ವಿಮೆ ಅರ್ಜಿಯಲ್ಲಿ ಕಾಲಮ್ ಖಾಲಿ ಬಿಡಲಾಗಿದೆ ಎಂದು ಪರಿಹಾರ ನಿರಾಕರಿಸುವಂತಿಲ್ಲ: ಎನ್‌ಸಿಡಿಆರ್‌ಸಿ

ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹25 ಲಕ್ಷದ ಜೊತೆಗೆ ಬಡ್ಡಿ ಪಾವತಿಸಲು ಭಾರತಿ ಆಕ್ಸಾ ವಿಮಾ ಕಂಪೆನಿಗೆ ಆಯೋಗ ಆದೇಶಿಸಿತು.
NCDRC
NCDRC
Published on

ವಿಮೆ  ಪರಿಹಾರ ಕೋರಿ ಸಲ್ಲಿಸಲಾದ ಅರ್ಜಿಯಲ್ಲಿ ಕಾಲಂ ಒಂದನ್ನು ಖಾಲಿ ಬಿಡಲಾಗಿದೆ ಎಂದರೆ ಅದು ತಪ್ಪು ಮಾಹಿತಿ ನೀಡಲಾಗಿದೆ ಎಂದರ್ಥವಲ್ಲ. ಹಾಗೆ ಕಾಲಮ್‌ ಖಾಲಿ ಬಿಡಲಾಗಿದೆ ಎಂದು ವಿಮಾ ಕಂಪೆನಿ ಪರಿಹಾರ ನಿರಾಕರಿಸುವಂತಿಲ್ಲ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ತಿಳಿಸಿದೆ [ಛೋಟಿ ದೇವಿ ಮತ್ತು ಭಾರತಿ ಆಕ್ಸಾ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ] .

ಡಾ. ಇಂದರ್ಜಿತ್ ಸಿಂಗ್  ಮತ್ತು  ಡಾ. ಸುಧೀರ್ ಕುಮಾರ್ ಜೈನ್ ಅವರಿದ್ದ ಸಮಿತಿ ಈ ಪ್ರಕರಣವೊಂದರ ಸಂಬಂಧ ಈ ಆದೇಶ ನೀಡಿದೆ.  

Also Read
ನಿರ್ಲಕ್ಷ್ಯ, ಅನಗತ್ಯ ಶಸ್ತ್ರಚಿಕಿತ್ಸೆ: ₹ 65 ಲಕ್ಷ ಪರಿಹಾರ ನೀಡುವಂತೆ ಫೋರ್ಟಿಸ್ ಆಸ್ಪತ್ರೆಗೆ ಎನ್‌ಸಿಡಿಆರ್‌ಸಿ ಆದೇಶ

ದಾಖಲೆಗಳನ್ನು ಪರಿಶೀಲಿಸಿದಾಗ ಮೇಲ್ಮನವಿದಾರರ ವಾದದಲ್ಲಿ ಹುರುಳಿರುವುದು ಕಂಡುಬಂದಿದೆ. ಅರ್ಜಿಯಲ್ಲಿ ಕಾಲಮ್‌ ಖಾಲಿ ಬಿಟ್ಟಿರುವುದು ತಪ್ಪು ಮಾಹಿತಿಗೆ ಸಮನಾಗದು. ಮಾಹಿತಿ ಮುಖ್ಯವಾಗಿದ್ದರೆ ವಿಮಾ ಕಂಪೆನಿ ಪಾಲಿಸಿ ನೀಡುವ ಮುನ್ನವೇ ಕಾಲಮ್‌ ಭರ್ತಿ ಮಾಡುವಂತೆ ಒತ್ತಾಯಿಸಬೇಕಿತ್ತು ಎಂದು ಎನ್‌ಸಿಡಿಆರ್‌ಸಿ ಹೇಳಿದೆ.

ಪರಿಹಾರ ನೀಡಲು ನಿರಾಕರಿಸಿದ್ದ ಭಾರ್ತಿ ಆಕ್ಸಾ  ವಿಮಾ ಕಂಪೆನಿಯ ನಿರ್ಧಾರ ಎತ್ತಿಹಿಡಿದು ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ನೀಡಿದ್ದ ಆದೇಶ ಪ್ರಶ್ನಿಸಿ ಮೃತ ಛೋಟಾ ದೇವಿ (ಇದೀಗ ಮೃತಪಟ್ಟಿದ್ದಾರೆ) ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ವಿಚಾರ ತಿಳಿಸಿತು.

ಛೋಟಾ ದೇವಿಯವರ ಮಗ ಡಿಸೆಂಬರ್ 12, 2015ರಲ್ಲಿ ₹25 ಲಕ್ಷ (20 ವರ್ಷಗಳು, ಪ್ರೀಮಿಯಂ ₹10,900) ಜೀವ ವಿಮಾ ಪಾಲಿಸಿ ಖರೀದಿಸಿದ್ದರು. ಜನವರಿ 2017 ರಲ್ಲಿ ಆತ ಹೃದಯಾಘಾತದಿಂದ ಮೃತಪಟ್ಟಿದ್ದರು. ವಿಮಾ ಪ್ರಸ್ತಾವನೆ ನಮೂನೆಯಲ್ಲಿ ಅಸ್ತಿತ್ವದಲ್ಲಿರುವ ಇನ್ನಾವುದಾದರೂ ವಿಮಾ ಪಾಲಿಸಿಗಳಿವೆಯೇ ಎನ್ನುವ ಕಾಲಂನಲ್ಲಿ ಮಾಹಿತಿಯನ್ನು ನೀಡದೆ ಮರೆಮಾಚಲಾಗಿದೆ ಎಂದು ಆರೋಪಿಸಿ ಭಾರತಿ ಆಕ್ಸಾ ಪರಿಹಾರ ನಿರಾಕರಿಸಿತ್ತು.

Also Read
ಸೀಟ್ ಬೆಲ್ಟ್ ಹಾಕದೇ ಇದ್ದ ಕಾರಣಕ್ಕೆ ಏರ್‌ಬ್ಯಾಗ್‌ ನಿಷ್ಕ್ರಿಯ: ಪ್ರಯಾಣಿಕನಿಗೆ ಪರಿಹಾರ ನಿರಾಕರಿಸಿದ ಎನ್‌ಸಿಡಿಆರ್‌ಸಿ

ಆದರೆ  ಅರ್ಜಿಯನ್ನು ವಿಮೆ ಪಡೆದ ವ್ಯಕ್ತಿ ಖುದ್ದು ಭರ್ತಿ ಮಾಡಿಲ್ಲ. ಕಂಪೆನಿಯ ಪ್ರತಿನಿಧಿ ಅಥವಾ ಅಧಿಕಾರಿ ಇಂಗ್ಲಿಷ್‌ನಲ್ಲಿ, ಡಿಜಿಟಲ್‌ ರೂಪದಲ್ಲಿ ಭರ್ತಿ ಮಾಡಿದ್ದರು. ವಿಮೆದಾರರು ಇನ್ನಾವುದೇ ಪಾಲಿಸಿ ಹೊಂದಿದ್ದಾರೆಯೇ ಎಂಬ ಕಾಲಮ್‌ ಖಾಲಿ ಬಿಡಲಾಗಿತ್ತು. ಖುದ್ದು ಭಾರತಿ ಆಕ್ಸಾ ಛೋಟಾ ದೇವಿಯವರಿಗೆ ಪಾಲಿಸಿ ನೀಡಿದ್ದರಿಂದ ಆ ಮಾಹಿತಿ ಅವರಿಗೆ ಈಗಾಗಲೇ ತಿಳಿದಿತ್ತು ಎಂದು ಛೋಟಾದೇವಿಯ ಕುಟುಂಬ ಸದಸ್ಯರು ವಾದಿಸಿದ್ದರು.

ವಾದ ಆಲಿಸಿದ ಎನ್‌ಸಿಡಿಆರ್‌ಸಿ ಕಾಲಮ್‌ ಖಾಲಿ ಬಿಟ್ಟಿರುವುದು ಮಾಹಿತಿ ಮರೆಮಾಚುವ ಉದ್ದೇಶದಿಂದಲ್ಲ. ಅರ್ಜಿಯನ್ನು ಟೈಪ್‌ ಮಾಡಿ ಭರ್ತಿ ಮಾಡಲಾಗಿದೆ. ಇದು ಕಂಪೆನಿಯ ಪ್ರತಿನಿಧಿ ಅಥವಾ ಅಧಿಕಾರಿ ಭರ್ತಿ ಮಾಡಿದ್ದಾರೆಯೇ ವಿನಾ ಮೃತರಾಗಿರುವ ವಿಮಾದಾರರಲ್ಲ ಎಂದಿತು. ಅಂತೆಯೇ ರಾಜ್ಯ ಆಯೋಗದ ಆದೇಶ ರದ್ದುಗೊಳಿಸಿದ ಅದು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ದಿನದಿಂದ ಅನ್ವಯವಾಗುವಂತೆ  ವಾರ್ಷಿಕ ಶೇ 9ರಷ್ಟು ಬಡ್ಡಿಯೊಂದಿಗೆ 45 ದಿನಗಳಲ್ಲಿ ವಿಮಾ ಮೊತ್ತ  ಪಾವತಿಸುವಂತೆ ವಿಮಾ ಕಂಪನಿಗೆ ನಿರ್ದೇಶನ ನೀಡಿತು.

[ಆದೇಶದ ಪ್ರತಿ]

Kannada Bar & Bench
kannada.barandbench.com