High Court of J&K and Ladakh, Jammu
High Court of J&K and Ladakh, Jammu

ಸರ್ಕಾರದಿಂದ ಪರಿಹಾರ ಪಡೆಯಲಾಗಿದೆ ಎಂದು ವಿಮಾ ಕಂಪೆನಿ ವಿಮೆಯ ಮೊತ್ತ ಕಡಿಮೆ ಮಾಡುವಂತಿಲ್ಲ: ಕಾಶ್ಮೀರ ಹೈಕೋರ್ಟ್

ತನ್ನ ಅಂಗಡಿಗೆ ಹಾನಿ ಉಂಟಾಗಿದ್ದಕ್ಕಾಗಿ ಸರ್ಕಾರದಿಂದ ಪರಿಹಾರಧನ ಪಡೆದಿದ್ದ ವಿಮೆದಾರನಿಗೆ ತಾನು ಪಾವತಿಸಬೇಕಿದ್ದ ಮೊತ್ತವನ್ನು ವಿಮಾ ಕಂಪೆನಿ ಕಡಿತಗೊಳಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
Published on

ತನಗಾದ ನಷ್ಟಕ್ಕೆ  ವಿಮೆದಾರ ಸರ್ಕಾರದಿಂದ ಪರಿಹಾರಧನ ಪಡೆದ ಮಾತ್ರಕ್ಕೆ ಆತನಿಗೆ ವಿಮಾ ಕಂಪೆನಿ ನೀಡಬೇಕಾದ ವಿಮೆ ಮೊತ್ತವನ್ನು ಕಡಿಮೆ ಮಾಡುವಂತಿಲ್ಲ ಎಂದು ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ಈಚೆಗೆ ತೀರ್ಪು ನೀಡಿದೆ [ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಮತ್ತು ಶಾಲಿಮಾರ್ ವೈನ್ ಶಾಪ್ ನಡುವಣ ಪ್ರಕರಣ] .

ವಿಮಾ ಕಂಪನಿ  ವಿಮಾ ಮೊತ್ತ ನೀಡಲು ಬದ್ಧವಾಗಿರಬೇಕು. ವಿಮೆದಾರರು ಬೇರೆ ಮೂಲದಿಂದ ಪರಿಹಾರ ಪಡೆದಿದ್ದಾರೆಯೇ ಇಲ್ಲವೇ ಎಂಬುದನ್ನು ಗಮನಿಸುವುದು ವಿಮಾ ಕಂಪನಿಯ ಕೆಲಸವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ತಾಶಿ ರಬ್ಸ್ತಾನ್ ಮತ್ತು ನ್ಯಾಯಮೂರ್ತಿ ಎಂ ಎ ಚೌಧರಿ ಅವರ ಪೀಠ ಕುಟುಕಿದೆ.

ತನ್ನ ಅಂಗಡಿಗೆ ಹಾನಿ ಉಂಟಾಗಿದ್ದಕ್ಕಾಗಿ ಸರ್ಕಾರದಿಂದ ಪರಿಹಾರಧನ ಪಡೆದಿದ್ದ ವಿಮೆದಾರನಿಗೆ ತಾನು ಪಾವತಿಸಬೇಕಿದ್ದ ಮೊತ್ತವನ್ನು ಓರಿಯಂಟಲ್ ಇನ್ಶುರೆನ್ಸ್ ಕಂಪೆನಿ ಕಡಿತಗೊಳಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ವಿಮೆದಾರರು ಬೇರೆ ಮೂಲದಿಂದ ಪರಿಹಾರ ಪಡೆದಿದ್ದಾರೆಯೇ ಇಲ್ಲವೇ ಎಂಬುದನ್ನು ಗಮನಿಸುವುದು ವಿಮಾ ಕಂಪನಿಯ ಕೆಲಸವಲ್ಲ.
ಕಾಶ್ಮೀರ ಹೈಕೋರ್ಟ್

ಅನಿಲ್‌ ಕೊಹ್ಲಿ ಎಂಬುವವರು ಶಾಲಿಮಾರ್‌ ಹೆಸರಿನ ತಮ್ಮ ವೈನ್‌ ಅಂಗಡಿಗೆ ರೂ 22 ಲಕ್ಷದ ವಿಮೆ ಮಾಡಿಸಿದ್ದರು. 2013 ರಲ್ಲಿ, ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಗಲಭೆ ಮತ್ತು ಹಿಂಸಾಚಾರದಿಂದಾಗಿ ಅಂಗಡಿಗೆ ಭಾರಿ ಹಾನಿ ಉಂಟಾಗಿತ್ತು. ಪರಿಹಾರದ ರೂಪದಲ್ಲಿ ಕಾಶ್ಮೀರ ಸರ್ಕಾರವು ಅಂಗಡಿ ಮಾಲೀಕರಿಗೆ ₹ 3.5 ಲಕ್ಷ ನೀಡಿತ್ತು. ಅಂಗಡಿಗೆ ಒಟ್ಟು ₹29.24 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿತ್ತು. ಈ ನಷ್ಟಕ್ಕೆ ಪರಿಹಾರ ಕೋರಿ ಓರಿಯಂಟಲ್‌ ಇನ್ಶೂರೆನ್ಸ್‌ಗೆ ವಿಮಾಹಣ ನೀಡುವಂತೆ ಅರ್ಜಿ ಸಲ್ಲಿಸಿದ್ದರು.

ಆದರೆ ತಾನು ಪಾವತಿಸಬೇಕಾದ ಒಟ್ಟು ಮೊತ್ತ ₹19.11 ಲಕ್ಷ ಎಂದು ಅಂದಾಜು ಮಾಡಿದ ಓರಿಯಂಟಲ್‌ ಇನ್ಶೂರೆನ್ಸ್‌ ಈಗಾಗಲೇ ಸರ್ಕಾರ ಅಂಗಡಿ ಮಾಲೀಕರಿಗೆ ₹ 3.5 ಲಕ್ಷ ಪರಿಹಾರ ಧನ ನೀಡಿರುವುದರಿಂದ ತಾನು ₹ 15.61 ಲಕ್ಷ ಪಾವತಿಸುವುದಾಗಿ ತಿಳಿಸಿತ್ತು.

 ಇದನ್ನು ಪ್ರಶ್ನಿಸಿ ವಿಮೆದಾರ ಕಾಶ್ಮೀರ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಆಯೋಗ ಓರಿಯಂಟಲ್ ಇನ್ಶೂರೆನ್ಸ್ ₹ 10,000 ವ್ಯಾಜ್ಯ ವೆಚ್ಚ ಸೇರಿದಂತೆ ₹ 19.11 ಲಕ್ಷ ಪಾವತಿಸಲು ಆದೇಶಿಸಿತ್ತು. ಇದನ್ನು ವಿಮಾ ಕಂಪೆನಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. 

Also Read
ಆ್ಯಂಬುಲೆನ್ಸ್‌ನಲ್ಲಿ ಸಾಗಿಸುವಾಗ ರೋಗಿ ಗಾಯಗೊಂಡು ಸಾವನ್ನಪ್ಪಿದರೆ ವಿಮಾ ಕಂಪೆನಿ ಪರಿಹಾರ ನೀಡಬೇಕು: ಹೈಕೋರ್ಟ್‌

ವಾದ ಆಲಿಸಿದ ಹೈಕೋರ್ಟ್‌ ವಿಮಾ ಕಂಪೆನಿಯ ಮನವಿಯನ್ನು ತಿರಸ್ಕರಿಸಿದೆ. ವೈನ್ ಶಾಪ್ ₹22 ಲಕ್ಷಕ್ಕೂ ಹೆಚ್ಚು ನಷ್ಟ ಅನುಭವಿಸಿದೆ. ಸರ್ಕಾರ ಪರಿಹಾರ ಧನ ಪಾವತಿಸಿದೆ ಎಂಬ ಕಾರಣಕ್ಕೆ ತಾನು ವಿಮಾ ಹಣ ನೀಡುವ ಹೊಣೆಗಾರಿಕೆಯಿಂದ ವಿಮಾ ಕಂಪೆನಿ ನುಣುಚಿಕೊಳ್ಳಲಾಗದು ಎಂದು ನ್ಯಾಯಾಲಯ ನುಡಿಯಿತು.

 ಒಮ್ಮೆ ಪ್ರೀಮಿಯಂ ಪಡೆದ ವಿಮಾ ಕಂಪೆನಿ ವಿಮಾ ಮೊತ್ತವನ್ನು ವಿಮೆದಾರನಿಗೆ ನೀಡದೆ ಇರುವುದು ಅಪ್ರಾಮಾಣಿಕತೆಯಾಗುತ್ತದೆ ಎಂದ ಅದು ಓರಿಯೆಂಟಲ್ ಇನ್ಶೂರೆನ್ಸ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿತು. ಅಂತೆಯೇ ಜಮ್ಮು ಮತ್ತು ಕಾಶ್ಮೀರ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ನೀಡಿದ್ದ ತೀರ್ಪನ್ನು ಎತ್ತಿ ಹಿಡಿಯಿತು.

Kannada Bar & Bench
kannada.barandbench.com