ಅಪಘಾತ ಸಂತ್ರಸ್ತರಿಗೆ ಮೊದಲು ಪರಿಹಾರ ಪಾವತಿಸಿ ನಂತರ ವಾಹನದ ಮಾಲೀಕರಿಂದ ವಸೂಲಿ ಮಾಡಿ: ವಿಮಾ ಕಂಪೆನಿಗೆ ಹೈಕೋರ್ಟ್‌

ಮೃತರಿಗೆ ಮಧುಮೇಹ, ಅಸ್ತಮಾದಂತಹ ಕಾಯಿಲೆಗಳಿದ್ದು ಅಪಘಾತದಿಂದು ಉಂಟಾದ ಗಾಯಗಳು ಗುಣವಾಗದ ಪರಿಸ್ಥಿತಿಯು ಅವರಿಗೆ ಎದುರಾಗಿದ್ದನ್ನು ಅಪಘಾತ ಪರಿಹಾರ ನ್ಯಾಯಮಂಡಳಿಯು ಗುರುತಿಸಿ ಪರಿಹಾರ ನೀಡಿರುವುದನ್ನು ಎತ್ತಿಹಿಡಿದ ನ್ಯಾಯಪೀಠ.
Karnataka HC-Dharwad bench and Justice H P Sandesh
Karnataka HC-Dharwad bench and Justice H P Sandesh

ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬದವರಿಗೆ ಪರಿಹಾರ ಪಾವತಿಸಿ, ಬಳಿಕ ಆ ವಾಹನದ ಮಾಲೀಕನಿಂದ ಪರಿಹಾರದ ಮೊತ್ತ ವಸೂಲಿ ಮಾಡಿಕೊಳ್ಳಲು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ವಿಮಾ ಕಂಪೆನಿಯೊಂದಕ್ಕೆ ಆದೇಶಿಸಿದೆ.

ಯುನೈಟೆಡ್‌ ಇಂಡಿಯಾ ಇನ್ಯೂರೆನ್ಸ್‌ ಕಂಪೆನಿ ಲಿಮಿಟೆಡ್‌ನ ಪ್ರಾದೇಶಿಕ ವ್ಯವಸ್ಥಾಪಕರು ಸಲ್ಲಿಸಿದ್ದ ಪ್ರಥಮ ಮೇಲ್ಮನವಿಯನ್ನು (ಎಂಎಫ್‌ಎ) ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಮಾನ್ಯ ಮಾಡಿದೆ.

“ಪರಿಹಾರ ಮಂಜೂರು ಮಾಡಿರುವ ಮೋಟಾರ್‌ ಅಪಘಾತ ಪರಿಹಾರ ನ್ಯಾಯ ಮಂಡಳಿಯು (ಎಂಎಸಿಟಿ) ಅಪಘಾತಕ್ಕೆ ಪೂರಕವಾದ ಅಲಕ್ಷ್ಯವನ್ನು ಪರಿಗಣಿಸಿಲ್ಲ ಎಂದು ವಾದಿಸಲಾಗಿದೆ. ಆದರೆ, ಇದನ್ನು ಸಾಬೀತುಪಡಿಸಲು ಆಟೊ ರಿಕ್ಷಾದ ಚಾಲಕನನ್ನು ವಿಮಾ ಕಂಪೆನಿಯು ವಿಚಾರಣೆಗೆ ಒಳಪಡಿಸಿಲ್ಲ. ಹಾಲಿ ಪ್ರಕರಣದಲ್ಲಿ ಮಾತನಾಡಲು ಅವರು ಸೂಕ್ತ ವ್ಯಕ್ತಿಯಾಗಿದ್ದರು. ಇದಲ್ಲದೇ, ಆಟೊ ರಿಕ್ಷಾ ಡ್ರೈವರ್‌ ವಿರುದ್ಧವೂ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಸಮರ್ಪಕ ಸಾಕ್ಷಿಯ ಕೊರತೆಯ ಹಿನ್ನೆಲೆಯಲ್ಲಿ ಪೂಕರವಾದ ಅಲಕ್ಷ್ಯ ಪರಿಗಣಿಸಿಲ್ಲ ಎಂಬ ವಿಮಾ ಕಂಪೆನಿಯನ್ನು ಒಪ್ಪಲಾಗದು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಚಾಲಕನ ಹೆಸರಿಗೂ ಆರೋಪ ಪಟ್ಟಿಯಲ್ಲಿನ ಚಾಲಕನ ಹೆಸರಿಗೂ ವ್ಯತ್ಯಾಸವಿದೆ ಎಂದು ವಿಮಾ ಕಂಪೆನಿ ವಾದಿಸಿದೆ. ಚಾಲಕನನ್ನು ಸಿಲುಕಿಸುವಲ್ಲಿ ವ್ಯತ್ಯಾಸವಾಗಿದೆ ಎಂಬುದನ್ನು ಸಾಬೀತುಪಡಿಸುವ ವಿಚಾರದಲ್ಲಿ ವಿಮಾ ಕಂಪೆನಿಯು ತನಿಖಾಧಿಕಾರಿಯನ್ನು ವಿಚಾರಣೆಗೆ ಒಳಪಡಿಸಲಾಗಿಲ್ಲ. ಅಪಘಾತ ದಿನದಂದು ಆಟೊ ರಿಕ್ಷಾ ಡ್ರೈವರ್‌ ಚಾಲನಾ ಪರವಾನಗಿ ಹೊಂದಿರಲಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಚಾಲನಾ ಪರವನಾಗಿಯನ್ನು ಮಾರ್ಕ್‌ ಮಾಡಲಾಗಿದೆ. ಮಾಲೀಕನು ವಾಹನ ನೀಡುವುದಕ್ಕೂ ಮುನ್ನ ಚಾಲನಾ ಪರವನಾಗಿ ಹೊಂದಿರುವ ಕುರಿತು ಪರಿಶೀಲಿಸಬೇಕಿತ್ತು. ಆದರೆ, ಅದನ್ನು ಮಾಡಿಲ್ಲ ಎಂಬ ವಿಮಾ ಕಂಪೆನಿಯ ವಾದದಲ್ಲಿ ಸತ್ವವಿದೆ. ಅದಾಗ್ಯೂ, ಪಪ್ಪು ವರ್ಸಸ್‌ ವಿನೋದ್‌ ಕುಮಾರ್‌ ಲಾಂಬಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಮೂರನೇ ವ್ಯಕ್ತಿ ಕ್ಲೇಮಿನ ವಿಚಾರದಲ್ಲಿ ವಿಮಾ ಕಂಪೆನಿಯು ಪರಿಹಾರ ಪಾವತಿಸಿ, ಬಳಿಕ ವಾಹನದ ಮಾಲೀಕನಿಂದ ಪರಿಹಾರದ ಹಣ ವಸೂಲಿ ಮಾಡಿಕೊಳ್ಳಬೇಕು ಎಂದು ಹೇಳಿದೆ. ಹೀಗಾಗಿ, ಇದು ಪರಿಹಾರ ಪಾವತಿಸಿ, ಅದನ್ನು ವಸೂಲಿ ಮಾಡಿಕೊಳ್ಳಲು ಅರ್ಹವಾದ ಪ್ರಕರಣ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಹುಬ್ಬಳ್ಳಿಯ ಸುಭಾಷ್‌ ನಗರದ ನಿವಾಸಿ ಕಾಶೀಂ ಸಾಬ್‌ ಅವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಎದುರಿಗೆ ಬಂದ ಆಟೊ ರಿಕ್ಷಾ ಗುದ್ದಿ, ಅಪಘಾತ ಸಂಭವಿಸಿತ್ತು. ಇದರಿಂದ ಕಾಶೀಂ‌ ಸಾಬ್‌ ಅವರಿಗೆ ಎಲುಬು ಮುರಿದಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ 2009ರ ಡಿಸೆಂಬರ್‌ 21ರಿಂದ 30ರವರೆಗೆ ಚಿಕಿತ್ಸೆ ಪಡೆದು ಮನಗೆ ವಾಪಸ್‌ ಆಗಿದ್ದರು. ಶಸ್ತ್ರ ಚಿಕಿತ್ಸೆಯಾದರೂ ಚೇತರಿಸಿಕೊಳ್ಳದ ಕಾಶೀಂ ಸಾಬ್‌ ಅವರು 2010ರ ಏಪ್ರಿಲ್‌ 5ರಂದು ಸಾವನ್ನಪ್ಪಿದ್ದರು.

ಅಪಘಾತಕ್ಕೆ ಕಾರಣವಾದ ಆಟೊ ರಿಕ್ಷಾದ ಚಾಲಕ ಮೊಹಮ್ಮದ್‌ ರಫೀಕ್‌ ಅವರು ಘಟನೆ ನಡೆದ ದಿನದಂದು ಚಾಲನಾ ಪರವನಾಗಿ ಹೊಂದಿರಲಿಲ್ಲ ಎಂದು ವಿಮಾ ಕಂಪೆನಿ ವಾದಿಸಿತ್ತು. ಉಭಯ ವಾದಗಳನ್ನು ಆಲಿಸಿದ್ದ ಎಂಎಸಿಟಿಯು ಕಾಶೀಂ ಸಾಬ್‌ ಕುಟುಂಬಕ್ಕೆ 3,44,280 ರೂಪಾಯಿ ಪರಿಹಾರ ಪಾವತಿಸಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ವಿಮಾ ಕಂಪೆನಿಯು ಕಾಶೀಂಸಾಬ್‌ ಅವರಿಗೆ ಅಪಘಾತದಿಂದ ಆದ ಗಾಯಕ್ಕೂ ಸಾವಿಗೂ ಯಾವುದೇ ಸಂಬಂಧವಿಲ್ಲ. ಈ ಸಂಬಂಧ ಯಾವುದೇ ದಾಖಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿಲ್ಲ. ಹೀಗಾಗಿ, ಪರಿಹಾರ ಮಂಜೂರು ಮಾಡುವ ವಿಚಾರದಲ್ಲಿ ಎಂಎಸಿಟಿಯು ಪ್ರಮಾದ ಎಸಗಿದೆ ಎಂದು ವಾದಿಸಿತ್ತು.

ಅಪಘಾತ ಸಂಭವಿಸಿದಾಗ ಉಂಟಾದ ನ್ಯೂನತೆಗೂ ಸಾವಿಗೆ ಕಾರಣವಾದ ಸಂಗತಿಯಾದ ಹೃದಯಾಘಾತಕ್ಕೂ ಸಂಬಂಧವಿಲ್ಲ. ಮೃತರಿಗೆ ಮಧುಮೇಹ, ಅಸ್ತಮಾದಂತಹ ಕಾಯಿಲೆಗಳಿದ್ದವು ಎಂದು ವಾದಿಸಿತ್ತು. ಮೃತರ ಸಾವಿಗೆ ನೇರವಾಗಿ ಅಪಘಾತ ಕಾರಣವಲ್ಲದೆ ಹೋದರೂ, ಅಪಘಾತದ ನಂತರ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿರುವುದು, ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದನ್ನು ನ್ಯಾಯಾಲಯವು ಪರಿಗಣಿಸಿತು. ಈ ಕಾಯಿಲೆಗಳಿಂದಾಗಿ ಅಪಘಾತದಿಂದು ಉಂಟಾದ ಗಾಯಗಳು ಗುಣವಾಗದ ಪರಿಸ್ಥಿತಿಯು ಮೃತರಿಗೆ ಎದುರಾಗಿದ್ದನ್ನು ಮಂಡಳಿಯು ಗುರುತಿಸಿ ಪರಿಹಾರ ನೀಡಿರುವುದನ್ನು ಎತ್ತಿಹಿಡಿಯಿತು.

Related Stories

No stories found.
Kannada Bar & Bench
kannada.barandbench.com