ಹೃದಯಾಘಾತದಿಂದ ಚಾಲಕ ಸಾವನ್ನಪ್ಪಿದರೆ ವಿಮಾ ಕಂಪೆನಿ ಪರಿಹಾರ ಪಾವತಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗದು: ಹೈಕೋರ್ಟ್‌

ಮೃತ ಚಾಲಕ ಈರಣ್ಣ ಅವರ ಉತ್ತರಾಧಿಕಾರಿಗಳಿಗೆ ವಿಮಾ ಕಂಪೆನಿ ಶೇ.12ರ ಬಡ್ಡಿ ಸಹಿತ 3,03,620 ರೂಪಾಯಿ ಪರಿಹಾರ ಪಾವತಿ ಮಾಡುವಂತೆ ವರ್ಕ್‌ಮನ್ಸ್ ಕಮೀಷನರ್ 2009ರಲ್ಲಿ ಮಾಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
High Court of Karnataka, Dharwad Bench
High Court of Karnataka, Dharwad Bench
Published on

ವಿಮೆ ಮಾಡಿಸಿದ್ದ ವಾಹನ ಚಲಾಯಿಸುತ್ತಿದ್ದ ಚಾಲಕ, ವಾಹನ ನಿಲುಗಡೆ ಮಾಡಿದ್ದಾಗ ಹೃದಯಾಘಾತದಿಂದ ಸಾವನ್ನಪಿದರೆ ವಿಮಾ ಕಂಪೆನಿಯು ಪರಿಹಾರ ಪಾವತಿಸುವ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಆದೇಶಿಸಿದೆ.

ನ್ಯಾಷನಲ್ ಇನ್ಯೂರೆನ್ಸ್ ಕಂಪೆನಿಯ ವಿಭಾಗೀಯ ವ್ಯವಸ್ಥಾಪಕ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

ಮೃತ ಚಾಲಕ ಈರಣ್ಣ ಅವರ ಉತ್ತರಾಧಿಕಾರಿಗಳಿಗೆ ವಿಮಾ ಕಂಪೆನಿ ಶೇ.12ರ ಬಡ್ಡಿ ಸಹಿತ 3,03,620 ರೂಪಾಯಿ ಪರಿಹಾರ ಪಾವತಿ ಮಾಡುವಂತೆ ವರ್ಕ್‌ಮನ್ಸ್ ಕಮೀಷನರ್ 2009ರಲ್ಲಿ ಮಾಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ದಾಖಲೆಗಳನ್ನು ಪರಿಶೀಲಿಸಿದ ಬಳಿಕ ‘‘ವಿಮಾ ಕಂಪೆನಿ ಚಾಲಕ ಕರ್ತವ್ಯದಲ್ಲಿಲ್ಲದೇ ಇರುವಾಗ ಮೃತಪಟ್ಟಿಲ್ಲವೆಂದು ಹೇಳುತ್ತಿಲ್ಲ. ಕೆಲಸದಲ್ಲಿದ್ದಾಗಲೇ ಮೃತಪಟ್ಟಿದ್ದಾನೆ ಎಂದು ಒಪ್ಪಿಕೊಳ್ಳುತ್ತದೆ. ಆದರೆ, ಆತ ಮಾದಕ ದ್ರವ್ಯ ಸೇವಿಸುತ್ತಿದ್ದ ಎಂದು ಆರೋಪಿಸಿದೆ. ಆದರೆ, ಆತ ಮಾದಕ ವ್ಯಸನಿ, ಮದ್ಯ ಸೇವಿಸಿದ್ದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಜತೆಗೆ, ಮರಣೋತ್ತರ ಪರೀಕ್ಷೆಯಲ್ಲೂ ಆ ಬಗ್ಗೆ ಯಾವುದೇ ಉಲ್ಲೇಖವಿಲ್ಲ’’ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಚಾಲಕ ಸಹಜವಾಗಿ ಸಾವಿಗೀಡಾಗಿದ್ದಾರೆ. ಹೀಗಾಗಿ, ಪರಿಹಾರ ನೀಡುವ ಹೊಣೆಗಾರಿಕೆಯಿಲ್ಲ ಎಂದು ವಿಮಾ ಕಂಪೆನಿಯ ವಾದ ಒಪ್ಪಲಾಗದು. ಆದರೆ ಪರಿಹಾರ ಕೋರಿರುವವರು ಚಾಲಕ ಕೆಲಸದ ಒತ್ತಡದಿಂದಲೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ, ಪರಿಹಾರ ನೀಡಲೇಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ.

Also Read
ವಕೀಲರಿಗೆ ಆರೋಗ್ಯ ವಿಮೆ: ರೂ. 50 ಕೋಟಿ ಹೊಂದಿಸಲು ಯೋಜನೆ ರೂಪಿಸಲು ಉಪ ಸಮಿತಿಗೆ ಹೊಣೆ

ಲಾರಿ ಚಾಲಕ ಈರಣ್ಣ ಅವರು ಸುರತ್ಕಲ್ ಸಮೀಪದ ಇದ್ಯಾ ಗ್ರಾಮದ ಬಳಿ ಲಾರಿ ನಿಲ್ಲಿಸಿ ವಾಹನದಲ್ಲಿಯೇ ಇದ್ದರು. ಆಗ ಆತ ಹೃದಯಾಘಾತದಿಂದ ಮೃತಪಟ್ಟಿದ್ದರು. ಮೃತ ಈರಣ್ಣ ಅವರ ಅಪ್ರಾಪ್ತ ಮಕ್ಕಳು ಪರಿಹಾರ ಕೋರಿ ವಿಮಾ ಕಂಪೆನಿ ವಿರುದ್ಧ ವರ್ಕ್‌ಮನ್ಸ್ ಕಮೀಷನರ್ ಎದುರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆಯುಕ್ತರು, 2009ರಲ್ಲಿ ಶೇ.12ರ ಬಡ್ಡಿ ಸಹಿತ 3.03 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ವಿಮಾ ಕಂಪೆನಿಗೆ ಆದೇಶ ನೀಡಿದ್ದರು. ಆ ಆದೇಶ ಪ್ರಶ್ನಿಸಿ ವಿಮಾ ಕಂಪನಿ ಮೇಲ್ಮನವಿ ಸಲ್ಲಿಸಿ, ಚಾಲಕ ಹೃದಯಾಘಾತವಾದಾಗ ವಾಹನ ಚಾಲನೆ ಮಾಡುತ್ತಿರಲಿಲ್ಲ. ಹೀಗಾಗಿ, ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ವಾದಿಸಿತ್ತು. ಇದನ್ನು ನ್ಯಾಯಾಲಯ ತಿರಸ್ಕರಿಸಿದೆ.

Kannada Bar & Bench
kannada.barandbench.com