ಡಿಕೆಶಿ ವಿರುದ್ಧದ ತನಿಖೆ ವಿಳಂಬವಾಗಿಲ್ಲ; 596 ದಾಖಲೆ ಸಂಗ್ರಹ, 84 ಸಾಕ್ಷಿಗಳ ಪರಿಶೀಲನೆ: ಸಿಬಿಐ ವಕೀಲರ ಸಮರ್ಥನೆ

ಡಿಕೆಶಿ ವಿರುದ್ಧ 2020ರ ಅ.3ಕ್ಕೆ ಎಫ್‌ಐಆರ್‌ ದಾಖಲಾಗಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ಸಾಧ್ಯವಿಲ್ಲ ಎಂದು ತಿಳಿದು ಡಿಕೆಶಿ ಎಫ್‌ಐಆರ್‌ ವಜಾ ಕೋರಿ 2022ರ ಜುಲೈ 28ರಂದು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ ಎಂದ ಎಸ್‌ಪಿಪಿ.
D K Shivakumar, CBI and Karnataka HC
D K Shivakumar, CBI and Karnataka HC
Published on

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ವಿರುದ್ದದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯು ಯಾವುದೇ ರೀತಿಯಲ್ಲೂ ವಿಳಂಬವಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಗುರುವಾರ ಬಲವಾಗಿ ಸಮರ್ಥಿಸಿದ ಕೇಂದ್ರೀಯ ತನಿಖಾ ದಳದ (ಸಿಬಿಐ) ವಕೀಲರು “ಇದುವರೆಗೆ ಸ್ವತಂತ್ರವಾಗಿ 596 ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, 84 ಸಾಕ್ಷಿಗಳನ್ನು ಪರಿಶೀಲಿಸಲಾಗಿದೆ” ಎಂದು ವಿವರಿಸಿದರು.

ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ ಕೆ ಶಿವಕುಮಾರ್ ವಿರುದ್ಧದ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿರುವ ಎಫ್‌ಐಆರ್‌ ವಜಾ ಮಾಡುವಂತೆ ಕೋರಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದೂ ಮುಂದುವರಿಸಿತು.

ವಾದ ಮುಂದುವರಿಸಿದ ಸಿಬಿಐ ಪ್ರತಿನಿಧಿಸಿರುವ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು “ತನಿಖಾ ಸಂಸ್ಥೆಯು ಸ್ವತಂತ್ರವಾಗಿ 596 ದಾಖಲೆಗಳನ್ನು ಸಂಗ್ರಹಿಸಿದೆ. 84 ಸಾಕ್ಷಿಗಳನ್ನು ಪರಿಶೀಲಿಸಲಾಗಿದೆ. ಇಲ್ಲಿ ಯಾವುದೇ ರೀತಿಯಲ್ಲೂ ತನಿಖೆ ವಿಳಂಬವಾಗಿಲ್ಲ. 2020ರ ಅಕ್ಟೋಬರ್‌ 3ಕ್ಕೆ ಎಫ್‌ಐಆರ್‌ ದಾಖಲಾಗಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ಸಾಧ್ಯವಿಲ್ಲ ಎಂದು ತಿಳಿದು ಡಿ ಕೆ ಶಿವಕುಮಾರ್‌ ಅವರು ಎಫ್‌ಐಆರ್‌ ವಜಾ ಕೋರಿ 2022ರ ಜುಲೈ 28ರಂದು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ” ಎಂದು ತಿರುಗೇಟು ನೀಡಿದರು.

P Prasanna Kumar, SPP for CBI
P Prasanna Kumar, SPP for CBI

ಕಾನೂನಿನ ಅನ್ವಯ ತನಿಖೆ ನಡೆದಿಲ್ಲ ಎಂಬ ಅರ್ಜಿದಾರರ ವಾದವನ್ನು ಬಲವಾಗಿ ಅಲ್ಲಗಳೆದ ಸಿಬಿಐ ವಕೀಲರು, “ಪೊಲೀಸ್‌ ವರಿಷ್ಠಾಧಿಕಾರಿಯು ಪ್ರಕರಣದ ತನಿಖೆ ನಡೆಸಲು ಅನುಮತಿಸಬೇಕು. ಅದೇ ರೀತಿ ಸಿಬಿಐ ಪೊಲೀಸ್‌ ವರಿಷ್ಠಾಧಿಕಾರಿಯು ಡಿವೈಎಸ್‌ಪಿ ಅವರಿಗೆ ತನಿಖೆ ನಡೆಸಲು ಅನುಮತಿಸಿದ್ದಾರೆ. ಆದ್ದರಿಂದ, ಇಲ್ಲಿ ಯಾವುದೇ ಅಕ್ರಮವಾಗಿಲ್ಲ” ಎಂದು ಸಮರ್ಥನೆ ನೀಡಿದರು.

“ಡಿ ಕೆ ಶಿವಕುಮಾರ್‌ ಅವರ ಚುನಾವಣಾ ಅಫಿಡವಿಟ್‌ ಮತ್ತು ಎಫ್‌ಐಆರ್‌ನಲ್ಲಿನ ಆಸ್ತಿ ಮೌಲ್ಯದಲ್ಲಿ ವ್ಯತ್ಯಾಸವಿದೆ ಎಂದು ಆಕ್ಷೇಪಿಸಲಾಗಿದೆ. ಆದರೆ, ಸಿಬಿಐ ಇಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿನ ಲುಲ್ಲು ಮಾಲ್‌ನಲ್ಲಿ ಡಿ ಕೆ ಶಿವಕುಮಾರ್‌ ಅವರ ಶೇ. 21ರಷ್ಟು ಷೇರು ಮಾತ್ರ ಅಂದರೆ 7.8 ಕೋಟಿ ರೂಪಾಯಿಯನ್ನು ಪರಿಗಣಿಸಲಾಗಿದೆ. ಇಲ್ಲಿ ಭೂಮಿಯ ಮೌಲ್ಯವನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಉಳಿದ ವಿಚಾರದ ಕುರಿತು ತನಿಖೆ ನಡೆಯುತ್ತಿದೆ” ಎಂದು ವಿವರಿಸಿದರು.

“ಡಿ ಕೆ ಶಿವಕುಮಾರ್‌ ಅವರ ಪತ್ನಿಯ ಬಳಿ 17.33 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇತ್ತು. ಈಗ ಅದು 42.05 ಕೋಟಿ ರೂಪಾಯಿ ಮೌಲ್ಯ ಹೊಂದಿದ್ದು, ಅದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಶಿವಕುಮಾರ್‌ ಅವರ ಮಕ್ಕಳ ಬಳಿ 61.75 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಇತ್ತು, ಈಗ ಅದು 75 ಕೋಟಿ ರೂಪಾಯಿ ಮೌಲ್ಯ ಹೊಂದಿದೆ. ಇದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ” ಎಂದು ವಿವರಿಸಿದರು.

ಮುಂದುವರಿದು, ಅರ್ಜಿದಾರರು ಎಫ್‌ಐಆರ್‌ ದಾಖಲಿಸುವುದಕ್ಕೂ ಮುನ್ನ ವಿವರಣೆ ನೀಡಲು ಅವಕಾಶ ಕಲ್ಪಿಸಲಾಗಿಲ್ಲ ಎಂದು ವಾದಿಸಿದ್ದಾರೆ. “ಎಫ್‌ಐಆರ್‌ ದಾಖಲಿಸುವುದಕ್ಕೂ ಮುನ್ನ ವಿವರಣೆ ನೀಡಲು ಅವಕಾಶ ನೀಡಲಾಗದು. ಆದರೆ, ಎಫ್‌ಐಆರ್‌ ದಾಖಲಿಸಿದ ಬಳಿಕ ಡಿ ಕೆ ಶಿವಕುಮಾರ್‌ ಅವರಿಗೆ ವಿವರಣೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಆಗ ಅವರು ಒಂದಷ್ಟು ದಾಖಲೆ ನೀಡಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ” ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಎಸ್‌ಪಿಪಿ ಪ್ರಸನ್ನಕುಮಾರ್‌ ಅವರು ಸಿಬಿಐ ತನಿಖೆಯ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿದರು. ಅದರಲ್ಲಿನ ಮಾಹಿತಿ ಬಹಿರಂಗಪಡಿಸಲು ಮುಂದಾದ ಪ್ರಸನ್ನಕುಮಾರ್‌ ಅವರನ್ನು ಪೀಠವು ತಡೆಯಿತು. ಅಂತಿಮವಾಗಿ ಪ್ರಸನ್ನಕುಮಾರ್‌ ಅವರು ವಾದ ಪೂರ್ಣಗೊಳಿಸಿದರು.

ಡಿ ಕೆ ಶಿವಕುಮಾರ್‌ ಪರ ವಕೀಲರಿಗೆ ಪ್ರತಿಕ್ರಿಯಿಸಲು ನ್ಯಾಯಾಲಯವು ಅವಕಾಶ ಕಲ್ಪಿಸಿ ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com