ಆಭರಣ ಮಳಿಗೆಗಳ ಎಲ್‌ಇಡಿ ಡಿಜಿಟಲ್‌ ನಾಮಫಲಕಗಳಿಂದ ಸವಾರರಿಗೆ ತೊಂದರೆ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಮಲ್ಲೇಶ್ವರದ ಸಂಪಿಗೆ ರಸ್ತೆಯ ವೆಂಡಿ ಎವಿಆರ್‌ ಸ್ವರ್ಣ ಮಹಲ್‌, ಔರಾ, ತನಿಷ್ಕ್‌ ಮತ್ತಿತರ ಚಿನ್ನಾಭರಣ ಮಳಿಗೆಗಳು ಹೆಚ್ಚಿನ ಹೊಳಪಿನ ಎಲ್‌ಇಡಿ ನಾಮಫಲಕ ಅಳವಡಿಸಿದ್ದು, ಸುರಕ್ಷತಾ ಮಿತಿಗಿಂತ ಹೆಚ್ಚಿನ ಬೆಳಕನ್ನು ಹೊರಸೂಸುತ್ತಿವೆ ಎಂದು ಆಕ್ಷೇಪ.
High Court of Karnataka
High Court of Karnataka

ಬೆಂಗಳೂರಿನ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿನ ಆಭರಣ ಮಳಿಗೆಗಳು ಪ್ರಕಾಶಮಾನ ಎಲ್‌ಇಡಿ ದೀಪಗಳ ಡಿಜಿಟಲ್‌ ನಾಮಫಲಕ ಹಾಗೂ ಜಾಹೀರಾತು ಫಲಕಗಳನ್ನು ಅಳವಡಿಸಿ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ತೊಂದರೆ ಉಂಟು ಮಾಡುತ್ತಿವೆ ಎಂದು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಸೋಮವಾರ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಬೆಂಗಳೂರಿನ ವಕೀಲೆ ದೀಕ್ಷಾ ಅಮೃತೇಶ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರ ಪರ ವಕೀಲರ ವಾದ ಆಲಿಸಿದ ಬಳಿಕ ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ), ಬಿಬಿಎಂಪಿ ಮುಖ್ಯ ಆಯುಕ್ತರು, ಬೆಂಗಳೂರು ನಗರ ಪೊಲೀಸ್‌ ಆಯುಕ್ತರು, ಮಲ್ಲೇಶ್ವರ ಸಂಚಾರ ಉತ್ತರ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅಮೃತೇಶ್ ವಾದ ಮಂಡಿಸಿ, ಮಲ್ಲೇಶ್ವರದ ಸಂಪಿಗೆ ರಸ್ತೆಯ ವೆಂಡಿ ಎವಿಆರ್‌ ಸ್ವರ್ಣ ಮಹಲ್‌, ಔರಾ, ತನಿಷ್ಕ್‌ ಮತ್ತಿತರ ಚಿನ್ನಾಭರಣ ಮಳಿಗೆಗಳು ಹೆಚ್ಚಿನ ಹೊಳಪಿನ ಎಲ್‌ಇಡಿ ನಾಮಫಲಕ ಹಾಗೂ ಜಾಹೀರಾತು ಫಲಕ ಅಳವಡಿಸಿವೆ. ನೆಲದ ಮಟ್ಟದಿಂದ ಬಹು ಎತ್ತರಕ್ಕೆ ಮುಖ್ಯರಸ್ತೆಗೆ ಮುಖ ಮಾಡಿ ಜಾಹೀರಾತುಗಳನ್ನು ಅಳವಡಿಸಲಾಗಿದೆ. ಅವು ಸುರಕ್ಷತಾ ಮಿತಿಗಿಂತ ಹೆಚ್ಚಿನ ಹೊಳಪನ್ನು ಹೊರಸೂಸುತ್ತಿವೆ. ಇದರಿಂದ ರಾತ್ರಿ ಸಮಯದಲ್ಲಿ ಸಾರ್ವಜನಿಕರಿಗೆ, ಅದರಲ್ಲೂ ಸಂಚಾರ ದಟ್ಟಣೆಯಲ್ಲಿ ಸಿಲುಕಿದ ವಾಹನ ಸವಾರರಿಗೆ ಮತ್ತು ಚಾಲಕರಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ ಎಂದು ಪೀಠದ ಗಮನಕ್ಕೆ ತಂದರು.

ಹಲವು ಅಧ್ಯಯನಗಳ ಪ್ರಕಾರ ಎಲ್‌ಇಡಿ ಜಾಹೀರಾತು ಫಲಕಗಳಿಂದ ಹೊರಹೊಮ್ಮುವ ಪ್ರಕಾಶಮಾನವಾದ ಬೆಳಕು, ಜನರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಬಿಬಿಎಂಪಿ ಜಾಹೀರಾತು ಅಧಿನಿಯಮ-2021ರ ಅಡಿಯಲ್ಲಿ ಎಲ್‌ಇಡಿ ಜಾಹೀರಾತು ಫಲಕಗಳ ಪ್ರದರ್ಶನಕ್ಕೆ ನಿರ್ದಿಷ್ಟ ಮಾರ್ಗಸೂಚಿ ರೂಪಿಸಲಾಗಿದೆ. ಅವುಗಳಿಗೆ ತದ್ವಿರುದ್ಧವಾಗಿ ಈ ಮಳಿಗೆಗಳು ಜಾಹೀರಾತು ಫಲಕ ಅಳವಡಿಸಿವೆ ಎಂದು ವಿವರಿಸಿದರು.

ಅಲ್ಲದೇ, ಎಲ್‌ಇಡಿ ದೀಪಗಳ ಡಿಜಿಟಲ್‌ ಹೊರಾಂಗಣ ಜಾಹೀರಾತಿಗಾಗಿ ಸುರಕ್ಷತಾ ಮಾನದಂಡ ಜಾರಿಗೊಳಿಸಬೇಕಿದೆ. ಅದರಿಂದ ಉಂಟಾಗುವ ಸಂಭಾವ್ಯ ವಾಹನ ಅಪಘಾತಗಳನ್ನು ತಗ್ಗಿಸಬಹುದಾಗಿದೆ. ಈ ಕುರಿತು ಕ್ರಮ ಜರುಗಿಸುವಂತೆ ಕೋರಿ 2023ರ ಆಗಸ್ಟ್‌ 21ಮತ್ತು ನವೆಂಬರ್‌ 4ರಂದು ಅರ್ಜಿದಾರರು ಪ್ರತಿವಾದಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ, ಪ್ರತಿವಾದಿಗಳು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಅರ್ಜಿದಾರರ ಮನವಿ ಪರಿಗಣಿಸಿ ಪ್ರಕಾಶಮಾನ ಸಂಪಿಗೆ ರಸ್ತೆಯಲ್ಲಿರುವ ಮಳಿಗೆಗಳ ಎಲ್‌ಇಡಿ ನಾಮಫಲಕ, ಜಾಹೀರಾತು ಫಲಕಗಳ ಅಳವಡಿಕೆ ತಡೆಯುವಂತೆ ಸರ್ಕಾರ ಸೇರಿದಂತೆ ಅರ್ಜಿಯಲ್ಲಿನ ಇತರೆ ಪ್ರತಿವಾದಿಗಳಿಗೆ ಸೂಚಿಸಬೇಕು ಎಂದು ಕೋರಿದರು.

Kannada Bar & Bench
kannada.barandbench.com