ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಎಚ್ ಕಾಂತರಾಜು ತಮ್ಮ ಅವಧಿಯಲ್ಲಿ ನಡೆಸಿರುವ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ವರದಿ (ಜಾತಿ ಗಣತಿ) ಬಹಿರಂಗಗೊಳಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಚಂದ್ರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿ ವಕೀಲರೊಬ್ಬರು ಕರ್ನಾಟಕ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.
ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿ ಓದನಹಳ್ಳಿಯ ವಕೀಲ ಓ ಕೆ ರಘು ಅವರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಮಂಗಳವಾರ ರಘು ಪರ ವಕೀಲ ಅಭಿಷೇಕ್ ಕುಮಾರ್ ಅವರು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿದರು. ಆ ಮನವಿ ಪರಿಗಣಿಸಿದ ಪೀಠವು ಮೂಲ ಅರ್ಜಿಯೊಂದಿಗೆ ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು ಎಂದು ತಿಳಿಸಿತು.
ಮಧ್ಯಂತರ ಅರ್ಜಿಯಲ್ಲಿ “ವರದಿಯನ್ನು ಬಹಿರಂಗಗೊಳಿಸಿ ಸಾರ್ವಜನಿಕ ಅವಗಾಹನೆಗೆ ತರಬೇಕು ಮತ್ತು ಆಯೋಗವು ಇದನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ದೇಶಿಸಬೇಕು ಎಂದು ಕೋರಿ, ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಗೌರವಾಧ್ಯಕ್ಷರೂ ಆದ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಒಟ್ಟು 13 ವಿವಿಧ ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ರಾಜಕೀಯ ದುರುದ್ದೇಶದಿಂದ ಕೂಡಿದೆ” ಎಂದು ವಿವರಿಸಲಾಗಿದೆ.
“ಈ ವರದಿ ಕಾನೂನು ಬದ್ಧವಾಗಿಲ್ಲ. ಯಾವುದೇ ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲ. ಈ ಪ್ರಕರಣದಲ್ಲಿ ಅರ್ಜಿದಾರರು ತಮ್ಮ ಪೂರ್ವಾಪರಗಳನ್ನೇ ಬಹಿರಂಗಗೊಳಿಸಿಲ್ಲ. ವರದಿ ಬಹಿರಂಗಗೊಳ್ಳುವಂತೆ ಹೈಕೋರ್ಟ್‌ನಿಂದ ನ್ಯಾಯಾಂಗದ ಆದೇಶ ಪಡೆದು ಅದರಿಂದ ರಾಜಕೀಯ ಲಾಭ ಪಡೆಯುವುದು ಅರ್ಜಿದಾರರ ಹುನ್ನಾರ” ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
“ಎಂಟು ವರ್ಷಗಳ ಹಿಂದೆ ತಯಾರಿಸಲಾಗಿರುವ ಈ ವರದಿ ಹಲವು ಕಾರಣಗಳಿಂದಾಗಿ ಇನ್ನೂ ಬೆಳಕಿಗೆ ಬಂದಿಲ್ಲ. ಆಯೋಗದ ಬಳಿ ಮೂಲ ವರದಿಯೇ ಇಲ್ಲ. ಒಂದೆಡೆ ಮೂಲ ವರದಿ ಕಳುವಾಗಿದೆ ಎಂದು ಹೇಳಲಾಗುತ್ತಿದ್ದರೆ, ಮತ್ತೊಂದೆಡೆ, ಆಯೋಗದ ಸದಸ್ಯ ಕಾರ್ಯದರ್ಶಿ ಈ ವರದಿಗೆ ಸಹಿ ಮಾಡಿಲ್ಲ ಎಂಬ ಅಂಶವನ್ನೂ ಕೋರ್ಟ್ ಗಮನಿಸಬೇಕಿದೆ. ವರದಿಯಲ್ಲಿರುವ ಪ್ರಮುಖ ಅಂಶಗಳೆಲ್ಲವೂ ಮಾಧ್ಯಮಗಳಲ್ಲಿ ಸೋರಿಕೆಯಾಗಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಈ ಕುರಿತಂತೆ ಮಾಹಿತಿ ಹಕ್ಕು ಕಾಯಿದೆ ಅಡಿ ಕೋರಲಾದ ಅರ್ಜಿಗೆ ಉತ್ತರಿಸಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು, ಮಾಹಿತಿಯು ಗೋಪ್ಯ ಸ್ವರೂಪದ್ದಾಗಿದೆ ಎಂಬ ಉತ್ತರ ನೀಡಿದ್ದು ಇವೆಲ್ಲವೂ ಸಾಕಷ್ಟು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ” ಎಂದು ವಿವರಿಸಲಾಗಿದೆ.
ಮುಖ್ಯಮಂತ್ರಿ ಚಂದ್ರು ಸಲ್ಲಿಸಿರುವ ಪಿಐಎಲ್‌ನಲ್ಲಿ ತಿಗಳ ಕ್ಷತ್ರಿಯ ಮಹಾಸಭಾ, ಕರ್ನಾಟಕ ಪ್ರದೇಶ ಕುರುಬರ ಸಂಘ, ಕರ್ನಾಟಕ ರಾಜ್ಯ ಮಡಿವಾಳರ ಸಂಘ, ಸೂರ್ಯವಂಶ ಆರ್ಯ ಕ್ಷತ್ರಿಯ ಸಮಾಜ, ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ಸವಿತಾ ಕಲಾ ಸಂಘ, ಕರ್ನಾಟಕ ರಾಜ್ಯ ದೇವಾಂಗ ಸಂಘ, ಕರ್ನಾಟಕ ರಾಜ್ಯ ಕ್ಷತ್ರಿಯ ಸಂಘ, ಕರ್ನಾಟಕ ರಾಜ್ಯ ಸುಡುಗಾಡು ಸಿದ್ದ ಮಹಾ ಸಂಘ ಮತ್ತು ಅಲೆಮಾರಿ ಬುಡಕಟ್ಟು ಮಹಾಸಭಾಗಳೂ ಅರ್ಜಿದಾರರಾಗಿವೆ.
ಪಿಐಎಲ್‌ನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಬಿ ಎಸ್ ನಟರಾಜ್ ಹಾಗೂ ಒಕ್ಕಲಿಗರ ಮುಖಂಡ ಹಾಸನದ ಉದ್ಯಮಿ ಕೃಷ್ಣೇಗೌಡ ಸಲ್ಲಿಸಿರುವ ಮಧ್ಯಂತರ ಅರ್ಜಿಗಳೂ ವಿಚಾರಣೆಗೆ ಬಾಕಿ ಇವೆ. 2015ರಲ್ಲಿ ನಡೆಸಲಾಗಿರುವ ಜಾತಿ ಗಣತಿಯನ್ನು ಪ್ರಶ್ನಿಸಿ ಬೀದರ್‌ನ ಶಿವರಾಜ್ ಕಣಶೆಟ್ಟಿ, ನರಗುಂದದ ಚಂದ್ರಶೇಖರ ಸಾಂಬ್ರಾಣಿ, ಹುನಗುಂದದ ಬಸವರಾಜ ದಿಂಡೂರ ಮತ್ತು ಬೆಂಗಳೂರಿನ ಎಂ ಎಸ್ ನಟರಾಜ್ ಸಲ್ಲಿಸಿರುವ ಮತ್ತೊಂದು ಪಿಐಎಲ್ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ವಿಚಾರಣೆಯ ಹಂತದಲ್ಲಿದೆ.