ಎಚ್‌ಎಸ್‌ಆರ್‌ಪಿ ಅಳವಡಿಕೆ ಪ್ರಕರಣದಲ್ಲಿ ಮಧ್ಯಂತರ ಆದೇಶ ವಿಸ್ತರಣೆ; ಡಿಸೆಂಬರ್‌ 4ಕ್ಕೆ ವಿಚಾರಣೆ ಮುಂದೂಡಿಕೆ

ಏಕಸದಸ್ಯ ಪೀಠದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ಮಾಡಲಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಮಧ್ಯಂತರ ಆದೇಶ ಮುಂದುವರಿಯಲಿ, ಅದರ ಜೊತೆಗೆ ಏಕಸದಸ್ಯ ಪೀಠವು ಪ್ರಕರಣ ನಿರ್ಧರಿಸಲು ಆದೇಶಿಸಬಹುದು ಎಂದ ಎಜಿ.
ಎಚ್‌ಎಸ್‌ಆರ್‌ಪಿ ಅಳವಡಿಕೆ ಪ್ರಕರಣದಲ್ಲಿ ಮಧ್ಯಂತರ ಆದೇಶ ವಿಸ್ತರಣೆ; ಡಿಸೆಂಬರ್‌ 4ಕ್ಕೆ ವಿಚಾರಣೆ ಮುಂದೂಡಿಕೆ
Published on

ಅತಿಸುರಕ್ಷಿತ ನೋಂದಣಿ ಫಲಕಗಳನ್ನು (ಎಚ್‌ಎಸ್‌ಆರ್‌ಪಿ) ನಿರ್ದಿಷ್ಟ ಉತ್ಪಾದಕರು ಮಾತ್ರ ಪೂರೈಸಬೇಕು ಮತ್ತು ನಿರ್ದಿಷ್ಟ ಡೀಲರ್‌ಗಳು ಮಾತ್ರ ಅಳವಡಿಸಬೇಕು ಎಂಬುದಕ್ಕೆ ಆಕ್ಷೇಪಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಮುಂದೂಡಿದ್ದು, ಮಧ್ಯಂತರ ಆದೇಶವನ್ನು ಡಿಸೆಂಬರ್‌ 5ರವರೆಗೆ ವಿಸ್ತರಿಸಿದೆ.

ವಾಹನ ತಯಾರಿಸುವ ಮೂಲ ಸಾಧನಗಳ ಉತ್ಪಾದಕರು ಅನುಮತಿಸಿರುವ ಪರವಾನಗಿ ಹೊಂದಿರುವ ಅತಿಸುರಕ್ಷಿತ ನೋಂದಣಿ ಫಲಕ ಉತ್ಪಾದಕರು ಮಾತ್ರ ಎಚ್‌ಎಸ್‌ಆರ್‌ ಫಲಕಗಳನ್ನು ಹಳೆಯ ವಾಹನಗಳಿಗೆ ಪೂರೈಸಬೇಕು. ಈ ಫಲಕಗಳನ್ನು ವಾಹನ ಉತ್ಪಾದಕರು ಅನುಮತಿಸಿರುವ ಡೀಲರ್‌ಗಳು ಮಾತ್ರ ಅಳವಡಿಸಬೇಕು. ಹಳೆಯ ವಾಹನಗಳ ಮಾಲೀಕರು ಅಧಿಸೂಚನೆ ಹೊರಡಿಸಿರುವ ಮೂರು ತಿಂಗಳ ಒಳಗಾಗಿ ಎಚ್‌ಎಸ್‌ಆರ್‌ ಫಲಕ ಅಳವಡಿಸಬೇಕು ಎಂದು 17.08.2023ರಂದು ಸಾರಿಗೆ ಇಲಾಖೆ ಹೊರಡಿಸಿದ್ದ ಅಧಿಸೂಚನೆ ಮತ್ತು 18.08.2023ರಂದು ಸಾರಿಗೆ ಇಲಾಖೆ ಹೊರಡಿಸಿರುವ ಸುತ್ತೋಲೆಗೆ ತಡೆಯಾಜ್ಞೆ ವಿಧಿಸಲು ನಿರಾಕರಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಕಾಮೇಶ್ವರ ರಾವ್ ಮತ್ತು ಕೆ ರಾಜೇಶ್‌ ರೈ ಅವರ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

ಮೇಲ್ಮನವಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು “ಹಲವು ಅರ್ಜಿಗಳನ್ನು ಸಲ್ಲಿಕೆ ಮಾಡಿರುವುದರಿಂದ ಪೀಠಕ್ಕೆ ಅನುಕೂಲವಾಗುವ ರೀತಿಯಲ್ಲಿ ಸಮಗ್ರವಾದ ವರದಿ ನೀಡಲಾಗುವುದು. ಮುಂದಿನ ವಾರ ಯಾವುದೇ ದಿನ ವಿಚಾರಣೆ ನಡೆಸಬಹುದು. ರಾಜ್ಯ ಸರ್ಕಾರವು ಮಧ್ಯಂತರ ಆದೇಶ ಚಾಲ್ತಿಯಲ್ಲಿಟ್ಟು, ಏಕಸದಸ್ಯ ಪೀಠ ಪ್ರಕರಣ ನಿರ್ಧರಿಸಬಹುದು ಎಂದು ಅಡ್ವೊಕೇಟ್‌ ಜನರಲ್‌ ಸಲಹೆ ನೀಡಿರುವ ಕುರಿತಾಗಿಯೂ ವಕೀಲರು ತಮ್ಮ ಕಕ್ಷಿದಾರರಿಂದ ಸೂಚನೆ ಪಡೆಯಬೇಕಿದೆ” ಎಂದರು.

Also Read
ಎಚ್‌ಎಸ್‌ಆರ್‌ಪಿ ಅಳವಡಿಕೆ ಪ್ರಕರಣದ ವಿಚಾರಣೆ ನ.20ಕ್ಕೆ ಮುಂದೂಡಿದ ಹೈಕೋರ್ಟ್‌; ಸಾರಿಗೆ ಇಲಾಖೆ ನಿರ್ಧಾರದತ್ತ ಚಿತ್ತ

ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಏಕಸದಸ್ಯ ಪೀಠದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ಮಾಡಲಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಮಧ್ಯಂತರ ಆದೇಶ ಮುಂದುವರಿಯಲಿ. ಅದರ ಜೊತೆಗೆ ಏಕಸದಸ್ಯ ಪೀಠವು ಪ್ರಕರಣ ನಿರ್ಧರಿಸಲು ಆದೇಶಿಸಬಹುದು” ಎಂದು ಸಲಹೆ ನೀಡಿದರು.

ಇದಕ್ಕೆ ಸಮ್ಮತಿಸಿದ್ದ ಪೀಠವು ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಡಿಸೆಂಬರ್‌ 4ಕ್ಕೆ ಮುಂದೂಡಿತು.

Kannada Bar & Bench
kannada.barandbench.com