ಸರ್ಕಾರಿ ಅಧಿಕಾರಿಗಳ ವಿರುದ್ದದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಖಾಸಗಿ ದೂರು ಆಧರಿಸಿ ಎಫ್‌ಐಆರ್ ದಾಖಲಿಸಲು ಆದೇಶಿಸುವುದಕ್ಕೂ ಮುನ್ನ ಗಮನಿಸಬೇಕಾದ ಪ್ರಮುಖ ಅಂಶದ ಬಗ್ಗೆ ವಿಚಾರಣಾಧೀನ ನ್ಯಾಯಾಲಯಗಳಿಗೆ ಈಚೆಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದಿದ್ದರೂ ಭ್ರಷ್ಟಾಚಾರ ಆರೋಪ ಸಂಬಂಧ ತಮ್ಮ ವಿರುದ್ಧದ ಖಾಸಗಿ ದೂರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನಿಖೆಗೆ ಆದೇಶಿಸಿದ್ದ ಚಿಕ್ಕಬಳ್ಳಾಪುರ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶ ರದ್ದುಕೋರಿ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಯಾಗಿದ್ದ ಡಾ.ವಿ ಅಶೋಕ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಇದೇ ವೇಳೆ, ರಾಜ್ಯದ ಎಲ್ಲ ಮ್ಯಾಜಿಸ್ಟ್ರೇಟ್/ಸತ್ರ ನ್ಯಾಯಾಧೀಶರಿಗೆ ಮೂರು ನಿರ್ದೇಶನಗಳನ್ನು ನೀಡಿದೆ.
“ಕರ್ನಾಟಕ ಲೋಕಾಯುಕ್ತದ ಮುಂದೆ ದೂರು ದಾಖಲಿಸಲು ದೂರುದಾರರು ನಡೆಸಿರುವ ಪ್ರಯತ್ನಗಳು ಆ ಸಂಬಂಧ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದಿರುವುದನ್ನು ದೂರಿನಲ್ಲಿ ಉಲ್ಲೇಖಿಸಬೇಕು. ದೂರಿನಲ್ಲಿ ಬರೀ ಹೇಳಿಕೆ ಉಲ್ಲೇಖ ಮಾಡಿದರೆ ಸಾಲುವುದಿಲ್ಲ. ಆದರೆ, ಅದಕ್ಕೆ ಪೂರಕವಾಗಿ ಖಾಸಗಿ ದೂರಿನ ಜೊತೆ ಸಾಕ್ಷಿಗೆ ಬೇಕಾಗುವ ದಾಖಲೆಗಳನ್ನು ಸೇರ್ಪಡೆ ಮಾಡಬೇಕು” ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೇ, “ಎಫ್‌ಐಆರ್ ದಾಖಲಿಸುವುದಕ್ಕೂ ಮುನ್ನ ತನಿಖಾ ಸಂಸ್ಥೆಯು ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್ 17ಎ ಅಡಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವ ರೀತಿಯಲ್ಲಿಯೇ ಖಾಸಗಿ ದೂರಿನಲ್ಲಿ ಸಕ್ಷಮ ಪ್ರಾಧಿಕಾರವು ಪೂರ್ವಾನುಮತಿ ನೀಡಿರುವುದಕ್ಕೆ ದಾಖಲೆ ಒದಗಿಸಬೇಕು. ಸಿಆರ್‌ಪಿಸಿ ಸೆಕ್ಷನ್ 156(3)ರ ಅಡಿ ಸಂಬಂಧಿತ ನ್ಯಾಯಾಲಯವು ತನಿಖೆಗೆ ಆದೇಶಿಸುವುದಕ್ಕೆ ಇದು ಪೂರ್ವ ಅಗತ್ಯವಾಗಿದೆ” ಎಂದು ಹೇಳಲಾಗಿದೆ.
ಅಂತಿಮವಾಗಿ, “ಆರೋಪಿತ ಅಪರಾಧವು ಭ್ರಷ್ಟಾಚಾರ ನಿಷೇಧ (ಪಿಸಿ) ಕಾಯಿದೆ ಅಥವಾ ಪಿಸಿ ಕಾಯಿದೆ ಹಾಗೂ ಐಪಿಸಿ ಸೆಕ್ಷನ್‌ಗಳ ಅಪರಾಧಕ್ಕೆ ಇದು ಅನ್ವಯಿಸುತ್ತದೆ. ಈ ನಿರ್ದೇಶನವು ಕೇವಲ ಐಪಿಸಿ ಅಪರಾಧವಾದರೆ ಅನ್ವಯಿಸುವುದಿಲ್ಲ” ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
“ಅತ್ಯಂತ ಗಂಭೀರವಾಗಿ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸೆಕ್ಷನ್ 17ಎ (ಪ್ರಕರಣ ದಾಖಲಿಸಲು ಒಪ್ಪಿಗೆ ಮತ್ತು ತನಿಖೆಗೆ ಕಡ್ಡಾಯ ಅನುಮತಿ) ಅನ್ವಯಿಸಬೇಕು. ಇಲ್ಲವಾದಲ್ಲಿ ಬಹುತೇಕ ಸಂದರ್ಭದಲ್ಲಿ ಇದು ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಾಸಿಕ್ಯೂಷನ್‌ಗೆ ನಾಂದಿ ಹಾಡಲಿದೆ. ಇದನ್ನು ದೋಷಿಗಳಿಗೆ ರಕ್ಷಣೆ ಎಂದು ಪರಿಗಣಿಸಬಾರದು. ಬದಲಿಗೆ ಮುಗ್ಧರಿಗೆ ರಕ್ಷಣೆ ಎಂದು ತಿಳಿಯಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಹಾಲಿ ಪ್ರಕರಣದಲ್ಲಿ ಸಿಆರ್‌ಪಿಸಿ ಸೆಕ್ಷನ್ 200ರ ಅಡಿ ಖಾಸಗಿ ದೂರು ದಾಖಲಿಸಲಾಗಿದೆ. ತನಿಖಾ ಸಂಸ್ಥೆಯ ಪೊಲೀಸ್ ವಿಭಾಗದಲ್ಲಿ ದೂರು ದಾಖಲಿಸಿಲ್ಲ. ಆದರೆ, ಸಂಬಂಧಿತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು, ಆ ನ್ಯಾಯಾಲಯವು ತನಿಖೆಗೆ ಆದೇಶಿಸಿರುವುದರಿಂದ ಎಫ್‌ಐಆರ್ ದಾಖಲಾಗಿದೆ. ಭ್ರಷ್ಟಾಚಾರ ನಿಷೇಧ ಕಾಯಿದೆ ಮತ್ತು ಐಪಿಸಿ ಸೆಕ್ಷನ್‌ಗಳ ಎರಡರ ಅಡಿ ಅಪರಾಧಗಳನ್ನು ಆರೋಪಿಸಲಾಗಿದೆ. ಇಂಥ ಹಲವು ಪ್ರಕರಣಗಳು ಈ ನ್ಯಾಯಾಲಯದ ಮುಂದೆ ಬಂದಿದ್ದು, ಖಾಸಗಿ ದೂರು ದಾಖಲಿಸುವುದಕ್ಕೂ ಮುನ್ನ ದೂರುದಾರರು ತನಿಖಾ ಸಂಸ್ಥೆಯಾದ ಲೋಕಾಯುಕ್ತವನ್ನು ಸಂಪರ್ಕಿಸುವುದಿಲ್ಲ. ಬದಲಿಗೆ ಮ್ಯಾಜಿಸ್ಟ್ರೇಟ್ ಅಥವಾ ಸತ್ರ ನ್ಯಾಯಾಧೀಶರ ಮುಂದೆ ಹೋಗುತ್ತಾರೆ. ಆಗ ಮ್ಯಾಜಿಸ್ಟ್ರೇಟ್/ಸತ್ರ ನ್ಯಾಯಾಧೀಶರು ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ತನಿಖೆಗೆ ಆದೇಶಿಸುತ್ತಾರೆ.
ಹೀಗೆ ಒಮ್ಮೆ ಪೊಲೀಸ್/ಲೋಕಾಯುಕ್ತ ತನಿಖೆಗೆ ನ್ಯಾಯಾಲಯವು ಆದೇಶಿಸಿದ ಮೇಲೆ ಅವರು ದೂರು ದಾಖಲಿಸದೇ ಬೇರೆ ದಾರಿ ಇರುವುದಿಲ್ಲ. ಆಗ ಸಾರ್ವಜನಿಕ ಸೇವಕರ ವಿರುದ್ಧದ ದುರುದ್ದೇಶಪೂರಿತ, ಸುಳ್ಳು ದೂರುಗಳನ್ನು ಕೈಬಿಡಲು ಸಂಸತ್ ಭ್ರಷ್ಟಾಚಾರ ನಿಷೇಧ ಕಾಯಿದೆಗೆ 2018ರಲ್ಲಿ ಸೆಕ್ಷನ್ 17ಎಗೆ ತಂದಿರುವ ತಿದ್ದುಪಡಿ ವ್ಯರ್ಥವಾಗುತ್ತದೆ. ಹೀಗಾಗಿ, ಪೂರ್ವಾನುಮತಿ ಇಲ್ಲದ ಅಂಥ ಖಾಸಗಿ ದೂರಗಳನ್ನು ತನಿಖೆಗೆ ಆದೇಶಿಸುವುದನ್ನು ಮ್ಯಾಜಿಸ್ಟ್ರೇಟ್/ಸತ್ರ ನ್ಯಾಯಾಧೀಶರು ಪುರಸ್ಕರಿಸಬಾರದು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
“ಹಾಲಿ ಪ್ರಕರಣದಲ್ಲಿ ಆಗಿರುವಂತೆ ದೂರುದಾರರ (ಪ್ರತಿವಾದಿ) ಮನವಿಯನ್ನು ಪುರಸ್ಕರಿಸಿದರೆ ಕ್ಷುಲ್ಲಕ ಮತ್ತು ಆರೋಪಗಳ ಸರಮಾಲೆಗೆ ಬಾಗಿಲು ತೆರೆದಂತಾಗಲಿದೆ” ಎಂದು ನ್ಯಾಯಾಲಯವು ಎಚ್ಚರಿಸಿದೆ.
ಪ್ರಕರಣದ ಹಿನ್ನೆಲೆ: ಚಿಂತಾಮಣಿ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಸೈಯದ್ ಮಲಿಕ್ ಪಾಷಾ ಎಂಬುವರು ಚಿಕ್ಕಬಳ್ಳಾಪುರ ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆ ಕುರಿತು ಮಾಹಿತಿ ಹಕ್ಕು ಕಾಯಿದೆ ಅಡಿ ಮಾಹಿತಿ ಪಡೆದುಕೊಂಡಿದ್ದರು. ಮಾಹಿತಿಯ ಆಧಾರದಲ್ಲಿ ಕೆಲ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪದಲ್ಲಿ ನೇರವಾಗಿ ಸತ್ರ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ಆದರೆ, ದೂರು ದಾಖಲಿಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿಯನ್ನೂ ಪಡೆದಿರಲಿಲ್ಲ. ದೂರಿನ ವಿಚಾರಣೆ ನಡೆಸಿದ ಸತ್ರ ನ್ಯಾಯಾಲಯ ಅರ್ಜಿದಾರರ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ 2021ರ ಡಿಸೆಂಬರ್ 7ರಂದು ಎಸಿಬಿಗೆ ಆದೇಶಿಸಿತ್ತು. ಅದರ ಅನುಸಾರ ಅರ್ಜಿದಾರ ಡಾ.ವಿ ಅಶೋಕ್ ಸೇರಿ ಇತರ ಸರ್ಕಾರಿ ಅಧಿಕಾರಿಗಳ ವಿರುದ್ಧ ಎಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.