ಒಳ ಮೀಸಲಾತಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ಅಲೆಮಾರಿ, ಬುಡಕಟ್ಟು ಸಮುದಾಯಗಳು; ಸರ್ಕಾರಕ್ಕೆ ನೋಟಿಸ್‌

ಅಲೆಮಾರಿ, ಬುಡಕಟ್ಟು ಸಮುದಾಯಗಳನ್ನು ಕೆಟಗರಿ-ಎ ಎಂದು ಪ್ರತ್ಯೇಕವಾಗಿ ವರ್ಗೀಕರಿಸಿ ಶೇ.1ರಷ್ಟು ಮೀಸಲಾತಿ ನಿಗದಿಪಡಿಸಿದ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಒಪ್ಪಿಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಒಳ ಮೀಸಲಾತಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ಅಲೆಮಾರಿ, ಬುಡಕಟ್ಟು ಸಮುದಾಯಗಳು; ಸರ್ಕಾರಕ್ಕೆ ನೋಟಿಸ್‌
Published on

ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳ ವರ್ಗೀಕರಣ ಹಾಗೂ ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್ ನಾಗಮೋಹನ್ ದಾಸ್ ಆಯೋಗದ ವರದಿ ಆಧರಿಸಿ 2025ರ ಆಗಸ್ಟ್ 19ರಂದು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿರುವ ನಿರ್ಣಯ ಆಕ್ಷೇಪಿಸಿ ಈಗ ಅಲೆಮಾರಿ ಹಾಗೂ ಬುಡಕಟ್ಟು ಸಮುದಾಯಗಳು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿವೆ.

ಸಂಪುಟದ ನಿರ್ಣಯ ಪ್ರಶ್ನಿಸಿ ಕರ್ನಾಟಕ ರಾಜ್ಯ ಅಲೆಮಾರಿ ಬುಕಟ್ಟು ಮಹಾಸಭಾ, ಅಲೆಮಾರಿ ಸುಡುಗಾಡು ಸಿದ್ದ ಮಹಾಸಭಾ, ಅಖಿಲ ಕರ್ನಾಟಕ ಚೆನ್ನದಾಸರ (ಪರಿಶಿಷ್ಟ ಜಾತಿ) ಮಹಾಸಭಾ, ಕರ್ನಾಟಕ ರಾಜ್ಯ ಬುಡುಗಜಂಗಮ ಕ್ಷೇಮಾಭಿವೃದ್ಧಿ ಸಂಘ, ಸಿಂಧೋಳು ಸಮಾಜ ಕಲ್ಯಾಣ ಸಂಘ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಗುರುವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ರಾಜ್ಯ ಸರ್ಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗೆ ನೋಟಿಸ್ ಜಾರಿಗೊಳಿಸಿತು. ಇದೇ ವಿಷಯವಾಗಿ ಸಲ್ಲಿಕೆಯಾಗಿರುವ ಇನ್ನೂ ಹಲವು ಅರ್ಜಿಗಳ ವಿಚಾರಣೆಯನ್ನು ನವೆಂಬರ್ 13ಕ್ಕೆ ನಿಗದಿಪಡಿಸಲಾಗಿದ್ದು, ಅದೇ ದಿನ ಈ ಅರ್ಜಿಯನ್ನೂ ವಿಚಾರಣೆ ನಡೆಸುವುದಾಗಿ ಹೇಳಿದ ಪೀಠ ವಿಚಾರಣೆಯನ್ನು ಮುಂದೂಡಿತು.

Also Read
ಒಳ ಮೀಸಲಾತಿ ನಿರ್ಣಯಕ್ಕೆ ಆಕ್ಷೇಪ: ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ ಹೈಕೋರ್ಟ್‌

ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ತಿದ್ದುಪಡಿಯೊಂದಿಗೆ ಅಂಗೀಕರಿಸಿ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯ ರದ್ದುಪಡಿಸಬೇಕು. 101 ಪರಿಶಿಷ್ಟ ಜಾತಿಗಳಿಗೆ ನಿಗದಿಪಡಿಸಲಾಗಿರುವ ಶೇ.17ರಷ್ಟು ಮೀಸಲಾತಿಯಲ್ಲಿ ಅಲೆಮಾರಿ, ಬುಡಕಟ್ಟು ಸಮುದಾಯಗಳನ್ನು ಕೆಟಗರಿ-ಎ ಎಂದು ಪ್ರತ್ಯೇಕವಾಗಿ ವರ್ಗೀಕರಿಸಿ ಶೇ.1ರಷ್ಟು ಮೀಸಲಾತಿ ನಿಗದಿಪಡಿಸಿದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಒಪ್ಪಿಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com