ಐಫೋನ್‌ ಕಳವು ಪ್ರಕರಣ: ಫ್ಲಿಪ್‌ಕಾರ್ಟ್‌ನ ಇಬ್ಬರು ಉದ್ಯೋಗಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

2022ರ ಜುಲೈ 19ರಂದು ಕಳ್ಳತನ ನಡೆದಿದೆ ಎನ್ನಲಾಗಿದ್ದು, ಆಗಸ್ಟ್‌ 4ರಂದು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಅರ್ಜಿದಾರರ ವಿರುದ್ಧ ಸಂದೇಹದ ಮೇಲೆ ದೂರು ದಾಖಲಿಸಲಾಗಿತ್ತು.
ಐಫೋನ್‌ ಕಳವು ಪ್ರಕರಣ: ಫ್ಲಿಪ್‌ಕಾರ್ಟ್‌ನ ಇಬ್ಬರು ಉದ್ಯೋಗಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಗೋದಾಮಿನಲ್ಲಿದ್ದ 21 ಐಫೋನ್‌ಗಳ ಕಳವು ಪ್ರಕರಣದಲ್ಲಿ ಫ್ಲಿಪ್‌ಕಾರ್ಟ್ ಸಂಸ್ಥೆಯ ಇಬ್ಬರು ಉದ್ಯೋಗಿಗಳಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಕೋಲಾರ ಜಿಲ್ಲೆಯ ಮಾಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿಗಳಾಗಿರುವ ಫ್ಲಿಪ್‌ಕಾರ್ಟ್‌ ಸಂಸ್ಥೆಯ ಮಾಲೂರು ಸಮೀಪ ಮಾರಸಂದ್ರದ ವ್ಯವಸ್ಥಾಪಕ ಸಿ ವಿ ರಾಘವೇಂದ್ರ ಹಾಗೂ ಸಹಾಯಕ ವ್ಯವಸ್ಥಾಪಕ ಶ್ರೀರಾಮ ನಂಧಿನ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

ಅರ್ಜಿದಾರರು 15 ದಿನಗಳ ಒಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಶರಣಾಗಬೇಕು. ತನಿಖಾಧಿಕಾರಿ ಆರೋಪಿಗಳನ್ನು ಬಂಧಿಸಿದ ಸಂದರ್ಭದಲ್ಲಿ ಇಬ್ಬರಿಂದಲೂ ತಲಾ 1 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಒಬ್ಬರ ಶೂರಿಟಿ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದಿರುವ ನ್ಯಾಯಾಲಯವು ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು, ತನಿಖೆಯ ಸಂದರ್ಭದಲ್ಲಿ ತನಿಖಾಧಿಕಾರಿ ಸೂಚಿಸಿದಾಗಲೆಲ್ಲ ಹಾಜರಾಗಬೇಕು, ಅಂತಿಮ ವರದಿ ಸಲ್ಲಿಕೆಯಾಗುವವರೆಗೆ ತಿಂಗಳಿಗೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗಿ ಸಹಿ ಹಾಕಬೇಕು, ವಿಚಾರಣಾಧೀನ ನ್ಯಾಯಾಲಯದ ಅನುಮತಿ ಇಲ್ಲದೆ ವ್ಯಾಪ್ತಿ ಬಿಟ್ಟು ತೆರಳಬಾರದು ಎಂದು ಆರೋಪಿಗಳಿಗೆ ಷರತ್ತುಗಳನ್ನು ವಿಧಿಸಿದೆ.

2022ರ ಜುಲೈ 19ರಂದು ಕಳ್ಳತನ ನಡೆದಿದೆ ಎನ್ನಲಾಗಿದ್ದು, ಆಗಸ್ಟ್‌ 4ರಂದು ದೂರು ದಾಖಲಿಸಲಾಗಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಅರ್ಜಿದಾರರ ವಿರುದ್ಧ ಸಂದೇಹದ ಮೇಲೆ ದೂರು ದಾಖಲಿಸಲಾಗಿದೆ. ಮೇಲಾಗಿ ಗೋದಾಮಿನ ಭದ್ರತಾ ಅಧಿಕಾರಿಯೇ ದೂರುದಾರರಾಗಿದ್ದಾರೆ. ಗೋದಾಮು ಪ್ರವೇಶಿಸುವಾಗ ಹಾಗೂ ನಿರ್ಗಮಿಸುವಾಗ ತಪಾಸಣೆ ನಡೆಸಲಾಗುತ್ತದೆ. ಹೀಗಿರುವಾಗ, ಐಫೋನ್‌ಗಳು ಗೋದಾಮಿನಿಂದ ಹೊರ ಹೋಗಿದ್ದಾದರೂ ಹೇಗೆ ಎಂಬ ಬಗ್ಗೆ ಭದ್ರತೆಯ ಮೇಲ್ವಿಚಾರಣೆ ವಹಿಸಿದ್ದ ದೂರುದಾರರೇ ವಿವರಣೆ ನೀಡಬೇಕಾಗುತ್ತದೆ. ಆದರೆ, ಭದ್ರತೆ ಒದಗಿಸುವ ತಮ್ಮ ಕರ್ತವ್ಯದಲ್ಲಿ ಆಗಿರುವ ಲೋಪದ ಬಗ್ಗೆ ಯಾವುದೇ ವಿವರಣೆಯನ್ನು ಅವರು ನೀಡಿಲ್ಲ. ಅರ್ಜಿದಾರರು ಗೋದಾಮಿನಲ್ಲಿ ಐಫೋನ್‌ ಬಾಕ್ಸ್‌ಗಳನ್ನು ವಿಂಗಡಿಸುತ್ತಿದ್ದರು ಎಂಬ ಒಂದೇ ಕಾರಣಕ್ಕೆ ಅವರ ವಿರುದ್ಧ ಸಂಶಯದಲ್ಲಿ ದೂರು ದಾಖಲಿಸಲಾಗಿದೆ. ಆದರೆ, ಅವರೇ ಐಫೋನ್‌ಗಳನ್ನು ಕದ್ದಿದ್ದಾರೆ ಎನ್ನುವುದನ್ನು ತೋರಿಸುವ ಯಾವುದೇ ದಾಖಲೆಗಳು ಲಭ್ಯವಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಕೋಲಾರದ ಮಾಲೂರಿನಲ್ಲಿರುವ ಗೋದಾಮಿನಿಂದ 21 ಐಫೋನ್‌-12 ಮೊಬೈಲ್‌ಗಳು ಕಳವಾಗಿವೆ ಎಂದು ಭದ್ರತಾ ಮೇಲ್ವಿಚಾರಕ ಕೆ ಕೆ ಚಂದ್ರಕಾಂತ್ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ, ಕಳವಾಗುವ ಮುನ್ನ ಐಫೋನ್‌ಗಳನ್ನು ಅರ್ಜಿದಾರರೇ ವಿಂಗಡಣೆ ಮಾಡುತ್ತಿದ್ದದ್ದು ಕಂಡು ಬಂದಿತ್ತು. ಆದ್ದರಿಂದ, ಅರ್ಜಿದಾರರ ಬಗ್ಗೆ ಸಂದೇಹ ವ್ಯಕ್ತಪಡಿಸಿ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲೇ ಕಳ್ಳತನ ಮಾಡಿದ ಆರೋಪದಡಿಯಲ್ಲಿ ದೂರು ದಾಖಲಿಸಲಾಗಿತ್ತು. ಬಂಧನ ಭೀತಿ ಎದುರಿಸುತ್ತಿದ್ದ ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

Related Stories

No stories found.
Kannada Bar & Bench
kannada.barandbench.com