[ಮಂಗಳೂರು ಕಾರಾಗೃಹದಲ್ಲಿ ಜಾಮರ್‌ ಅಳವಡಿಕೆ] ನ್ಯಾಯಾಲಯ ಸಂಕೀರ್ಣದಲ್ಲಿ ತೊಂದರೆ: ವರದಿ ಸಲ್ಲಿಸಲು ಹೈಕೋರ್ಟ್‌ ಸೂಚನೆ

ಜಾಮರ್‌ಗಳಿಂದ ಬರುವ ಜಾಮಿಂಗ್ ಸಿಗ್ನಲ್‌ಗಳು ನ್ಯಾಯಾಲಯದಲ್ಲಿನ ಮೊಬೈಲ್ ಸಿಗ್ನಲ್‌ಗಳ ಮೇಲೆ ಯಾವುದಾದರೂ ಪ್ರತಿಕೂಲ ಪರಿಣಾಮ ಬೀರುತ್ತವೆಯೇ ಎಂಬ ಬಗ್ಗೆ ತಾಂತ್ರಿಕ ವರದಿಯಲ್ಲಿ ತಿಳಿಸುವಂತೆನಿರ್ದೇಶಿಸಿದ ನ್ಯಾಯಾಲಯ.
Karnataka HC and Justice Suraj Govindaraj
Karnataka HC and Justice Suraj Govindaraj
Published on

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಹೊಸದಾಗಿ ಅಳವಡಿಸಲಾಗಿರುವ ಐದು ಜಾಮರ್‌ಗಳಿಂದ ಕೊಡಿಯಾಲಬೈಲ್‌ನಲ್ಲಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಕಲಾಪಗಳಿಗೆ ಅಡ್ಡಿಯಾಗುತ್ತಿದೆ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ, ಕಾರಾಗೃಹ ಹಾಗೂ ನ್ಯಾಯಾಲಯದ ಆವರಣದಲ್ಲಿನ ಮೊಬೈಲ್ ಸಿಗ್ನಲ್ ಸಾಮರ್ಥ್ಯ ಕುರಿತ ತಾಂತ್ರಿಕ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.

ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್‌ಗಳನ್ನು ತಕ್ಷಣವೇ ತೆರವುಗೊಳಿಸಲು ಗೃಹ ಇಲಾಖೆ, ಜೈಲು ಅಧೀಕ್ಷಕರು ಸೇರಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಮಂಗಳೂರು ವಕೀಲರ ಸಂಘ ಮತ್ತದರ ಅಧ್ಯಕ್ಷ ಎಚ್ ವಿ ರಾಘವೇಂದ್ರ ಹಾಗೂ ಕಾರ್ಯದರ್ಶಿ ಶ್ರೀಧರ ಹೊಸಮನೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ನಡೆಸಿತು.

ಹಿರಿಯ ವಕೀಲ ಪಿ ಪಿ ಹೆಗ್ಡೆ ಅವರು “ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಇತ್ತೀಚೆಗೆ ಮೊಬೈಲ್ ಜಾಮರ್‌ಗಳನ್ನು ಅಳವಡಿಸಲಾಗಿದ್ದು, ಇದರಿಂದ, ಸುತ್ತ ಒಂದೂವರೆಯಿಂದ ಎರಡು ಕಿ ಮೀ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮಸ್ಯೆ ಉಂಟಾಗುತ್ತಿದೆ. ಕಾರಾಗೃಹದ ಒಂದು ಕಿ ಮೀ ಪರಿಧಿಯೊಳಗೆ ನ್ಯಾಯಾಲಯ ಸಂಕೀರ್ಣ ಹಾಗೂ ಮಂಗಳೂರು ವಕೀಲರ ಸಂಘದ ಕಚೇರಿ ಇದೆ. ಜಾಮರ್‌ಗಳ ಅಳವಡಿಕೆಯಿಂದ ಕೋರ್ಟ್ ಹಾಗೂ ಸಂಘದ ಕಾರ್ಯಚಟುವಟಿಕೆಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಪೀಠಕ್ಕೆ ವಿವರಿಸಿದರು.

ಜಾಮರ್‌ಗಳು ಕಾರಾಗೃಹದ ಆವರಣದೊಳಗಷ್ಟೇ ಕಾರ್ಯನಿರ್ವಹಿಸಿದರೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಸುತ್ತಮುತ್ತಲ ಪ್ರದೇಶದಲ್ಲೂ ಸಮಸ್ಯೆ ಎದುರಾಗಿದೆ. ಜಾಮರ್‌ಗಳಿಂದಾಗಿ ವಕೀಲರು, ನ್ಯಾಯಾಧೀಶರು ಹಾಗೂ ಕಕ್ಷಿದಾರರು ಕಷ್ಟ ಅನುಭವಿಸುತ್ತಿದ್ದಾರೆ. ಮೊಬೈಲ್ ನೆಟ್ವರ್ಕ್ ಹಾಗೂ ಸರ್ವರ್ ಸಮಸ್ಯೆಯಿಂದ ಸಂಪರ್ಕಗಳು ಕಡಿತಗೊಂಡು ಪರದಾಡುವಂತಾಗಿದೆ. ಜಾಮರ್‌ಗಳಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ವಾದ ಆಲಿಸಿದ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸುವಂತೆ ಸರ್ಕಾರದ ಪರ ವಕೀಲರಿಗೆ ಒಂದು ವಾರ ಕಾಲಾವಕಾಶ ನೀಡಿತಲ್ಲದೆ, ಕಾರಾಗೃಹದ ಆವರಣದೊಳಗಿನ ವಿವಿಧ ಸ್ಥಳಗಳಲ್ಲಿ ಹಾಗೂ ಕಾರಾಗೃಹದಿಂದ ಕೋರ್ಟ್‌ವರೆಗೆ ಮತ್ತು ನ್ಯಾಯಾಲಯದ ವಿವಿಧ ಸ್ಥಳಗಳಲ್ಲಿ ಮೊಬೈಲ್ ಸಿಗ್ನಲ್ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಖಚಿತಪಡಿಸುವ ತಾಂತ್ರಿಕ ವರದಿ ಸಲ್ಲಿಸಬೇಕು. ಜಾಮರ್‌ಗಳಿಂದ ಬರುವ ಜಾಮಿಂಗ್ ಸಿಗ್ನಲ್‌ಗಳು ನ್ಯಾಯಾಲಯದಲ್ಲಿ ಮೊಬೈಲ್ ಸಿಗ್ನಲ್‌ಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುತ್ತವೆಯೇ ಎಂಬ ಬಗ್ಗೆಯೂ ವರದಿಯಲ್ಲಿ ವಿವರಿಸಿರಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ನವೆಂಬರ್ 18ಕ್ಕೆ ಮುಂದೂಡಿತು.

Kannada Bar & Bench
kannada.barandbench.com