ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೇ ಇದ್ದರೂ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಮಾದಕವಸ್ತು ಪ್ರಕರಣದಲ್ಲಿ ಸಿಲುಕಿಸಲು ತನಿಖಾಧಿಕಾರಿ ಯತ್ನಿಸಿದ್ದರು ಎಂದು ಎನ್‌ಸಿಬಿಯ ವಿಶೇಷ ತನಿಖಾ ತಂಡ ಮುಂಬೈ ನ್ಯಾಯಾಲಯಕ್ಕೆ ಶುಕ್ರವಾರ ತಿಳಿಸಿದೆ.
ಸಾಕ್ಷ್ಯಾಧಾರಗಳ ಕೊರತೆ ಇರುವುದರಿಂದ ತಾನು ಆರ್ಯನ್ ಖಾನ್ ವಿರುದ್ಧ ದೂರು ದಾಖಲಿಸುವುದಿಲ್ಲ ಎಂದು ಕೂಡ ಅದು ಹೇಳಿತು. ಪ್ರಕರಣದಲ್ಲಿ 14 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವ ಎಸ್‌ಐಟಿ ಆರ್ಯನ್ ಸೇರಿ 6 ಮಂದಿಗೆ ಕ್ಲೀನ್‌ಚಿಟ್ ನೀಡಿದೆ. ಆರ್ಯನ್ ವಿರುದ್ಧ ತನಿಖೆ ನಡೆಸದೇ ಇರಲು ಎಸ್‌ಐಟಿ ನೀಡಿದ ಐದು ಕಾರಣಗಳು ಹೀಗಿವೆ:
ಮಾದಕವಸ್ತು ವಶಪಡಿಸಿಕೊಂಡಿಲ್ಲ, ತನಿಖೆ ಪ್ರಚೋದಿತ
ಆರ್ಯನ್ ಮಾದಕ ವಸ್ತು ಹೊಂದಿದ್ದ ಬಗ್ಗೆ (ಪ್ರಕರಣದ ಮತ್ತೊಬ್ಬ ಆರೋಪಿ) ಅರ್ಬಾಜ್ ಸ್ಪಷ್ಟವಾಗಿ ನಿರಾಕರಿಸಿದ್ದರೂ ತನಿಖಾಧಿಕಾರಿಯು ಅವರ ಮೊಬೈಲ್ ಫೋನನ್ನು ಅಧಿಕೃತವಾಗಿ ಜಪ್ತಿ ಮಾಡದೆ ವಾಟ್ಸಾಪ್ ಸಂಭಾಷಣೆ ನೋಡಲಾರಂಭಿಸಿದರು. ಇದರಿಂದ ಹೇಗಾದರೂ ಮಾಡಿ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಅವರನ್ನು ಸಿಲುಕಿಸಲು ತನಿಖಾಧಿಕಾರಿ ಮುಂದಾದಂತಿದೆ ಎಂದು ಆರೋಪಪಟ್ಟಿ ತಿಳಿಸಿದೆ.
ವಾಟ್ಸಾಪ್ ಸಂಭಾಷಣೆ ಅವಲಂಬಿಸಿದ್ದು ಸರಿಯಲ್ಲ
ವಾಟ್ಸಾಪ್ ಸಂಭಾಷಣೆಯನ್ನು ಪ್ರಾಥಮಿಕ ಮೂಲವಾಗಿ ಆಶ್ರಯಿಸಿ ಸಾಕ್ಷಿಗಳು ಮತ್ತು ಆರೋಪಿಗಳ ವಿರುದ್ಧ ತನಿಖೆ ನಡೆಸಲಾಯಿತು. ಸುಪ್ರೀಂ ಕೋರ್ಟ್ ವಾಟ್ಸಾಪ್ ಸಂದೇಶಗಳ ಸಾಕ್ಷ್ಯಮೌಲ್ಯವನ್ನು ಆಗಾಗ ಪ್ರಶ್ನಿಸುತ್ತಲೇ ಬಂದಿದೆ. ವಾಟ್ಸಾಪ್ ಸಂದೇಶಗಳ ಮೇಲೆ ನಮ್ಮ ಅತಿಯಾದ ಅವಲಂಬನೆ ಪ್ರಕರಣದ ತನಿಖೆಗೆ ತೀವ್ರ ರೀತಿಯಲ್ಲಿ ಪ್ರತಿಕೂಲವಾಯಿತು.
ಆರ್ಯನ್ ಮೊಬೈಲ್ ಫೋನನ್ನು ಅಧಿಕೃತವಾಗಿ ವಶಕ್ಕೆ ಪಡೆದಿರಲಿಲ್ಲ
ಆರ್ಯನ್ ಅವರು ಖುದ್ದಾಗಿ ತಮ್ಮ ಮೊಬೈಲ್ ಫೋನನ್ನು ತನಿಖಾಧಿಕಾರಿಗೆ ಹಸ್ತಾಂತರಿಸಿದ್ದು, ಕಾನೂನಿನ ಪ್ರಕಾರ ಅದನ್ನು ಜಪ್ತಿ ಮಾಡಿಲ್ಲ. ಆರ್ಯನ್ ಫೋನನ್ನು ಹೇಗೆ ಮತ್ತು ಯಾವಾಗ ವಶಪಡಿಸಿಕೊಳ್ಳಲಾಯಿತು ಎಂಬುದನ್ನು ಸಾಬೀತು ಪಡಿಸುವ ʼಸೀಜ್ಯೂರ್ ಮೆಮೊʼ ಇಲ್ಲದಿರುವುದರಿಂದ ಆರ್ಯನ್ ಫೋನ್‌ನಿಂದ ತೆಗೆಯಲಾದ ದತ್ತಾಂಶ ಪ್ರಶ್ನಾರ್ಹವಾಗಿದೆ.
ಆರ್ಯನ್ ಮತ್ತು ಪ್ರಕರಣಕ್ಕೆ ನಂಟಿರುವ ಸಂಭಾಷಣೆ ಪತ್ತೆಯಾಗಿಲ್ಲ
ಮೊಬೈಲ್ ಫೋನ್‌ನಿಂದ ತನಿಖಾಧಿಕಾರಿಗಳು ಪಡೆದ ಸಂಭಾಷಣೆಗಳ ವಿವರದಲ್ಲಿ ಆರ್ಯನ್ ಮತ್ತು ಪ್ರಕರಣಕ್ಕೆ ನಂಟಿರುವುದು ಪತ್ತೆಯಾಗಿಲ್ಲ.
ಸಾಕ್ಷ್ಯಗಳಿಲ್ಲ
ಪಿತೂರಿಯಲ್ಲಿ ಆರ್ಯನ್ ಖಾನ್ ಪಾತ್ರ ಅಥವಾ ಅವರು ಭಾಗಿಯಾಗಿರುವುದನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ. ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದಾಗ ಮತ್ತು ಆರೋಪಿಗಳ ಬಳಿ ಮಾದಕವಸ್ತು ದೊರೆಯದಿದ್ದಾಗ ನ್ಯಾಯಾಲಯಗಳು ಉದಾರವಾಗುತ್ತವೆ ಎಂದು ಎಸ್‌ಐಟಿ ಹೇಳಿದೆ. ಅಲ್ಲದೆ, ಖಾಲಿ ಇದ್ದ ಪಂಚನಾಮೆ ದಾಖಲೆಗೆ ಸಹಿ ಹಾಕಿಸಿಕೊಳ್ಳಲಾಗಿದೆ ಎಂದು ಹೇಳಿದ್ದ ಪ್ರಕರಣದ ಸ್ವತಂತ್ರ ಸಾಕ್ಷಿ ಕೆ ಪಿ ಗೋಸಾವಿ ಅವರ ಅಂಗರಕ್ಷಕ (ಮೃತ) ಪ್ರಭಾಕರ ಸೈಲ್ ಅವರ ಅಫಿಡವಿಟನ್ನು ಕೂಡ ಎಸ್‌ಐಟಿ ಗಣನೆಗೆ ತೆಗೆದುಕೊಂಡಿದೆ.
ಶುಕ್ರವಾರ ನ್ಯಾಯಾಲಯದ ರಿಜಿಸ್ಟ್ರಿಗೆ ಆರೋಪಪಟ್ಟಿ ಸಲ್ಲಿಸಲಾಗಿದೆ. ವಿಶೇಷ ನ್ಯಾಯಾಲಯ ಈ ಕುರಿತು ಮುಂದಿನವಾರ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.