ಕೆರೆ ದಂಡೆಯಲ್ಲಿ ಶಿವನ ಮೂರ್ತಿ: ಪರಿಸರ ಕಲುಷಿತಗೊಳಿಸಿ ಪೂಜೆ ಮಾಡುವುದು ಏಕೆ ಎಂದ ಹೈಕೋರ್ಟ್‌

ಕೆರೆ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡಲು ಕೆರೆ ಸಂರಕ್ಷಣಾ & ಅಭಿವೃದ್ಧಿ ಕಾಯಿದೆ ಸೆಕ್ಷನ್ 12ರ ಅನ್ವಯ ಅವಕಾಶವಿಲ್ಲ. ಹೀಗಿದ್ದಾಗ, ಅದಕ್ಕೆ ಅನುಮತಿ ಕೊಟ್ಟವರು ಯಾರು, ಹೇಗೆ ಅನುಮತಿ ಕೊಟ್ಟರು ಎಂದು ಪ್ರಶ್ನಿಸಿದ ನ್ಯಾಯಾಲಯ.
High Court of Karnataka
High Court of Karnataka
Published on

"ದೇವರ ಪೂಜೆಯನ್ನು ಮನೆಗಳಲ್ಲೇ ಮಾಡಿಕೊಳ್ಳಿ; ಪರಿಸರ ಮತ್ತು ಜನರನ್ನು ಕಲುಷಿತಗೊಳಿಸಿ ಪೂಜೆ ಮಾಡುವುದು ಏಕೆ ಎಂದು ನಮಗೆ ಅರ್ಥ ಆಗುತ್ತಿಲ್ಲ" ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಮೌಖಿಕವಾಗಿ ತನ್ನ ಅಸಮಾಧಾನ ಹೊರಹಾಕಿತು.

ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲತ್ತಳ್ಳಿಯ ಕೆರೆ ಪ್ರದೇಶದಲ್ಲಿ ಬಯಲು ರಂಗಮಂದಿರ ಹಾಗೂ ಶಿವನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ಕೆ ಆಕ್ಷೇಪಿಸಿ ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಟಿ ವೆಂಕಟೇಶ್ ನಾಯಕ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಶಿವರಾತ್ರಿ ಆಚರಣೆಗೆಂದು ತಾತ್ಕಾಲಿಕವಾಗಿ ಕಲ್ಯಾಣಿಯಲ್ಲಿ ಶಿವನಮೂರ್ತಿ ಸ್ಥಾಪಿಸಲಾಗಿತ್ತು. ನಂತರ ಅದನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ. ಆದರೆ, ಕಲ್ಯಾಣಿಯಲ್ಲಿ ಶಿವನಮೂರ್ತಿ ಸ್ಥಾಪನೆ, ಮತ್ತಿತರ ಕಾಮಗಾರಿ ಕೈಗೊಳ್ಳುವುದರಿಂದ ಕಲುಷಿತ ನೀರು ಕೆರೆಗೆ ಸೇರುತ್ತದೆ ಎಂಬುದು ಅರ್ಜಿದಾರರ ಆಂತಕ. ಹೀಗಿದ್ದಾಗ, ಪೂಜೆ ಮನೆಗಳಲ್ಲಿ ಮಾಡಿಕೊಳ್ಳಿ, ಕಲ್ಯಾಣಿ ಯಾಕೆ ಬೇಕು? ಪರಿಸರ ಕಲುಷಿತಗೊಳಿಸಿ ಪೂಜೆ ಮಾಡುವುದು ಯಾಕೆ ಅಂತ ನಮಗಂತೂ ಅರ್ಥ ಆಗಿಲ್ಲ ಎಂದು ಪೀಠ ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ಅಲ್ಲದೇ, ಕೆರೆ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡಲು ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಕಾಯಿದೆಯ ಸೆಕ್ಷನ್ 12ರ ಅನ್ವಯ ಅವಕಾಶವಿಲ್ಲ. ಹೀಗಿದ್ದಾಗ, ಅದಕ್ಕೆ ಅನುಮತಿ ಕೊಟ್ಟವರು ಯಾರು? ಹೇಗೆ ಅನುಮತಿ ಕೊಟ್ಟರು ಎಂದು ಅಸಮಾಧಾನ ವ್ಯಕ್ತಪಡಿಸಿದ ಪೀಠವು "ಈ ಬಿಬಿಎಂಪಿ ಮತ್ತು ಬಿಡಿಎ ಇವರೇ ವ್ಯಾಜ್ಯಗಳನ್ನು ಹುಟ್ಟುಹಾಕುತ್ತಾರೆ. ಇವರಿಬ್ಬರು ನೆಟ್ಟಗಿದ್ದರೆ ವ್ಯಾಜ್ಯ ಮತ್ತು ಸಮಸ್ಯೆಗಳೇ ಇರುತ್ತಿರಲಿಲ್ಲ. ನಾವು ಇವರನ್ನು ನಂಬುತ್ತೇವೆ. ಆದರೆ, ಇವರೇ ಯಾಮಾರಿಸಿದರೆ ಏನು ಮಾಡುವುದು. ಕಲುಷಿತ ನಗರ, ಕಲುಷಿತ ಸಮಾಜದಲ್ಲಿ ನಾವಿದ್ದೇವೆ. ಇಡೀ ಜನ ಮಾಲಿನ್ಯದಲ್ಲಿ ಇರುವಂತಾಗಿದೆ. ಇದೆಲ್ಲಾ ನಾವು ಮಾಡಿದ ಕರ್ಮ. ಪರಿಸ್ಥಿತಿ ಹೀಗೆ ಇದ್ದರೆ ನಮ್ಮ ಮಕ್ಕಳು-ಮೊಮ್ಮಕ್ಕಳು ನಮಗೆ ಹಿಡಿಶಾಪ ಹಾಕುತ್ತಾರೆ" ಎಂದು ತೀಕ್ಷ್ಣವಾಗಿ ನುಡಿಯಿತು.

Also Read
ಮಲ್ಲತ್ತಹಳ್ಳಿ ಕೆರೆ ದಂಡೆಯಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪನೆ: ಸಚಿವ ಮುನಿರತ್ನ, ಅಧಿಕಾರಿಗಳಿಗೆ ಹೈಕೋರ್ಟ್‌ ನೋಟಿಸ್‌

ಕಲ್ಯಾಣಿಯಲ್ಲಿ ಬೇರೇನೂ ಮಾಡುವಂತಿಲ್ಲ: ಅರ್ಜಿದಾರರು ಮತ್ತು ಬಿಬಿಎಂಪಿ ಪರ ವಕೀಲರ ಸುದೀರ್ಘ ವಾದ-ಪ್ರತಿವಾದ ಆಲಿಸಿದ ಪೀಠವು ಎರಡೂ ಕಡೆಯ ವಾದಗಳನ್ನು ದಾಖಲಿಸಿಕೊಂಡು, ನ್ಯಾಯಾಲಯದಲ್ಲಿ ವ್ಯಾಜ್ಯದಲ್ಲಿರುವ 3 ಎಕರೆ ಹೊರತುಪಡಿಸಿ ಮಲ್ಲತಹಳ್ಳಿ ಕೆರೆಯ ಒಟ್ಟು 71 ಎಕರೆ ಪ್ರದೇಶನ್ನು ಸಂರಕ್ಷಿಸಬೇಕು. ಯಾವುದೇ ರಾಜಕೀಯ ಪಕ್ಷ, ರಾಜಕಾರಣಿ, ವ್ಯಕ್ತಿ, ವ್ಯಕ್ತಿಗಳ ಗುಂಪು ಸಂಘಟನೆಗಳಿಗೆ ಈ ಕೆರೆ ಪ್ರದೇಶದಲ್ಲಿ ಯಾವುದೇ ರೀತಿಯ ಶಾಶ್ವತ ನಿರ್ಮಾಣ ಮತ್ತಿತರ ಚಟುವಟಿಕೆಗಳಿಗೆ ಅವಕಾಶ ಕೊಡಬಾರದು. ಕೆರೆ ಅಂಗಳದಲ್ಲಿ ಕಟ್ಟಿರುವ ಕಲ್ಯಾಣಿಯಲ್ಲಿ ನಿಗದಿಯಂತೆ ಗಣೇಶ, ದುರ್ಗಾ ಮೂರ್ತಿಗಳ ವಿಸರ್ಜನೆ ಸೇರಿದಂತೆ ಸಿಮೀತ ಚಟುವಟಿಕೆಗಳಿಗೆ ಸಿಮೀತ ಅವಧಿಗೆ ಮಾತ್ರ ಅನುಮತಿ ನೀಡಬೇಕು. ಅದು ಮುಗಿದ ಬಳಿಕ ಕಲ್ಯಾಣಿಯನ್ನು ಸ್ವಚ್ಛಗೊಳಿಸಬೇಕು. ಕಲ್ಯಾಣಿಯ ಕಲುಷಿತ ನೀರು ಕೆರೆಗೆ ಸೇರದಂತೆ ನೋಡಿಕೊಳ್ಳಬೇಕು ಎಂದು ಬಿಬಿಎಂಪಿಗೆ ನಿರ್ದೇಶನ ನೀಡಿತು.

ಜೊತೆಗೆ, ಈ ವಿಚಾರದಲ್ಲಿ ಬಿಬಿಎಂಪಿ ಹಾಗೂ ಸಂಬಂಧಪಟ್ಟ ಇತರೆ ಪ್ರಾಧಿಕಾರಗಳು ವ್ಯಾಜ್ಯ ಹುಟ್ಟು ಹಾಕುವುದಿಲ್ಲ ಹಾಗೂ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ ಎಂದು ನ್ಯಾಯಾಲಯ ನಂಬಿದೆ ಎಂದು ಹೇಳಿದ ಪೀಠವು ಮಧ್ಯಂತರ ಅರ್ಜಿಯನ್ನು ಇತ್ಯರ್ಥಪಡಿಸಿತು.

Kannada Bar & Bench
kannada.barandbench.com