370 ನೇ ವಿಧಿ ರದ್ದಾದ ಬಳಿಕ ಕಾಶ್ಮೀರದಲ್ಲಿ ಹೇರಲಾದ ಅಂತರ್ಜಾಲ ನಿರ್ಬಂಧ ಪ್ರಶ್ನಿಸಿ ಮೂರನೇ ಬಾರಿ ಸುಪ್ರೀಂಗೆ ಅರ್ಜಿ

ʼನಿಧಾನಗತಿಯ ಅಂತರ್ಜಾಲದ ನಿಧಾನಗತಿಯ ವೇಗದಿಂದಾಗಿ ವೈದ್ಯರಿಗೆ ಇತ್ತೀಚಿನ ಅಧ್ಯಯನ, ಪ್ರೋಟೊಕಾಲ್, ಕೈಪಿಡಿ ಹಾಗೂ ಸಲಹಾ ಪ್ರತಿಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಆಗುತ್ತಿಲ್ಲʼ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
370 ನೇ ವಿಧಿ ರದ್ದಾದ ಬಳಿಕ ಕಾಶ್ಮೀರದಲ್ಲಿ ಹೇರಲಾದ ಅಂತರ್ಜಾಲ ನಿರ್ಬಂಧ ಪ್ರಶ್ನಿಸಿ ಮೂರನೇ ಬಾರಿ ಸುಪ್ರೀಂಗೆ ಅರ್ಜಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲದ ವೇಗವನ್ನು 2ಜಿಗೆ ನಿರ್ಬಂಧಿಸುವ ಡಿಸೆಂಬರ್‌ 11ರ ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಿ ಅಲ್ಲಿನ ʼ3,800 ಖಾಸಗಿ ಶಾಲೆಗಳ ಸಂಘʼ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಸರ್ಕಾರದ ಆದೇಶದಿಂದಾಗಿ ಸಂವಿಧಾನದ 14, 19 ಮತ್ತು 21 ನೇ ವಿಧಿಯಡಿ ದೊರೆತಿರುವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

370 ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಹೇರಲಾದ ಅಂತರ್ಜಾಲ ನಿರ್ಬಂಧವನ್ನು ತೆರವುಗೊಳಿಸಬೇಕೆಂದು ಕೋರಿ 2019ರ ಆಗಸ್ಟ್‌ನಿಂದ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿರುವ ಮೂರನೇ ಅರ್ಜಿ ಇದಾಗಿದೆ. ನಿರ್ಬಂಧ ಪ್ರಶ್ನಿಸಿ 2019ರ ಆಗಸ್ಟ್ 10 ರಂದು ‘ಕಾಶ್ಮೀರ ಟೈಮ್ಸ್’ ಸಂಪಾದಕರಾದ ಅನುರಾಧಾ ಭಾಸಿನ್ ಅವರು ಮೊದಲ ಬಾರಿಗೆ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರು.

Also Read
ಕಾನೂನು ಮಾಹಿತಿಗಾಗಿ ಅಂತರ್ಜಾಲ ಬಳಕೆ: ಶಂಕಿತ ಮಾವೋವಾದಿಗೆ ಅವಕಾಶ ನೀಡಿದ ಕೇರಳ ನ್ಯಾಯಾಲಯ

2020ರ ಮಾರ್ಚ್‌ನಲ್ಲಿ ʼಫೌಂಡೇಷನ್‌ ಫಾರ್‌ ಮೀಡಿಯಾ ಪ್ರೊಫೆಷನಲ್ಸ್‌ʼ ಎಂಬ ಸರ್ಕಾರೇತರ ಸಂಘಟನೆ “ಅಂತರ್ಜಾಲ ನಿರ್ಬಂಧದಿಂದಾಗಿ ಜಮ್ಮು ಮತ್ತು ಕಾಶ್ಮೀರದ ರೋಗಿಗಳು, ವೈದ್ಯರು, ಸಾರ್ವಜನಿಕರು ಕೋವಿಡ್‌- 19 ಕುರಿತ ತಾಜಾ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ” ಎಂದು ಅಳಲು ತೋಡಿಕೊಂಡಿತ್ತು. ಅಲ್ಲದೆ ಮೇ 11ರಂದು ಸುಪ್ರೀಂ ನೀಡಿದ್ದ ತೀರ್ಪನ್ನು ಪಾಲಿಸದೇ ನ್ಯಾಯಾಂಗ ನಿಂದನೆ ಮಾಡಲಾಗಿದೆ ಎಂದು ನಂತರ ಅರ್ಜಿ ಸಲ್ಲಿಸಿತ್ತು. ಒಂದು ಜಿಲ್ಲೆಯಲ್ಲಿ ನಿರ್ಬಂಧ ಸಡಿಲಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದ ಬಳಿಕ ಅರ್ಜಿಯನ್ನು ವಿಲೇವಾರಿ ಮಾಡಲಾಗಿತ್ತು.

ಪ್ರಸ್ತುತ ಅರ್ಜಿಯ ಪ್ರಮುಖಾಂಶಗಳು...

  • ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹಾಗೂ ವೈದ್ಯಕೀಯ ವೃತ್ತಿಪರರ ಹಿತಾಸಕ್ತಿಗಳಿಗೆ ತೊಂದರೆಯಾಗಿದೆ.

  • ನಿಧಾನಗತಿಯ ಅಂತರ್ಜಾಲ ಸೇವೆಗಳಿಂದಾಗಿ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.

  • ಸೋಂಕಿನ ತಾಣಗಳಾಗಿರುವ ಆಸ್ಪತ್ರೆಗಳಲ್ಲಿ ಇರುವಂತೆ ಜಮ್ಮು ಮತ್ತು ಕಾಶ್ಮೀರದ ರೋಗಿಗಳಿಗೆ ಒತ್ತಾಯಿಸಲಾಗುತ್ತಿದೆ. ನಿರ್ಬಂಧದಿಂದಾಗಿ ಟೆಲಿ ಮೆಡಿಸನ್‌ ಪಡೆಯಲಾಗದ ಅವರು ಕೋವಿಡ್‌ ರೀತಿಯ ಸಾಂಕ್ರಾಮಿಕಗಳಿಗೆ ತುತ್ತಾಗಬಹುದು.

  • ನಿರ್ಬಂಧದಿಂದಾಗಿ ಆರರಿಂದ ಹದಿನಾಲ್ಕು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವ ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸಿದಂತಾಗಿದೆ.

ಆದರೆ ರಾಜ್ಯದಲ್ಲಿರುವ ಬಂಡುಕೋರರು ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಈ ಹಿಂದಿನ ವಿಚಾರಣೆಯೊಂದರಲ್ಲಿ ಕೇಂದ್ರ ಸರ್ಕಾರ ಉಲ್ಲೇಖಿಸಿತ್ತು. ಹೀಗಾಗಿ ಅಂತರ್ಜಾಲ ನಿರ್ಬಂಧ ಹೇರುತ್ತಿರುವುದಾಗಿ ಸಮರ್ಥಿಸಿಕೊಂಡಿತ್ತು.

Related Stories

No stories found.
Kannada Bar & Bench
kannada.barandbench.com