ನ್ಯಾಯಮೂರ್ತಿಗಳಿಗೆ ಲಂಚ ನೀಡಿ ಜಾಮೀನು ಕೊಡಿಸುವ ಭರವಸೆ: ವಕೀಲೆ ವಿರುದ್ಧದ ಎಫ್‌ಐಆರ್‌ ರದ್ದತಿಗೆ ಹೈಕೋರ್ಟ್‌ ನಕಾರ

“ಜಾಮೀನು ಪಡೆಯಲು ನ್ಯಾಯಮೂರ್ತಿಗಳಿಗೆ ಲಂಚ ನೀಡಬೇಕು ಎಂದು ಹಣ ಸಂಗ್ರಹಿಸಿರುವುದರ ಕೂರಿತು ಕೂಲಂಕಷ ತನಿಖೆ ನಡೆಯಬೇಕಿದೆ. ಏಕೆಂದರೆ ಅದು ನ್ಯಾಯಾಂಗದ ಮೇಲಿನ ಸಾರ್ವಜನಿಕರ ನಂಬಿಕೆಯ ಮೂಲಕ್ಕೆ ಹೊಡೆತ ನೀಡುವ ವಿಚಾರವಾಗಿದೆ” ಎಂದಿರುವ ನ್ಯಾಯಾಲಯ.
Karnataka High Court
Karnataka High Court
Published on

ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಪುತ್ರನಿಗೆ ಜಾಮೀನು ಕೊಡಿಸಲು ಹೈಕೋರ್ಟ್‌ ನ್ಯಾಯಮೂರ್ತಿಗೆ ಲಂಚ ನೀಡಬೇಕು ಎಂದು ದಾವೆದಾರರಿಂದ ಹಣ ಪಡೆದ ಆರೋಪದ ಮೇಲೆ ಮೈಸೂರಿನ ವಕೀಲೆಯೊಬ್ಬರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ಬುಧವಾರ ಸ್ಪಷ್ಟವಾಗಿ ನಿರಾಕರಿಸಿದೆ.

ಹೈಕೋರ್ಟ್‌ ನ್ಯಾಯಮೂರ್ತಿಗಳ ನಿರ್ದೇಶನದಂತೆ ರಿಜಿಸ್ಟ್ರಾರ್‌ ಜನರಲ್‌ ಅವರು ನೀಡಿದ ದೂರಿನ ಅನ್ವಯ ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಮೈಸೂರಿನ ವಕೀಲೆ ದಯೀನಾ ಬಾನು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ.

“ಬಂಧಿತನಾಗಿರುವ ಆರೋಪಿಯ ತಾಯಿ ಸಮನ್ವಯ ಪೀಠದ ಮುಂದೆ ಪತ್ರ ಒಂದನ್ನು ಹಿಡಿದು ಬಂದು ವಕೀಲೆ ಮತ್ತು ಆಕೆಯ ಸಹವರ್ತಿಗಳು ನ್ಯಾಯಮೂರ್ತಿಗಳಿಗೆ ಹಣ ನೀಡಿ ಜಾಮೀನು ಕೊಡಿಸುವುದಾಗಿ ಹೇಳಿದ್ದಾರೆ. ಈ ಆರೋಪದ ಮೇಲೆ ದೂರು ದಾಖಲಿಸಿದ್ದು, ತನಿಖೆ ನಡೆಸಿ, ಆರೋಪಿಗಳನ್ನು ಬಯಲಿಗೆ ಎಳೆಯಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.

“ಆರೋಪವು ನಿಜವಾದರೆ ಅದು ಈ ಘನ ಸಂಸ್ಥೆಯ ಪ್ರಾಮಾಣಿಕತೆಗೆ ಹಾನಿ ಉಂಟು ಮಾಡಲಿದೆ. ಹೀಗಾಗಿ, ಇಲ್ಲಿ ಸಾಂಸ್ಥಿಕ ಪ್ರಾಮಾಣಿಕತೆಯ ವಿಚಾರ ಇರುವುದರಿಂದ ತನಿಖೆ ಅಗತ್ಯವಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಸಾಮಾನ್ಯ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಯು ಮಾಡಿದ ವಂಚನೆ ಅಪರಾಧವು ಕೆಲವು ಸಂದರ್ಭಗಳಲ್ಲಿ ಅವು ಸಾಂಸ್ಥಿಕ ಕಾಳಜಿಯ ವಿಚಾರವಾಗುತ್ತವೆ. ಆದ್ದರಿಂದ, ತನಿಖೆ ನಡೆದು ಸಕ್ಷಮ ನ್ಯಾಯಾಲಯದ ಮುಂದೆ ಅಂತಿಮ ವರದಿಯನ್ನು ಸಲ್ಲಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತನಿಖೆಗೆ ಅಡ್ಡಿಯಾಗುವ ಪ್ರಶ್ನೆಯೇ ಇಲ್ಲ” ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ದಯೀನಾ ಬಾನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು “ಅರ್ಜಿದಾರ ವಕೀಲೆಯು ಭಾರತೀಯ ವಕೀಲರ ಪರಿಷತ್‌ನಿಂದ ಶಿಸ್ತುಕ್ರಮ ಎದುರಿಸುತ್ತಿದ್ದಾರೆ. ಒಂದೊಮ್ಮೆ ಆರೋಪವನ್ನು ಒಪ್ಪಿಕೊಂಡರೂ ಅದರಲ್ಲಿ ವಂಚನೆಗೆ ಬೇಕಾದ ಅಂಶಗಳು ಕಾಣುವುದಿಲ್ಲ. ಪ್ರಾಥಮಿಕ ತನಿಖೆ ನಡೆಸದೇ ಎಫ್‌ಐಆರ್‌ ದಾಖಲಿಸಿರುವುದರಿಂದ ಅದನ್ನು ವಜಾಗೊಳಿಸಬೇಕು” ಎಂದು ಕೋರಿದ್ದರು.

ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ನ್ಯಾಯಮೂರ್ತಿಗಳಿಗೆ ಲಂಚ ನೀಡಲು ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪವು ನ್ಯಾಯಾಂಗದ ವಿಶ್ವಾಸಾರ್ಹತೆಗೆ ಗಂಭೀರ ಬೆದರಿಕೆಯೊಡ್ಡಿರುವುದರಿಂದ ಕೂಲಂಕಶ ತನಿಖೆ ಅಗತ್ಯವಾಗಿದೆ. ಪ್ರಕರಣಕ್ಕೆ ತಡೆ ನೀಡಿದ್ದರಿಂದ ತನಿಖೆ ಆರಂಭವೇ ಆಗಿಲ್ಲ” ಎಂದಿದ್ದರು.

ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಪ್ರತಿನಿಧಿಸಿದ್ದ ವಕೀಲ ಮಧುಕರ್‌ ದೇಶಪಾಂಡೆ ಅವರು “ಹೈಕೋರ್ಟ್‌ನ ಸಮನ್ವಯ ಪೀಠವು ನೀಡಿರುವ ನಿರ್ದೇಶನ ಪಾಲಿಸಿ, ದೂರು ದಾಖಲಿಸಲಾಗಿದೆ” ಎಂದರು.

ಪ್ರಕರಣದ ಹಿನ್ನೆಲೆ: 2021ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ವಿ ವಿಷ್ಣು ದೇವನ್‌ ಎಂಬಾತ ಬಂಧಿತನಾಗಿದ್ದು, ಆತನ ತಾಯಿ ಥೆರೇಸಾ ಅವರು ಆತನಿಗೆ ಜಾಮೀನು ಪಡೆಯಲು ಪ್ರಯತ್ನ ನಡೆಸಿದ್ದರು. ಈಕೆಯೇ ದೂರುದಾರೆಯಾಗಿದ್ದು, ಥೆರೇಸಾಗೆ ಮೆಯೊ ಹಾಲ್‌ ಕೋರ್ಟ್‌ ಬಳಿ ಮರೀನಾ ಫೆರ್ನಾಂಡೀಸ್‌ ಎಂಬಾಕೆಯ ಪರಿಚಯವಾಗಿತ್ತು. ಪುತ್ರನಿಗೆ ಜಾಮೀನು ಕೊಡಿಸಲು ₹10 ಲಕ್ಷಕ್ಕೆ ಮರೀನಾ ಬೇಡಿಕೆ ಇಟ್ಟಿದ್ದಳು. ಹಣ ನೀಡಿದ ಹೊರತಾಗಿಯೂ ಜಾಮೀನು ಸಿಕ್ಕಿರಲಿಲ್ಲ. ಹೀಗಾಗಿ, ಥೆರೇಸಾ ಹಣ ಮರಳಿಸುವಂತೆ ಮರೀನಾ ಬೆನ್ನುಬಿದ್ದಿದ್ದರಿಂದ ಆಕೆ ತಲಾ ₹3 ಲಕ್ಷ ಮೌಲ್ಯದ ಮೂರು ಚೆಕ್‌ಗಳನ್ನು ಥೆರೇಸಾಗೆ ನೀಡಿದ್ದಳು. ಅವುಗಳನ್ನು ಥೆರೇಸಾ ಬ್ಯಾಂಕ್‌ನಲ್ಲಿ ನಗದೀಕರಿಸಿರಲಿಲ್ಲ.

ಈ ಬಳಿಕ ಆರತಿ ಎಂಬಾಕೆಗೆ ಥೆರೇಸಾ ಪರಿಚಯವಾಗಿದ್ದು, ಆಕೆ ತಾನು ಹೈಕೋರ್ಟ್‌ ನ್ಯಾಯಮೂರ್ತಿಗೆ ಪರಿಚಿತಳಾಗಿರುವುದಾಗಿ ಹೇಳಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಆರಂಭದಲ್ಲಿ ಆರತಿಗೆ ₹72,000 ಪಾವತಿಸಿದ್ದಳು. ಆದರೆ, ಜಾಮೀನು ದೊರೆತಿರಲಿಲ್ಲ. ಈ ಕುರಿತು ಥೆರೇಸಾ ಕೇಳಿದ್ದು, ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರೂ ವಕೀಲರು ಪುತ್ರನ ಪರವಾಗಿ ನ್ಯಾಯಾಲಯ ಮುಂದೆ ಹಾಜರಾಗಿರಲಿಲ್ಲ ಎಂಬ ವಿಚಾರ ಥೆರೇಸಾಗೆ ತಿಳಿದು ಬಂದಿತ್ತು. ಆನಂತರ ಆರತಿಯು ₹1 ಲಕ್ಷ ನೀಡಿದರೆ ಅದನ್ನು ನ್ಯಾಯಮೂರ್ತಿಗಳಿಗೆ ನೀಡಿ ಜಾಮೀನು ಕೊಡಿಸಲಾಗುವುದು ಎಂದು ಹೇಳಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ.

ಈ ಹಂತದಲ್ಲಿ ವಕೀಲೆ ದಯೀನಾ ಬಾನು ಪ್ರತ್ಯಕ್ಷವಾಗಿದ್ದು, ತನ್ನ ಪುತ್ರನಿಗೆ ಜಾಮೀನು ಪಡೆಯಲು ದೊಡ್ಡಮೊತ್ತವನ್ನು ಹೈಕೋರ್ಟ್‌ ನ್ಯಾಯಮೂರ್ತಿಗೆ ಪಾವತಿಸಬೇಕು ಎಂದು ಹೇಳಿದ್ದರು ಎಂದು ಪ್ರಾಸಿಕ್ಯೂಷನ್‌ ಹೇಳಿದೆ.

ಮರೀನಾ ಫೆರ್ನಾಂಡೀಸ್‌ ಮತ್ತು ಆರತಿ ಅವರು ತನಗೆ ವಂಚಿಸಿದ್ದಾರೆ ಎಂದು ಮೊದಲಿಗೆ ಥೆರೇಸಾ ಅವರು ವಕೀಲರ ಪರಿಷತ್‌ಗೆ ದೂರು ನೀಡಿದ್ದರು. ಆನಂತರ 2024ರ ಡಿಸೆಂಬರ್‌ 18ರಂದು ನ್ಯಾಯಮೂರ್ತಿಗಳಿಗೆ ಲಂಚ ನೀಡಬೇಕು ಎಂದು ವಕೀಲೆ ಹಣ ಕೇಳುತ್ತಿದ್ದಾರೆ ಎಂದು ನೇರವಾಗಿ ಹೈಕೋರ್ಟ್‌ಗೆ ಪತ್ರ ಬರೆದಿದ್ದರು.

ಈ ಪತ್ರವನ್ನು ಆಧರಿಸಿ ಸಮನ್ವಯ ಪೀಠವು ರಿಜಿಸ್ಟ್ರಾರ್‌ ಜನರಲ್‌ಗೆ ಪ್ರಕರಣ ದಾಖಲಿಸಲು ನಿರ್ದೇಶಿಸಿತ್ತು. ಇದರ ಅನ್ವಯ ವಿಧಾನಸೌಧ ಠಾಣೆಯಲ್ಲಿ ದಯೀನಾ ಬಾನು ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

Attachment
PDF
Dayeena Banu Vs State of Karnataka
Preview
Kannada Bar & Bench
kannada.barandbench.com