"ಪ್ರಸ್ತುತ ಏಕರೂಪದ ನಾಗರಿಕ ಸಂಹಿತೆ ಬಗ್ಗೆ ಸಾಕಷ್ಟು ಅಕೆಡೆಮಿಕ್ ಮಾತುಕತೆಗಳು ನಡೆಯುತ್ತಿದ್ದು ಅಂತಹ ಚರ್ಚೆಗಳಲ್ಲಿ ಮಗ್ನರಾಗಿರುವ ಬುದ್ಧಿಜೀವಿಗಳು ಗೋವಾಕ್ಕೆ ಹೋಗಿ ಏಕರೂಪ ನಾಗರಿಕ ಸಂಹಿತೆಯಡಿ (ಯುಸಿಸಿ) ಅಲ್ಲಿನ ನ್ಯಾಯಾಡಳಿತ ಕಾರ್ಯ ನಿರ್ವಹಿಸುತ್ತಿರುವ ರೀತಿಯನ್ನು ನೋಡಬೇಕು" ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಶನಿವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗೋವಾದಲ್ಲಿರುವ ಬಾಂಬೆ ಹೈಕೋರ್ಟ್‌ನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸಿಜೆಐ ಮಾತನಾಡುತ್ತಿದ್ದರು. ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಗೋವಾ ರಾಜ್ಯಕ್ಕೆ ಅನ್ವಯವಾಗುವ ಏಕರೂಪ ನಾಗರಿಕ ಸಂಹಿತೆಯಡಿ ನ್ಯಾಯದಾನ ಮಾಡುವ ಭಾಗ್ಯ ತಮ್ಮದಾಗಿತ್ತು ಎಂದು ಅವರು ಹೇಳಿದ್ದಾರೆ.
"ಸಂವಿಧಾನ ನಿರ್ಮಾತೃಗಳು ಭಾರತಕ್ಕಾಗಿ ಏನನ್ನು ಮುಂಗಂಡು ಆಲೋಚಿಸಿದ್ದರೋ ಆ ಏಕರೂಪ ನಾಗರಿಕ ಸಂಹಿತೆ ಗೋವಾದಲ್ಲಿದೆ. ಧಾರ್ಮಿಕ ಸಂಬಂಧವನ್ನು ಲೆಕ್ಕಿಸದೆ ಎಲ್ಲಾ ಗೋವನ್ನರ ಮದುವೆ ಮತ್ತು ಉತ್ತರಾಧಿಕಾರದಲ್ಲಿ ಇದು ಅನ್ವಯವಾಗುತ್ತಿದೆ. ಏಕರೂಪದ ನಾಗರಿಕ ಸಂಹಿತೆಯ ಬಗ್ಗೆ ನಾನು ಸಾಕಷ್ಟು ಅಕೆಡೆಮಿಕ್ ಮಾತುಕತೆಗಳನ್ನು ಕೇಳಿದ್ದೇನೆ. ಅದು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಯಲು ಸುಮ್ಮನೆ ಇಲ್ಲಿಗೆ ಬಂದು ನೋಡಿ ಎಂದು ನಾನು ಬುದ್ಧಿಜೀವಿಗಳನ್ನು ವಿನಂತಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿರುವ ಭಾರತದ ಏಕೈಕ ರಾಜ್ಯ ಗೋವಾ. ಧರ್ಮವನ್ನು ಲೆಕ್ಕಿಸದೆ ಅಲ್ಲಿ ಎಲ್ಲ ನಾಗರಿಕರಿಗೂ ಏಕರೂಪ ವೈಯಕ್ತಿಕ ಕಾನೂನುಗಳು ಅನ್ವಯವಾಗಿವೆ. ದೇಶದಲ್ಲಿರುವ ಎಲ್ಲಾ ನಾಗರಿಕರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಒದಗಿಸಬೇಕು ಎಂದು ಸಂವಿಧಾನದ 44 ನೇ ವಿಧಿ ಹೇಳುತ್ತದೆ. ಆದರೆ ಅದು ಕೇವಲ ರಾಜ್ಯ ನೀತಿ ನಿರ್ದೇಶಕ ತತ್ವವಾಗಿರುವುದರಿಂದ ಅದನ್ನು ಜಾರಿಗೆ ತರಲು ಸಾಧ್ಯವಿಲ್ಲ.