

ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಅವರ ಹಲವು ಕೋಟಿ ಮೌಲ್ಯದ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಮಟ್ಟುಗೋಲು ಹಾಕಿಕೊಂಡಿದ್ದನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ರೂಪಗೊಂಡಿರುವ ಮೇಲ್ಮನವಿ ನ್ಯಾಯಮಂಡಳಿ ಎತ್ತಿ ಹಿಡಿದಿದೆ.
ಜಾರಿ ನಿರ್ದೇಶನಾಲಯವು ಚಿದಂಬರಂ ಅವರ ಹಲವಾರು ಬ್ಯಾಂಕ್ ಖಾತೆಗಳನ್ನು ಮತ್ತು ದಕ್ಷಿಣ ದೆಹಲಿಯ ಆಸ್ತಿಯಲ್ಲಿನ ಅವರ ಪಾಲನ್ನು ಅಕ್ಟೋಬರ್ 10, 2018 ರಂದು ಮುಟ್ಟುಗೋಲು ಹಾಕಿಕೊಂಡಿತ್ತು. ಈ ತಾತ್ಕಾಲಿಕ ಮುಟ್ಟುಗೋಲು ಆದೇಶವನ್ನು ಮಾರ್ಚ್ 29, 2019 ರಂದು ನ್ಯಾಯಮಂಡಳಿ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಕಾರ್ತಿ ಮೇಲ್ಮನವಿ ನ್ಯಾಯಮಂಡಳಿಯ ಕದ ತಟ್ಟಿದ್ದರು.
ಮೇಲ್ಮನವಿ ನ್ಯಾಯಮಂಡಳಿಯ ಸದಸ್ಯರಾದ ಬಾಲೇಶ್ ಕುಮಾರ್ ಮತ್ತು ರಾಜೇಶ್ ಮಲ್ಹೋತ್ರಾ ಅವರಿದ್ದ ಪೀಠ ಅಕ್ಟೋಬರ್ 29ರಂದು ಮೇಲ್ಮನವಿಯನ್ನು ತಿರಸ್ಕರಿಸಿದೆ.
ಮುಟ್ಟುಗೋಲು ಹಾಕಿಕೊಂಡ 365 ದಿನಗಳ ನಂತರ ಜಾರಿ ನಿರ್ದೇಶನಾಲಯವು ತಮ್ಮ ವಿರುದ್ಧ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ದೂರು ದಾಖಲಿಸಿರುವುದರಿಂದ ಮುಟ್ಟುಗೋಲು ಆದೇಶ ಕಾನೂನುಬಾಹಿರ ಎಂಬ ಕಾರ್ತಿ ಅವರ ವಾದವನ್ನು ನ್ಯಾಯಮಂಡಳಿ ತಿರಸ್ಕರಿಸಿದೆ. ಕೋವಿಡ್ ಇದ್ದುದರಿಂದ ವಿಳಂಬಕ್ಕೆ ಸುಪ್ರೀಂ ಕೋರ್ಟ್ ವಿನಾಯಿತಿ ನೀಡಿದೆ ಎಂಬ ಇ ಡಿ ವಾದವನ್ನು ಅದು ಪುರಸ್ಕರಿಸಿದೆ.
ಕೋವಿಡ್ ಲಾಕ್‌ಡೌನ್ ವೇಳೆ ತನಿಖಾಧಿಕಾರಿಗಳು ಸಾಕ್ಷಿಗಳನ್ನು ಭೇಟಿ ಮಾಡಲು ಅಥವಾ ಅವರ ಹೇಳಿಕೆಗಳನ್ನು ದಾಖಲಿಸಲು ಅವಕಾಶ ಇರಲಿಲ್ಲ. ಮಾನವ ಸಂಪರ್ಕದಿಂದಲೂ ಜೀವಕ್ಕೆ ಅಪಾಯ ಒದಗುವ ಸ್ಥಿತಿ ಇದ್ದಿದ್ದರಿಂದ ಸಾಕ್ಷಿಗಳಿಗೆ ಸಮನ್ಸ್ ನೀಡಿದರೂ ಅವರು ಹೇಳಿಕೆ ನೀಡಲು ನಿರಾಕರಿಸುತ್ತಿದ್ದರು. ಆದ್ದರಿಂದ ಕೋವಿಡ್ 19 ಕಾರಣಕ್ಕೆ ತನಿಖೆಯ ವೇಗದ ಮೇಲೆ ಪರಿಣಾಮ ಉಂಟಾಗಿರುವುದನ್ನು ಪರಿಗಣಿಸುವುದು ಅಗತ್ಯ ಎಂದು ನ್ಯಾಯಾಲಯ ಹೇಳಿದೆ.
ಅಂತಿಮವಾಗಿ, ಅದು ಚಿದಂಬರಂ ಅವರ ಮೇಲ್ಮನವಿಯನ್ನು ವಜಾಗೊಳಿಸಿತಾದರೂ ವಿಜಯ್ ಮದನ್‌ಲಾಲ್ ಚೌಧರಿ ಇತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಪ್ರಕಾರ, ಜಾರಿ ನಿರ್ದೇಶನಾಲಯ "ಅಸಾಧಾರಣ ಕಾರಣಗಳಿದ್ದರೆ ಮಾತ್ರ ಮುಟ್ಟುಗೋಲು ಆಸ್ತಿಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಬಹುದು" ಎಂದಿತು.