Rouse Avenue Court, Akhilesh Pati Tripathi and Sanjeev Jha
Rouse Avenue Court, Akhilesh Pati Tripathi and Sanjeev Jha(Facebook)

ಗಲಭೆಗೆ ಪ್ರಚೋದನೆ, ಪೊಲೀಸರ ಮೇಲೆ ಹಲ್ಲೆ ಪ್ರಕರಣ: ಎಎಪಿಯ ಇಬ್ಬರು ಶಾಸಕರು ತಪ್ಪಿತಸ್ಥರು ಎಂದ ದೆಹಲಿ ನ್ಯಾಯಾಲಯ

ಪೊಲೀಸರು ಬಂಧಿಸಿದ್ದ ಇಬ್ಬರನ್ನು ತಮ್ಮ ವಶಕ್ಕೆ ನೀಡುವಂತೆ ಒತ್ತಾಯಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗುಂಪೊಂದು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿತ್ತು.
Published on

ಏಳು ವರ್ಷಗಳ ಹಿಂದೆ ಪೊಲೀಸ್‌ ಠಾಣೆಯೊಂದಕ್ಕೆ ಗುಂಪೊಂದು ನುಗ್ಗಿ ಗಲಭೆ ನಡೆಸಿ, ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಪ್ರಚೋದನೆ ನೀಡಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಮ್‌ ಆದ್ಮಿ ಪಕ್ಷದ (ಎಎಪಿ) ಇಬ್ಬರು ಶಾಸಕರು ಹಾಗೂ ಇತರ 15 ಮಂದಿ ತಪ್ಪಿತಸ್ಥರು ಎಂದು ಸಂಸದರು ಮತ್ತು ಶಾಸಕರ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ದೆಹಲಿಯ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.

ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಗುಂಪಿಗೆ ಪ್ರಚೋದನೆ ನೀಡಿ ಘೋಷಣೆ ಕೂಗಿದರು ಎಂದು ಸೆಪ್ಟೆಂಬರ್ 7ರಂದು ನಿರ್ಧರಿಸಿದ ರೌಸ್‌ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ವೈಭವ್‌ ಮೆಹ್ತಾ, ಶಾಸಕರಾದ ಅಖಿಲೇಶ್‌ ಪಾಟಿ ತ್ರಿಪಾಠಿ, ಸಂಜೀವ್ ಝಾ ಇನ್ನಿತರ ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿದರು.

"ಗುಂಪು ಹಿಂಸಾಚಾರಕ್ಕೆ ತಿರುಗಿದಾಗ ಸಂಜೀವ್ ಝಾ ಮತ್ತು ಅಖಿಲೇಶ್ ಪಾಟಿ ತ್ರಿಪಾಠಿ ಎಂಬ ಆರೋಪಿಗಳಿಬ್ಬರೂ ಸ್ಥಳದಲ್ಲಿ ಇದ್ದರು. ಜೊತೆಗೆ ಪ್ರಚೋದನೆ ಮತ್ತು ಕುಮ್ಮಕ್ಕು ನೀಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಯಶಸ್ವಿಯಾಗಿದೆ” ಎಂಬುದಾಗಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಘಟನೆ ಫೆಬ್ರವರಿ 20, 2015ರಂದು ರಾತ್ರಿ ನಡೆದಿದ್ದು, ಬುರಾರಿ ಪೊಲೀಸ್ ಠಾಣೆಯಲ್ಲಿ ಗುಂಪೊಂದು ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಿ ಆಸ್ತಿಗೆ ಹಾನಿ ಉಂಟು ಮಾಡಿತ್ತು. ಪೊಲೀಸರು ಬಂಧನದಲ್ಲಿರಿಸಿದ್ದ ಇಬ್ಬರ ಮೇಲೆ ಹಲ್ಲೆಗೈಯುವ ಸಲುವಾಗಿ ತಮ್ಮ ವಶಕ್ಕೆ ನೀಡುವಂತೆ ಒತ್ತಾಯಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗುಂಪೊಂದು ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿತ್ತು. ತಾವು ಗುಂಪನ್ನು ಸಮಾಧಾನಪಡಿಸಲು ಯತ್ನಿಸಿದರೂ ಶಾಸಕರು ಗುಂಪಿಗೆ ಪ್ರಚೋದನೆ ನೀಡಿ ತಮ್ಮ ಮೇಲೆ ಹಲ್ಲೆ ಮತ್ತು ಕಲ್ಲು ತೂರಾಟ ನಡೆಸುವಂತೆ ಮಾಡಿದರು ಎಂದು ಪೊಲೀಸರು ಆರೋಪಿಸಿದ್ದರು.

Kannada Bar & Bench
kannada.barandbench.com