರಣದ ಹಿನ್ನೆಲೆ: ಖಾಸಗಿ ಆಸ್ಪತ್ರೆಯೊಂದರಲ್ಲಿ ಚರ್ಮರೋಗ ತಜ್ಞೆಯಾಗಿರುವ ಶರಣ್ಯಾ ಅವರು 2026ರ ಫೆಬ್ರವರಿ 8ರಂದು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕ ನಂದಿನಿ ಹಾಲಿನ ಉತ್ಪನ್ನಗಳ ಬಗ್ಗೆ ಅಪಪ್ರಚಾರ ಮಾಡಿದ್ದರು. ನಂದಿನಿ ಉತ್ಪನ್ನಗಳಾದ ಕ್ರೀಮ್‌ಬನ್, ಸ್ಟ್ರಾಬೆರಿ ಫ್ಲೇವರ್ಡ್ ಮಿಲ್ಕ್ ಹಾಗೂ ಸ್ಪಾಶ್ ಪಾನೀಯ ಉತ್ಪನ್ನಗಳು ವಿಷಕಾರಿ ಹಾಗೂ ರಾಸಾಯನಿಕಯುಕ್ತವಾಗಿದೆ. ದೀರ್ಘಾವಧಿಯಲ್ಲಿ ಇವುಗಳ ಸೇವನೆಯಿಂದ ಭವಿಷ್ಯದಲ್ಲಿ ಕ್ಯಾನ್ಸರ್ ಬರಲಿದೆ. ಈ ಉತ್ಪನ್ನಗಳನ್ನು ಕೃತಕ ಬಣ್ಣ ಬೆರೆಸಿ ತಯಾರಿಸಿದ್ದಾರೆ. ಎಫ್‌ಎಸ್‌ಎಸ್‌ಎಐ ನಂದಿನಿ ಉತ್ಪನ್ನಗಳ ತಯಾರಿಕೆಗೆ ಹೇಗೆ ಅನುಮತಿ ನೀಡಿದ್ದಾರೆ ಎಂದು ವಿಡಿಯೊನಲ್ಲಿ ಪ್ರಶ್ನಿಸಿದ್ದರು.
ಜೊತೆಗೆ, ಕೆಎಂಎಫ್ ಸರ್ಕಾರಿ ಸ್ವಾಮ್ಯದ್ದಾಗಿದ್ದು, ಉತ್ಪನ್ನಗಳ ಉತ್ಪಾದನೆ ಹಾಗೂ ಮಾರ್ಕೆಟಿಂಗ್ ಮಾಡಿ ಲಾಭ ಮಾಡುತ್ತಿರುವ ಬಗ್ಗೆ ಭ್ರಮೆಯಲ್ಲಿ ಸರ್ಕಾರವಿದೆ. ಆದ್ದರಿಂದ, ಕೆಎಂಎಫ್ ರೀತಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಬಾರದು ಎಂದು ರೀಲ್ಸ್‌ನಲ್ಲಿ ಹೇಳಿದ್ದರು. ಆ ವಿಡಿಯೊ ಇನ್ಸ್‌ಸ್ಟಾಗ್ರಾಂನಲ್ಲಿ ವ್ಯಾಪಕವಾಗಿ ಪ್ರಸಾರವಾಗಿತ್ತು.
ಈ ಸಂಬಂಧ ಕೆಎಂಎಫ್ ನಿರ್ದೇಶಕಿ ಆರ್ ಪದ್ಮಾವತಿ ಅವರು, ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಶರಣ್ಯಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ದೂರು ಆಧರಿಸಿ ಪೊಲೀಸರು ಡಾ. ಶರಣ್ಯಾ ವಿರುದ್ಧ ಬಿಎನ್‌ಎಸ್ ಕಾಯಿದೆ 353(1)ಬಿ (ಸುಳ್ಳು ಮಾಹಿತಿ ಹಬ್ಬಿಸುವುದು) ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಡಿ (ಕಂಪ್ಯೂಟರ್ ಸಂಪನ್ಮೂಲ ಬಳಸಿ ಇತರರ ಸೋಗು ಹಾಕಿ ವಂಚನೆ ಎಸಗುವುದು) ಅಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.