ಆರೋಪಿಯ ಮಾನಸಿಕ ಸ್ಥಿತಿ ಬಗ್ಗೆ ಯಾವುದೇ ಸಂದೇಹ ಇದ್ದಲ್ಲಿ ಆತನನ್ನು ಬಂಧಿಸಿದ ಕೂಡಲೇ ಮನೋವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು ತನಿಖಾಧಿಕಾರಿಯ ಕರ್ತವ್ಯ ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ.
ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಅರಿವಿಗೆ ಬರುತ್ತಿದ್ದಂತೆಯೇ ಆತನನ್ನು ಮನೋವಿಶ್ಲೇಷಣೆಗೆ ಒಳಪಡಿಸುವುದು ತನಿಖಾಧಿಕಾರಿಯ ಕರ್ತವ್ಯ ಎಂಬುದಾಗಿ ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಮಿಲಿಂದ್ ಜಾಧವ್ ಅವರಿದ್ದ ಪೀಠ ತಿಳಿಸಿತು.
“…ಮೇಲ್ಮನವಿದಾರನನ್ನು ಬಂಧಿಸಿದ ಬಳಿಕ ಆತ ಬುದ್ಧಿಮಾಂದ್ಯ ಎಂಬುದು ಅರಿವಾದರೆ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆ ಪರೀಕ್ಷೆಯ ದಾಖಲೆಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವುದು ತನಿಖಾಧಿಕಾರಿಯ ಕಾನೂನುಬದ್ಧ ಕರ್ತವ್ಯ” ಎಂದು ನ್ಯಾಯಾಲಯ ಹೇಳಿದೆ.
“ಮೇಲ್ಮನವಿದಾರ 2011ರಲ್ಲಿ ಕಬ್ಬಿಣದ ರಾಡ್‌ನಿಂದ ಪಾದಚಾರಿ ಮೇಲೆ ಹಲ್ಲೆ ಮಾಡಿದ್ದ ಪರಿಣಾಮ ಪಾದಚಾರಿ ಸಾವನ್ನಪ್ಪಿದ್ದ ಎಂಬುದು ಪ್ರಾಸಿಕ್ಯೂಷನ್ ಆರೋಪವಾಗಿತ್ತು. ಸಾಕ್ಷಿಗಳ ಹೇಳಿಕೆ ಪ್ರಕಾರ ಮೇಲ್ಮನವಿದಾರ ಮಾನಸಿಕ ಅಸ್ವಸ್ಥನಾಗಿದ್ದು ಆತನನ್ನು ಬಂಧಿಸಿದ ಪೊಲೀಸ್ ಅಧಿಕಾರಿಗೆ ಆ ಬಗ್ಗೆ ಸ್ಪಷ್ಟ ಜ್ಞಾನವಿತ್ತು” ಎಂಬ ವಿಚಾರವನ್ನು ನ್ಯಾಯಾಲಯ ಗಮನಿಸಿತು.
ಆರೋಪಿಯನ್ನು 2011ರಲ್ಲಿಯೇ ಬಂಧಿಸಲಾಗಿದ್ದರೂ 2014ರಲ್ಲಿ ಆತನನ್ನು ಮನೋವಿಶ್ಲೇಷಣೆಗೆ ಒಳಪಡಿಸಲಾಗಿದೆ. ತಕ್ಷಣವೇ ಆತನ ಮಾನಸಿಕ ಸ್ಥಿತಿಯ ಬಗ್ಗೆ ಪರೀಕ್ಷೆಗೆ ಒಳಪಡಿಸುವುದು ಪೊಲೀಸ್ ಅಧಿಕಾರಿಯ ಕರ್ತವ್ಯವಾಗಿದ್ದರೂ ಅವರು ಹಾಗೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿತು. ಅರ್ಜಿದಾರನನ್ನು ಬಂಧಿಸಿದ ಕೂಡಲೇ ವಿಶ್ಲೇಷಣೆಗೆ ಒಳಪಡಿಸಿದ್ದರೆ ಆತನ ಮಾನಸಿಕ ಸ್ಥಿತಿ ಬಗ್ಗೆ ತಿಳಿಯುತ್ತಿತ್ತು ಎಂದು ಅಭಿಪ್ರಾಯಪಟ್ಟಿತು.
ಮೇಲ್ಮನವಿದಾರನನ್ನು ಪರೀಕ್ಷೆಗೊಳಪಡಿಸಲು ತನಿಖಾಧಿಕಾರಿ ವಿಫಲವಾಗಿರುವುದು ಪ್ರಾಸಿಕ್ಯೂಷನ್ ಕಡೆಯ ಗಂಭೀರ ದೌರ್ಬಲ್ಯ ಎಂದ ನ್ಯಾಯಾಲಯ ಮೇಲ್ಮನವಿದಾರನ ವಿರುದ್ಧ ಮಾಡಲಾಗಿದ್ದ ಎಲ್ಲಾ ಆರೋಪಗಳಿಂದ ಆತನನ್ನು ಖುಲಾಸೆಗೊಳಿಸಿತು.
ಅಲ್ಲದೆ ಮೇಲ್ಮನವಿದಾರನನ್ನು ಮನೋವಿಶ್ಲೇಷಣೆಗೆ ಒಳಪಡಿಸುವಂತೆ ಆದೇಶಿಸಿದ ಪೀಠ ವರದಿ ಸಾಮಾನ್ಯವಾಗಿದ್ದರೆ ಆತನನ್ನು ಕೂಡಲೇ ಬಿಡುಗಡೆ ಮಾಡಬೇಕು. ಆತ ಮಾನಸಿಕ ಸಮಸ್ಯೆ ಎದುರಿಸುತ್ತಿರುವುದು ವರದಿಯಿಂದ ದೃಢಪಟ್ಟರೆ ಕೂಡಲೇ ಜೈಲು ಅಧಿಕಾರಿಗಳು ಆತನಿಗೆ ಪುಣೆಯ ಮಾನಸಿಕ ಆರೋಗ್ಯ ಸಂಸ್ಥೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಸೂಚಿಸಿತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: