

ಯುವಕನೊಬ್ಬನ ಆತ್ಮಹತ್ಯೆ ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸಲು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾಗೊಳಿಸಿದ್ದು, ದುಬಾರಿ ದಂಡ ವಿಧಿಸುವುದರಿಂದ ವಿನಾಯಿತಿ ನೀಡಿ ಕೃಷ್ಣಗೆ ಎಚ್ಚರಿಕೆ ನೀಡಿದೆ.
ಮೈಸೂರು ಜಿಲ್ಲೆಯ ಕೆ ಆರ್ ನಗರದಲ್ಲಿ ವೈಯಕ್ತಿಕ ಕಲಹದಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾದ ರಕ್ಷಿತ್ ಪ್ರಕರಣದಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯು ದೋಷಪೂರಿತವಾಗಿದ್ದು, ಅಮಾಯಕರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಹೀಗಾಗಿ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಿ, ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕು ಮತ್ತು ಅಮಾಯಕರಿಗೆ ಪರಿಹಾರ ನೀಡಲು ನಿರ್ದೇಶಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
“ಹಾಲಿ ಪ್ರಕರಣದಲ್ಲಿ ಯಾವುದೇ ಹಕ್ಕನ್ನು ಕಸಿಯಲಾಗಿಲ್ಲ. ವ್ಯಕ್ತಿಗತ ಅಥವಾ ವೈಯಕ್ತಿಕ ಅಹವಾಲನ್ನು ಪ್ರಕರಣದಲ್ಲಿ ಮುಂದು ಮಾಡಿಲ್ಲ. ಬದಲಿಗೆ ಸಾರ್ವಜನಿಕವಾದ ತನಿಖೆ ಮತ್ತು ಆರೋಪ ಪಟ್ಟಿಯ ಸಿಂಧುತ್ವವನ್ನು ಪ್ರಶ್ನಿಸಲಾಗಿದೆ. ಮೂಲಭೂತ ಅಥವಾ ಶಾಸನಬದ್ಧ ಹಕ್ಕಿನ ಉಲ್ಲಂಘನೆಯಾಗದ ಹೊರತು ಈ ನ್ಯಾಯಾಲಯದ ವ್ಯಾಪ್ತಿ ಚಲಾಯಿಸಲು ಕೋರಲಾಗದು. ಮೂರನೇ ವ್ಯಕ್ತಿಯ ಕೋರಿಕೆಯಂತೆ ಈ ಘನ ನ್ಯಾಯಾಲಯದ ವಿಶೇಷ ವ್ಯಾಪ್ತಿಯನ್ನು ಸಾಮಾನ್ಯ ಅಹವಾಲು ಅಥವಾ ಕ್ರಿಮಿನಲ್ ತನಿಖೆಯ ಮೇಲ್ವಿಚಾರಣೆಗೆ ಅನ್ವಯಿಸಲಾಗದು. ಮೂರನೇ ವ್ಯಕ್ತಿಯು ಆಕ್ಷೇಪಿತ ಕ್ರಿಮಿನಲ್ ಪ್ರಕರಣದಲ್ಲಿ ಯಾವುದೇ ಸಂಬಂಧ ಹೊಂದಿಲ್ಲ. ಇಂಥ ಅರ್ಜಿಗಳನ್ನು ಪುರಸ್ಕರಿಸಿದರೆ ಕ್ರಿಮಿನಲ್ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಕ್ಕೆ ಬಾಗಿಲು ತೆರೆದಂತಾಗಲಿದೆ. ಇದರಿಂದ ಕ್ರಿಮಿನಲ್ ವಿಚಾರಣೆಯ ಶಾಸನಬದ್ಧ ಚೌಕಟ್ಟಿಗೆ ಚ್ಯುತಿ ಮಾಡಿದಂತಾಗಲಿದೆ” ಎಂದು ನ್ಯಾಯಾಲಯ ಹೇಳಿದೆ.
“ಆಕ್ಷೇಪಿತ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಗಳು ಆರೋಪ ಪಟ್ಟಿಯನ್ನು ಪ್ರಶ್ನಿಸಿಲ್ಲ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯಡಿ ಆರೋಪಿಗಳು ಆರೋಪ ಮುಕ್ತಿ, ಪ್ರಕರಣ ರದ್ದು ಸೇರಿ ಹಲವು ಪರಿಹಾರ ಪಡೆಯಬಹುದು. ಬಾದಿತರು ಯಾವುದೇ ಪ್ರಶ್ನೆ ಮಾಡದಿರುವಾಗ ಮೂರನೇ ವ್ಯಕ್ತಿಯು ಹೆಚ್ಚಿನ ತನಿಖೆ ಮತ್ತು ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅನುಮತಿಸಲಾಗದು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
“ಅರ್ಜಿದಾರರಿಗೆ ಹಕ್ಕು ಇಲ್ಲದ ಪ್ರಕರಣದಲ್ಲಿ ಸಂವಿಧಾನದ 226ನೇ ವಿಧಿಯಡಿ ಅರ್ಜಿ ಸಲ್ಲಿಸುತ್ತಿರುವುದಕ್ಕೆ ನ್ಯಾಯಾಲಯವು ಹಲವು ಬಾರಿ ಎಚ್ಚರಿಸಿದೆ. ಇಂಥ ಅರ್ಜಿಗಳನ್ನು ಪುರಸ್ಕರಿಸುವುದರಿಂದ ಸಾಂವಿಧಾನಿಕ ನ್ಯಾಯಾಲಯಗಳ ಹೊರೆ ಹೆಚ್ಚಾಗುವುದಲ್ಲದೇ ಬಾಕಿ ಇರುವ ಕ್ರಿಮಿನಲ್ ಪ್ರಕ್ರಿಯೆಯಲ್ಲಿ ಅನಗತ್ಯವಾಗಿ ಮೂಗು ತೂರಿಸಿದಂತಾಗಲಿದೆ. ಹೀಗಾಗಿ, ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಹಾಲಿ ಅರ್ಜಿಯು ಸ್ಪಷ್ಟವಾಗಿ ನ್ಯಾಯಾಲಯದ ವಿಶೇಷ ವ್ಯಾಪ್ತಿಯ ದುರ್ಬಳಕೆಯಾಗಿದೆ. ಇಂಥ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಕೆ ಮಾಡುವುದನ್ನು ತಡೆಯಲು ಈ ಘನ ನ್ಯಾಯಾಲಯವು ದುಬಾರಿ ದಂಡ ವಿಧಿಸಿ, ಸಮರ್ಥಿಸಬಹುದಿತ್ತು. ಇದನ್ನು ಮಾಡದೇ ಅರ್ಜಿದಾರ ಸ್ನೇಹಮಯಿ ಕೃಷ್ಣ ಅವರನ್ನು ಮುಂದೆ ಇಂಥ ಕೃತ್ಯದಲ್ಲಿ ತೊಡಗದಂತೆ ಎಚ್ಚರಿಸಲು ಬಯಸುತ್ತದೆ” ಎಂದು ಹೇಳಿ, ಅರ್ಜಿ ವಜಾಗೊಳಿಸಿದೆ.
ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳ ನಡುವಿನ ಕಲಹದಲ್ಲಿ ರಕ್ಷಿತ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಸಂಬಂಧ ಐವರು ಆರೋಪಿಗಳ ವಿರುದ್ಧ ಮೈಸೂರು ಗ್ರಾಮಾಂತರದ ಸಾಲಿಗ್ರಾಮ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 504, 306, 34ರ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಸಕ್ಷಮ ನ್ಯಾಯಾಲಯಕ್ಕೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಿ, ಹೊಸದಾಗಿ ಆರೋಪ ಪಟ್ಟಿ ಸಲ್ಲಿಸಬೇಕು. ಅಮಾಯಕ ಆರೋಪಿಗಳಿಗೆ ಪರಿಹಾರ ನೀಡಲು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಬೇಕು ಎಂದು ಸ್ನೇಹಮಯಿ ಕೃಷ್ಣ ಕೋರಿದ್ದರು.