ಸಚಿವ ಪ್ರಿಯಾಂಕ್‌ ಖರ್ಗೆಗೆ ನಿಂದನೆ ಆರೋಪ: ಮಣಿಕಂಠ ರಾಥೋಡ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಹೈಕೋರ್ಟ್‌

“ರಾಜಕೀಯ ವಿರೋಧಿಗಳು ಒಬ್ಬರನ್ನೊಬ್ಬರು ಕಳ್ಳ ಎಂದು ಹೇಳುವುದು ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆಧಾರವಲ್ಲ, ಇದು ಮೇಲ್ನೋಟಕ್ಕೆ ಸಂವಿಧಾನದ 19(1)ನೇ ವಿಧಿಯ ಅಡಿ ದೊರೆತಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ” ಎಂದಿರುವ ಹೈಕೋರ್ಟ್‌.
ಸಚಿವ ಪ್ರಿಯಾಂಕ್‌ ಖರ್ಗೆಗೆ ನಿಂದನೆ ಆರೋಪ: ಮಣಿಕಂಠ ರಾಥೋಡ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಹೈಕೋರ್ಟ್‌
Published on

“ರಾಜಕೀಯ ವಿರೋಧಿಗಳು ಒಬ್ಬರನ್ನೊಬ್ಬರು ಕಳ್ಳ ಎಂದು ಕರೆಯುವುದನ್ನು ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆಧಾರವನ್ನಾಗಿಸಲಾಗದು” ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠ ಈಚೆಗೆ ಹೇಳಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ʼಅಕ್ಕಿ ಕಳ್ಳʼ ಎಂದು ಟೀಕಿಸಿದ ಆರೋಪದ ಮೇಲೆ ಬಿಜೆಪಿಯ ಮುಖಂಡ ಮಣಿಕಂಠ ರಾಥೋಡ್‌ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸಿದೆ.

ಉದ್ದೇಶಪೂರ್ವಕವಾಗಿ ಅವಮಾನಿಸುವುದು ಮತ್ತು ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಕಲಬುರ್ಗಿಯ ಚಿತ್ತಾಪುರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತು ಆನಂತರ ನ್ಯಾಯಾಂಗ ಪ್ರಕ್ರಿಯೆ ರದ್ದುಪಡಿಸುವಂತೆ ಮಣಿಕಂಠ ರಾಥೋಡ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಪ್ರಿಯಾಂಕ್‌ ಖರ್ಗೆ ಮತ್ತು ಮಣಿಕಂಠ ಅವರು ರಾಜಕೀಯ ವಿರೋಧಿಗಳಾಗಿದ್ದು, ನಿಂದನೆಗೆ ಒಳಗಾಗಿದ್ದಾರೆ ಎನ್ನಲಾದ ಪ್ರಿಯಾಂಕ್‌ ಅವರು ದೂರು ನೀಡಿಲ್ಲ. ರಾಜಕೀಯ ವಿರೋಧಿಗಳು ಒಬ್ಬರನ್ನೊಬ್ಬರು ಕಳ್ಳ ಎಂದು ಹೇಳುವುದು ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆಧಾರವಲ್ಲ, ಇದು ಮೇಲ್ನೋಟಕ್ಕೆ ಸಂವಿಧಾನದ 19(1)ನೇ ವಿಧಿಯ ಅಡಿ ದೊರೆತಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ. ಎಫ್‌ಐಆರ್‌ ದಾಖಲಿಸಿರುವುದು ಮೇಲ್ನೋಟಕ್ಕೆ ರಾಜಕೀಯ ಪ್ರೇರಿತವಾಗಿದ್ದು, ನ್ಯಾಯಾಂಗ ಪ್ರಕ್ರಿಯೆಯನ್ನು ಅಸ್ತ್ರವನ್ನಾಗಿ ಬಳಕೆ ಮಾಡಲಾಗಿದೆ. ಹೀಗಾಗಿ, ನ್ಯಾಯಾಂಗ ಪ್ರಕ್ರಿಯೆ ಆರಂಭಿಸಿರುವುದು ಕಾನೂನಿನ ದುರ್ಬಳಕೆಯಲ್ಲದೇ ಬೇರೇನೂ ಅಲ್ಲ. ಹೀಗಾಗಿ, ಪ್ರಕರಣ ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಮಣಿಕಂಠ ರಾಥೋಡ್‌ ಪರವಾಗಿ ಹಿರಿಯ ವಕೀಲ ಅರುಣ್‌ ಶ್ಯಾಮ್‌, ವಕೀಲ ಜಿ ಆರ್‌ ಬಸವಕಿರಣ್‌, ಸರ್ಕಾರದ ಪರವಾಗಿ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಸಿದ್ದಲಿಂಗ ಪಾಟೀಲ್‌ ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಕಾಂಗ್ರೆಸ್‌ ಕಾರ್ಯಕರ್ತ ಹಣುಮಂತ ಎಂಬುವರು ನೀಡಿದ್ದ ದೂರಿನಲ್ಲಿ, 2025ರ ಮೇ 26ರಂದು ಮಣಿಕಂಠ ರಾಥೋಡ್‌ ಅವರು ಫೇಸ್‌ಬುಕ್‌ನ ತನ್ನ ಖಾತೆಯಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿದ್ದು, ಅದರಲ್ಲಿ ಸಚಿವ ಪ್ರಿಯಾಂಕ್‌ ಅವರನ್ನು ʼಲೇ ಅಕ್ಕಿ ಕಳ್ಳʼ ಎಂದು ಹೇಳಿ ಅವಹೇಳನ ಮಾಡಿದ್ದಾರೆ. ಅಲ್ಲದೇ, ಕೋಲಿ ಕಬ್ಬಲಿಗ ಎಸ್‌ ಟಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಾಮಾದಾರ ಅವರನ್ನು ಟೋಪಿ ಲಚ್ಚ್ಯಾ ಎಂದು ಕರೆದು ಅಮಾನಿಸಿದ್ದಾರೆ. ಇದರ ಜೊತೆಗೆ ಪ್ರಕರಣವೊಂದರಲ್ಲಿ ಮಣಿಕಂಠಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರನ್ನೂ ನಿಂದನೆ ಮಾಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕೋರಿದ್ದರು.

ಇದನ್ನು ಆಧರಿಸಿ ಚಿತ್ತಾಪುರ ಪೊಲೀಸರು ಮಣಿಕಂಠ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ 352, 353(2) ಅಡಿ ಪ್ರಕರಣ ದಾಖಲಿಸಿದ್ದರು.

Attachment
PDF
Manikanth Rathod Vs State of Karnataka
Preview
Kannada Bar & Bench
kannada.barandbench.com