ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 28 ಅಥವಾ ಕೌಟುಂಬಿಕ ನ್ಯಾಯಾಲಯಗಳ ಕಾಯಿದೆಯ (ಎಫ್‌ಸಿ ಕಾಯಿದೆ) ಸೆಕ್ಷನ್ 19ರ ಅಡಿಯಲ್ಲಿ ಮಧ್ಯಂತರ ಅಥವಾ ದಾವಾ ಬಾಕಿ ಜೀವನಾಂಶ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವಂತಿಲ್ಲಎಂದು ಮದ್ರಾಸ್ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ.
ಮಧ್ಯಂತರ ಜೀವನಾಂಶದ ಇಂತಹ ಆದೇಶಗಳನ್ನು ಸಂವಿಧಾನದ 227 ನೇ ವಿಧಿಯಡಿ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಗಳ ಮೂಲಕ ಮಾತ್ರವೇ ಪ್ರಶ್ನಿಸಬಹುದು ಎಂದು ನ್ಯಾಯಮೂರ್ತಿಗಳಾದ ಎಂ ಸುಂದರ್ ಮತ್ತು ಕೆ ಗೋವಿಂದರಾಜನ್ ತಿಳಕವಾಡಿ ಅವರಿದ್ದ ಪೀಠ ಮಾರ್ಚ್ 21ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದೆ.
ವಿಚಾರಣೆಯ ವೆಚ್ಚಗಳ ಪಾವತಿ ಮತ್ತು ವಿಚಾರಣೆಯ ಸಮಯದಲ್ಲಿ ಮಾಸಿಕ ಜೀವನಾಂಶಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ನ್ಯಾಯಾಲಯಗಳು ನೀಡಿದ ಮಧ್ಯಂತರ ಆದೇಶಗಳು ʼಮಧ್ಯಂತರ ಆದೇಶಗಳಷ್ಟೇʼ. ಆದ್ದರಿಂದ, ಅವುಗಳನ್ನು ಕೌಟುಂಬಿಕ ನ್ಯಾಯಾಲಯ ಕಾಯಿದೆಯ ಸೆಕ್ಷನ್ 19 ಅಥವಾ ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 28ರ ಅಡಿಯಲ್ಲಿ ಪ್ರಶ್ನಿಸಲಾಗುವುದಿಲ್ಲ ಎಂದು ಅದು ಹೇಳಿದೆ.
ಈ ನಿಟ್ಟಿನಲ್ಲಿ, ಮೇಲ್ಮನವಿ ಹೈಕೋರ್ಟ್‌ನ ಪರಿಧಿಯೊಳಗೆ ಬರಬೇಕಾದರೆ ಮೇಲ್ಮನವಿಗೆ ಸಂಬಂಧಿಸಿದ ಆದೇಶ ಮಧ್ಯಂತರ ಆದೇಶವಾಗಿರಬಾರದು ಎಂದು ಕೌಟುಂಬಿಕ ನ್ಯಾಯಾಲಯ ಕಾಯಿದೆಯ ಸೆಕ್ಷನ್ 19ರ ಉಪ ಸೆಕ್ಷನ್ (1) ಸ್ಪಷ್ಟಪಡಿಸಿರುವುದಾಗಿ ನ್ಯಾಯಾಲಯ ತಿಳಿಸಿದೆ.
ಈರೋಡ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕ್ರಿಯೆಗಳು ಬಾಕಿ ಇರುವಾಗ, ಮಾಸಿಕ ವೆಚ್ಚ ಮತ್ತು ದಾವಾ ವೆಚ್ಚ ಭರಿಸಲು ಪತ್ನಿಗೆ ಜೀವನಾಂಶವನ್ನು ನೀಡುವ ಮಧ್ಯಕಾಲೀನ ಆದೇಶವನ್ನು ಪತಿ ಪ್ರಶ್ನಿಸಿದ್ದರು. ಮತ್ತೊಂದೆಡೆ, ಪತ್ನಿ ಕೂಡ ಅದೇ ಆದೇಶವನ್ನು ಪ್ರಶ್ನಿಸಿದ್ದು, ತಾನು ಹೆಚ್ಚಿನ ಮೊತ್ತದ ಜೀವನಾಂಶಕ್ಕೆ ಅರ್ಹಳಾಗಿದ್ದೇನೆ ಎಂದಿದ್ದರು.
ಕೌಟುಂಬಿಕ ನ್ಯಾಯಾಲಯ ಕಾಯ್ದೆಯ ಸೆಕ್ಷನ್ 19 ರ ಅಡಿಯಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಸಿವಿಲ್ ಮಿಸಿಲೇನಿಯಸ್ ಅರ್ಜಿ (ಸಿಎಂಎ) ಸಲ್ಲಿಸಿದ್ದರು.
ಆದರೆ ಅಂತಹ ಸಿಎಂಎಗಳ ನಿರ್ವಹಣೆಯ ಬಗ್ಗೆ ಹಲವಾರು ಹೈಕೋರ್ಟ್‌ಗಳು ವ್ಯತಿರಿಕ್ತ ತೀರ್ಪು ನೀಡಿವೆ ಎಂದು ವಿಚಾರಣೆ ವೇಳೆ ಎರಡೂ ಕಡೆಯ ವಕೀಲರು ಮತ್ತು ನ್ಯಾಯಾಲಯ ಕಂಡುಕೊಂಡವು. ಸುಪ್ರೀಂ ಕೋರ್ಟ್ ಕೂಡ ಈ ಅಂಶದ ಬಗ್ಗೆ ಇನ್ನೂ ಸ್ಪಷ್ಟ ಉತ್ತರವನ್ನು ನೀಡಿಲ್ಲ ಎಂದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಕುರಿತ ಪ್ರಶ್ನೆಯನ್ನು ಪ್ರಧಾನವಾಗಿಸಿಕೊಂಡು ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಕ್ರಿಯೆಯನ್ನು ನಾಯಾಲಯ ಮಾಡಿತು. ಇದಕ್ಕಾಗಿ ಅಮಿಕಸ್ ಕ್ಯೂರಿಯನ್ನು ಸಹ ನೇಮಕ ಮಾಡಿತ್ತು.
ಆದ್ದರಿಂದ ಇಂತಹ ಹಲವು ಅರ್ಜಿಗಳನ್ನು ಒಟ್ಟಿಗೆ ಸೇರಿಸಿರುವ ಪೀಠ "ಸಂಧಾನಾತ್ಮಕ ಆದೇಶ ಪ್ರಕಟವಾಗದೆ ಇರುವಾಗ ಕುಟುಂಬ ನ್ಯಾಯಾಲಯಗಳ ಕಾಯಿದೆಯ ಸೆಕ್ಷನ್ 19 ರ ಉಪ ವಿಭಾಗ (1) ರ ಅಡಿಯಲ್ಲಿ ಶಾಸನಬದ್ಧ ಮೇಲ್ಮನವಿಗಳನ್ನು ನಿರ್ವಹಿಸಬಹುದೇ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ತನಗೆ ಸಹಾಯ ಮಾಡಲೆಂದು ಅದು ಅಮಿಕಸ್ ಕ್ಯೂರಿ ಅವರನ್ನು ನೇಮಿಸಿಕೊಂಡಿದೆ.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]