ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ವಿಕಾಸ್‌ ಕುಮಾರ್‌ ನೇಮಕ: ಸರ್ಕಾರ, ಆರ್‌ಸಿಬಿ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್‌

“ಸಿಎಟಿ ಆದೇಶವು ಅನ್ವಯಿಸುತ್ತದೋ.. ಬಿಡುತ್ತದೋ.. ನ್ಯಾಯಾಲಯದ ಮುಂದೆ ಇರದ ವ್ಯಕ್ತಿಯ ವಿರುದ್ಧ ಆ ಹೇಳಿಕೆ ನೀಡಬಹುದೇ?” ಎಂದು ಧ್ಯಾನ್‌ ಅವರನ್ನು ನ್ಯಾಯಾಲಯ ಪ್ರಶ್ನಿಸಿತು.
ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ವಿಕಾಸ್‌ ಕುಮಾರ್‌ ನೇಮಕ: ಸರ್ಕಾರ, ಆರ್‌ಸಿಬಿ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್‌
Published on

ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ವಿಕಾಸ್‌ ಅವರನ್ನು ಆಂತಕರಿಕ ಭದ್ರತಾ ವಿಭಾಗದ ಐಜಿಪಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿತು.

ಇದನ್ನು ಪರಿಗಣಿಸಿದ ನ್ಯಾಯಾಲಯವು ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ಅವರ ಅಮಾನತನ್ನು ಬದಿಗೆ ಸರಿಸಿದ್ದ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಸಿಎಟಿ ಆದೇಶದಲ್ಲಿ ಆಕ್ಷೇಪಾರ್ಹವಾದ ಅಂಶಗಳನ್ನು ತೆಗೆಯುವಂತೆ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್‌ ಮತ್ತು ಟಿ ಎಂ ನದಾಫ್‌ ಅವರ ವಿಭಾಗೀಯ ಪೀಠ ಇತ್ಯರ್ಥಪಡಿಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾ. ಪಂಡಿತ್‌ ಅವರು “ಪೊಲೀಸ್‌ ಅಧಿಕಾರಿಗಳ ಮನವಿಯ ಕುರಿತು ಯಾವ ಆದೇಶ ಮಾಡಲಾಗಿದೆ” ಎಂದು ಸರ್ಕಾರವನ್ನು ಪ್ರಶ್ನಿಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪಿ ಎಸ್‌ ರಾಜಗೋಪಾಲ್‌ ಅವರು “ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದಿದ್ದು, ಅವರಿಗೆ ಹುದ್ದೆ ತೋರಿಸಲಾಗಿದೆ. ಇಂದು ಬೆಳಿಗ್ಗೆ ವಿಕಾಸ್‌ ಕುಮಾರ್‌ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ” ಎಂದರು.

ಆಗ ಮಧ್ಯಪ್ರವೇಶಿಸಿದ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ ಅವರು “ವಿಕಾಸ್‌ ಕುಮಾರ್‌ ಅವರನ್ನು ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಹುದ್ದೆಗೇ ನೇಮಕ ಮಾಡುತ್ತಾರೆ ಎಂದು ನಿರೀಕ್ಷೆ ಹೊಂದಿದ್ದೆವು” ಎಂದರು.

ಆಗ ರಾಜಗೋಪಾಲ್‌ ಅವರು “ನಿಮ್ಮ ನಿರೀಕ್ಷೆಗಳು ಅಪ್ರಾಯೋಗಿಕವಾಗಿವೆ” ಎಂದರು. ಇದಕ್ಕೆ ಪೀಠವು “ಸರ್ಕಾರಿ ಅಧಿಕಾರಿಗಳು ಅಂತ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅವರನ್ನು ನಿಂದಿಸಲಾಗದು” ಎಂದರು. ಆಗ ರಾಜಗೋಪಾಲ್‌ ಅವರು “ಆದರೆ, ಅದು ಶಾಸನಬದ್ದವೇ ಎಂಬುದು ಪ್ರಶ್ನೆಯಾಗಿದೆ” ಎಂದರು. ಇದಕ್ಕೆ ಪೀಠವು “ಅದು ಶಾಸನಬದ್ಧ ಎಂದೇ ಅವರು ವಾದಿಸುತ್ತಾರೆ” ಎಂದು ನಕ್ಕಿತು.

ಮುಂದುವರಿದು, “ಸರ್ಕಾರ ಆದೇಶ ಮಾಡಿರುವುದರಿಂದ ರಿಟ್‌ ಅರ್ಜಿಯಲ್ಲಿ ಏನು ಉಳಿಯಿತು” ಎಂದು ಪೀಠ ಕೇಳಿತು. ಅದಕ್ಕೆ ಧ್ಯಾನ್‌ ಚಿನ್ನಪ್ಪ ಅವರು “ಅರ್ಜಿಯನ್ನು ಮುಕ್ತಾಯಗೊಳಿಸಬಹುದು” ಎಂದರು.

ಈ ನಡುವೆ ರಾಜಗೋಪಾಲ್‌ ಅವರು “ಸರ್ಕಾರದ ಅಮಾನತು ಆದೇಶವನ್ನು ಸಿಎಟಿ ಬದಿಗೆ ಸರಿಸಿದೆ. ಆದರೆ, ಆಕ್ಷೇಪಾರ್ಹವಾದ ಆದೇಶದಲ್ಲಿ ಮಾಡಿರುವ ಕೆಲವು ಅಂಶಗಳು ಇಲಾಖಾ ವಿಚಾರಣೆಯ ಮೇಲೆ ಪರಿಣಾಮ ಉಂಟು ಮಾಡುತ್ತವೆ” ಎಂದರು. ಆಗ ಪೀಠವು “ಸಿಎಟಿ ಆದೇಶದಲ್ಲಿನ ಅಭಿಪ್ರಾಯಗಳು ಅಮಾನತು ಪರಿಗಣಿಸುವುದಕ್ಕೆ ಸಂಬಂಧಿಸಿದ್ದಾಗಿವೆ. ಅದಕ್ಕೆ ಸೀಮಿತವಾಗಿ ಆದೇಶದಲ್ಲಿ ಸ್ಪಷ್ಟಪಡಿಸಲಾಗುವುದು” ಎಂದರು.

ಮುಂದುವರಿದು, “ಇಲಾಖಾ ವಿಚಾರಣೆಯನ್ನು ನಡೆಸಲು ವರ್ಷಗಳನ್ನು ತೆಗೆದುಕೊಂಡರೆ…” ಎಂದು ಸರ್ಕಾರವನ್ನು ಕುರಿತು ಆಕ್ಷೇಪಿಸಿತು. ಆಗ ರಾಜಗೋಪಾಲ್‌ ಅವರು “ಇಲಾಖಾ ವಿಚಾರಣೆ ವಿಳಂಬವಾಗುವುದಿಲ್ಲ. ಏಕೆಂದರೆ, ನಮ್ಮ ಅಮಾನತು ಆದೇಶಕ್ಕೆ ಒಪ್ಪಿಗೆ ನೀಡುವಾಗ ಕೇಂದ್ರ ಸರ್ಕಾರವು ಆಗಸ್ಟ್‌ 3ರೊಳಗೆ ಆರೋಪ ಪಟ್ಟಿ ಸಲ್ಲಿಸಬೇಕು ಎಂದಿದೆ” ಎಂದರು.

ಇದಕ್ಕೆ ಧ್ಯಾನ್‌ ಚಿನ್ನಪ್ಪ ಅವರು “ಸಿಎಟಿ ಆದೇಶವನ್ನು ಪರಿಗಣಿಸಿ ವಿಕಾಸ್‌ ಅವರಿಗೆ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನೂ ನೀಡಬೇಕು” ಎಂದರು. ಇದನ್ನು ಆಲಿಸಿದ ಪೀಠವು “ಸೂಕ್ತ ಆದೇಶ ಮಾಡಲಾಗುವುದು ಎಂದಿತು.

ಆಗ ಆರ್‌ಸಿಬಿ ಪರ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಆರ್‌ಸಿಬಿಯು ಪಕ್ಷಕಾರನಾಗಿಲ್ಲದಿದ್ದರೂ ಆದೇಶದಲ್ಲಿ ಆಕ್ಷೇಪಾರ್ಹವಾದ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ” ಎಂದರು.

ಈ ವೇಳೆ ಚಿನ್ನಪ್ಪ ಅವರು “ಸಿಎಟಿ ಆದೇಶದಲ್ಲಿನ ಅಂಶಗಳು ಆರ್‌ಸಿಬಿಗೆ ಅನ್ವಯಿಸುವುದಿಲ್ಲ. ಹೀಗಾಗಿ, ಅದನ್ನು ತೆಗೆಯಲಾಗದು. ಆರ್‌ಸಿಬಿ ಹೇಳುವ ಅಂಶಗಳನ್ನು ತೆಗೆಯುವುದು ಎಂದರೆ, ಸಿಎಟಿ ಆದೇಶವನ್ನು ಬದಿಗೆ ಸರಿಸುವುದು ಎಂಬಂತಾಗಲಿದೆ” ಎಂದರು.

ಇದಕ್ಕೆ ಪೀಠವು “ಇದು ಅನ್ವಯಿಸುತ್ತದೋ.. ಬಿಡುತ್ತದೋ.. ನ್ಯಾಯಾಲಯದ ಮುಂದೆ ಇರದ ವ್ಯಕ್ತಿಯ ವಿರುದ್ಧ ಆ ಹೇಳಿಕೆ ನೀಡಬಹುದೇ?” ಎಂದು ಧ್ಯಾನ್‌ ಅವರನ್ನು ಪ್ರಶ್ನಿಸಿತು.

ಅದಕ್ಕೆ ಧ್ಯಾನ್‌ ಚಿನ್ನಪ್ಪ ಅವರು “ರಾಜ್ಯ ಸರ್ಕಾರವು ನೀಡಿದ ಹೇಳಿಕೆಯನ್ನು ಆಧರಿಸಿ ಸಿಎಟಿಯು ಆ ಅಂಶಗಳನ್ನು ಉಲ್ಲೇಖಿಸಿದೆ” ಎಂದರು. ಇದನ್ನು ಆಲಿಸಿದ ಪೀಠವು ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಆದೇಶಿಸಿತು.

Kannada Bar & Bench
kannada.barandbench.com