ಅಜ್ಜನ ಸ್ವಯಾರ್ಜಿತ ಆಸ್ತಿಯಲ್ಲಿ ತಂದೆ ತನ್ನ ಹಕ್ಕು ತ್ಯಜಿಸಿದ್ದರೆ ಮಕ್ಕಳು ಪಾಲು ಕೇಳಲು ಪ್ರತಿಬಂಧವಿದೆ: ಸುಪ್ರೀಂ

ಪ್ರತಿಬಂಧ ಉಂಟು ಮಾಡಿದ ವ್ಯಕ್ತಿಯ ಮೂಲಕ ಹಕ್ಕು ಚಲಾಯಿಸುವ ವ್ಯಕ್ತಿಗಳು ಪ್ರತಿಬಂಧದ ಪರಿಣಾಮವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ ಪೀಠ.
Justice KM Joseph and Justice Hrishikesh Roy and Supreme Court
Justice KM Joseph and Justice Hrishikesh Roy and Supreme Court

ತಾತನ ಸ್ವಯಾರ್ಜಿತ ಆಸ್ತಿಯ ಮೇಲೆ ತಮ್ಮ ತಂದೆ ಈಗಾಗಲೇ ಹಕ್ಕು ತ್ಯಜಿಸಿದ್ದರೆ ಅಂತಹ ತಂದೆಯ ಮಕ್ಕಳು ತಮ್ಮ ಪಾಲು ಪಡೆಯುವುದಕ್ಕೆ ಪ್ರತಿಬಂಧ ಉಂಟಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೇಳಿದೆ [ಏಳುಮಲೈ ಅಲಿಯಾಸ್‌ ವೆಂಕಟೇಶನ್‌ ಮತ್ತಿತರರು ಮತ್ತು ಎಂ ಕಮಲಾ ಇನ್ನಿತರರ ನಡುವಣ ಪ್ರಕರಣ].

ಪ್ರತಿಬಂಧ ಉಂಟು ಮಾಡಿದ ವ್ಯಕ್ತಿಯ ಮೂಲಕ ಹಕ್ಕು ಚಲಾಯಿಸುವ ವ್ಯಕ್ತಿಗಳು ಪ್ರತಿಬಂಧದ ಪರಿಣಾಮವನ್ನು ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ತಮ್ಮ ತಾತನ ಸ್ವಯಾರ್ಜಿತ ಆಸ್ತಿಯಲ್ಲಿ ಮೇಲ್ಮನವಿದಾರರಿಗೆ ಪಾಲು ನೀಡಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಸದರಿ ಆಸ್ತಿಯಲ್ಲಿನ ಹಕ್ಕುಗಳನ್ನು ಬಿಟ್ಟುಕೊಟ್ಟು ಅವರ ತಂದೆ  ಘೋಷಿಸಿದ್ದ ತ್ಯಾಗಪತ್ರವನ್ನು ಗಮನಿಸಿದ ನಂತರ ಹೈಕೋರ್ಟ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿತು.

ಸೆಂಗಲಾನಿ ಚೆಟ್ಟಿಯಾರ್ ಎಂಬುವವರ ಎರಡನೇ ಮದುವೆಯಿಂದ ಜನಿಸಿದ ಅವರ ಇಬ್ಬರು ಮಕ್ಕಳು ಸಲ್ಲಿಸಿದ ಆಸ್ತಿ ಹಂಚಿಕೆ ಮೊಕದ್ದಮೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ವಿವಾದದಲ್ಲಿರುವ ಆಸ್ತಿ ಚೆಟ್ಟಿಯಾರ್ ಅವರ ಸ್ವಯಾರ್ಜಿತ ಆಸ್ತಿ. ತಮ್ಮ ಮೊದಲ ಮದುವೆಯಿಂದ, ಚೆಟ್ಟಿಯಾರ್‌ ಅವರಿಗೆ ಚಂದ್ರನ್ ಹೆಸರಿನ ಒಬ್ಬ ಮಗ ಜನಿಸಿದ್ದರು, ಎರಡನೇ ಮದುವೆಯಿಂದ, ಐವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಪಡೆದಿದ್ದರು.

ಚೆಟ್ಟಿಯಾರ್ ಅವರ ಮೊದಲ ಮದುವೆಯಿಂದ ಜನಿಸಿದ ಏಕೈಕ ಪುತ್ರ ಚಂದ್ರನ್ ಅವರು 1978ರಲ್ಲಿ ನಿಧನರಾಗುವ ಮೊದಲು 1975 ರಲ್ಲಿ ಆಸ್ತಿಗೆ ಸಂಬಂಧಿಸಿದಂತೆ ತ್ಯಾಗಪತ್ರ ಕಾರ್ಯಗತಗೊಳಿಸಿದ್ದರು.

ಚೆಟ್ಟಿಯಾರ್ 1988ರಲ್ಲಿ ನಿಧನರಾದರೆ ಅವರ ಎರಡನೇ ಪತ್ನಿ 2005ರಲ್ಲಿ ಇಹಲೋಕ ತ್ಯಜಿಸಿದ್ದರು. ನಂತರ, ಚೆಟ್ಟಿಯಾರ್ ಅವರ ಎರಡನೇ ಮದುವೆಯಿಂದ ಜನಿಸಿದ ಇಬ್ಬರು ಮಕ್ಕಳು (ಫಿರ್ಯಾದಿಗಳು)  ಆಸ್ತಿ ಪಾಲಿಗಾಗಿ ಮೊಕದ್ದಮೆ ಸಲ್ಲಿಸಿದ್ದರು.

ಪ್ರಸ್ತುತ ಮೇಲ್ಮನವಿದಾರರಾಗಿರುವ ಚಂದ್ರನ್ ಅವರ ಉತ್ತರಾಧಿಕಾರಿಯನ್ನು ಮೊಕದ್ದಮೆಗೆ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ವಿಚಾರಣಾ ನ್ಯಾಯಾಲಯದ ಮುಂದೆ ಸಲ್ಲಿಸಲಾಗಿದ್ದ ಆಸ್ತಿ ಪಾಲಿನ ಮೊಕದ್ದಮೆಯಲ್ಲಿ, ಮೇಲ್ಮನವಿದಾರರ ತಂದೆ ಚಂದ್ರನ್ ಅವರು ಕಾರ್ಯಗತಗೊಳಿಸಿದ ಪತ್ರದ ಆಧಾರದ ಮೇಲೆ ಪ್ರಸ್ತುತ ಮೇಲ್ಮನವಿದಾರರನ್ನು ಹೊರಗಿಡಲು ಫಿರ್ಯಾದಿಗಳು ಪ್ರಾರ್ಥಿಸಿದರು. ಆದರೆ  ಅರ್ಜಿದಾರರ ತಂದೆ 1975ರಲ್ಲಿ ಅವರ ತಂದೆ ಚೆಟ್ಟಿಯಾರ್ ಬದುಕಿದ್ದಾಗ ತ್ಯಾಗಪತ್ರವನ್ನು ಕಾರ್ಯಗತಗೊಳಿಸಿದ್ದರಿಂದ  ಅರ್ಜಿದಾರರು ತಮ್ಮ ಅಜ್ಜನ ಆಸ್ತಿ ಉತ್ತರಾಧಿಕಾರವಾಗಿ ಪಡೆಯುವುದನ್ನು ಅಂತಹ ತ್ಯಾಗಪತ್ರ ತಡೆಯುವುದಿಲ್ಲ ಎಂದು ಅಧೀನ ನ್ಯಾಯಾಲಯ ಹೇಳಿತ್ತು. ಆದ್ದರಿಂದ ಪಾಲಿಗೆ ಸಂಬಂಧಿಸಿದ ಮೊಕದ್ದಮೆಯಲ್ಲಿನ ಫಿರ್ಯಾದಿಗಳಿಗೆ ಆಸ್ತಿಯ 2/7 ಪಾಲನ್ನು ಮಾತ್ರ ನೀಡಲಾಗಿತ್ತು.

ಇದನ್ನು ಪ್ರಶ್ನಿಸಿ ಚೆಟ್ಟಿಯಾರ್‌ ಅವರ ಎರಡನೇ ಪತ್ನಿಯ ಮಕ್ಕಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಪರಿಹಾರ ನೀಡಿದ ಹೈಕೋರ್ಟ್‌ ಮೇಲ್ಮನವಿದಾರರು ತಮ್ಮ ತಂದೆ ಚಂದ್ರನ್‌ ಕಾರ್ಯಗತಗೊಳಿಸಿದ ತ್ಯಾಗಪತ್ರ ಆಧರಿಸಿ ಈ ಆಸ್ತಿಯಲ್ಲಿ ಯಾವುದೇ ಪಾಲು ಪಡೆಯಬಾರದು ಎಂದು ಸೂಚಿಸಿತು. ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

Related Stories

No stories found.
Kannada Bar & Bench
kannada.barandbench.com